ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಶಿಷ್ಯೆ!

By Web DeskFirst Published Dec 12, 2019, 7:58 AM IST
Highlights

ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಮಂಜುಳಾ ಶ್ರಾಫ್‌| ದೊಡ್ಡ ದೊಡ್ಡ ಉದ್ಯಮಿಗಳ ಪಟ್ಟಿಯನ್ನೇ ನೀಡಿರುವ ನಿತ್ಯಾ ಭಕ್ತೆ| ಶರ್ಮಾಗೂ ವಿದೇಶಾಂಗ ಸಚಿವ ಹುದ್ದೆ ಆಫರ್‌ ಕೊಟ್ಟಿದ್ದ ನಿತ್ಯಾನಂದ| ನಿತ್ಯಾನಂದನ ಮಾಜಿ ಕಾರ್ಯದರ್ಶಿ ಜನಾರ್ಧನ ಶರ್ಮಾ ಆರೋಪ

ಮುಂಬೈ[ಡಿ.12]: ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆ ಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ‘ಸ್ವತಂತ್ರ ಹಿಂದೂ ರಾಷ್ಟ್ರ’ ಕೈಲಾಸ ನಿರ್ಮಾಣದ ಹಿಂದೆ ಮಹಿಳಾ ಉದ್ಯಮಿಯೊಬ್ಬರ ಪ್ರೇರಣಾ ಶಕ್ತಿ ಮತ್ತು ಆರ್ಥಿಕ ಶಕ್ತಿ ಪ್ರಮುಖವಾಗಿ ಕೆಲಸ ಮಾಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಹಿಂದೆ ನಿತ್ಯಾನಂದ ಆಪ್ತ ಕಾರ್ಯದರ್ಶಿಯಾಗಿದ್ದು, ಇದೀಗ ತನ್ನ ಪುತ್ರಿಯರನ್ನೇ ನಿತ್ಯಾ ಅಪಹರಿಸಿದ್ದಾನೆ ಎಂದು ದೂರು ನೀಡಿರುವ ಬೆಂಗಳೂರು ಮೂಲದ ಜನಾರ್ಧನ ಶರ್ಮಾ, ನಿತ್ಯಾನಂದನ ಆರ್ಥಿಕ ಶಕ್ತಿಯ ಕುರಿತ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಈ ಕುರಿತು ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಜನಾರ್ಧನ ಶರ್ಮಾ, ‘ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಕಲೋರೆಕ್ಸ್‌ ಫೌಂಡೇಶನ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಪೂಜಾ ಶ್ರಾಫ್‌ ಎಂಬುವವರು ಕನಿಷ್ಠ 5-6 ಕೋಟಿ ರು. ಹಣ ಕೊಟ್ಟಿದ್ದಾರೆ. ಈಕೆ ನಿತ್ಯಾನಂದನ ಅಪ್ಪಟ ಭಕ್ತೆ’ ಎಂದು ಹೇಳಿದ್ದಾರೆ.

ಅಲ್ಲದೆ ‘ಹಿಂದಿನ ಜನ್ಮದಲ್ಲಿ ನೀವು ರಾಜಮಾತೆ ಆಗಿದ್ದೀರಿ, ನಾನು ರಾಜಗುರು ಆಗಿದ್ದೆ ಎಂದೆಲ್ಲಾ ಹೇಳಿ ನಂಬಿಸಿರುವ ಮಂಜುಳಾ ಅವರನ್ನು ನಂಬಿಸಿರುವ ನಿತ್ಯಾನಂದ, ಮಹಿಳೆಯನ್ನು ಸಂಪೂರ್ಣ ವಶೀಕರಣ ಮಾಡಿಕೊಂಡಿದ್ದಾನೆ. ಅದಾದ ಬಳಿಕ ಮಂಜುಳಾ ಅವರು ಉದ್ಯಮ ವಲಯದಲ್ಲಿನ ತಮ್ಮ ಸ್ನೇಹಿತರ ಮೊಬೈಲ್‌ ಸಂಖ್ಯೆಗಳನ್ನೂ ನಿತ್ಯಾ ಆಶ್ರಮಕ್ಕೆ ನೀಡಿದ್ದಾರೆ. ಈ ಪೈಕಿ ಒಂದಷ್ಟುಜನರನ್ನು ತನ್ನ ಭಕ್ತರನ್ನಾಗಿ ಮಾಡಿಕೊಳ್ಳಲು ಯಶಸ್ವಿಯಾಗಿರುವ ನಿತ್ಯಾನಂದ ಮತ್ತು ಆತನ ಆಶ್ರಮದ ಸದಸ್ಯರು, ಅವರಿಂದ ಆಗಾಗ್ಗೆ ಭಾರೀ ಪ್ರಮಾಣದ ಹಣ ಸಂಗ್ರಹಿಸುತ್ತಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.

‘ವಿಶ್ವದ ಶ್ರೇಷ್ಠ ಹಾಗೂ ಪವಿತ್ರ ಹಿಂದೂ ರಾಷ್ಟ್ರ ಎಂದೆಲ್ಲಾ ಹೇಳಿ ಕೋಟ್ಯಾಂತರ ಹಣ ಪಡೆಯುತ್ತಿದ್ದ ನಿತ್ಯಾನಂದ, ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎಂದು ಹೇಳಿದರೆ ಜನ ದೇಣಿಗೆ ನೀಡುತ್ತಾರೆ ಎಂದು ನಂಬಿದ್ದ. ಅಲ್ಲದೇ ದೇಣಿಗೆ ನೀಡಿದವರನ್ನು ಕೈಲಾಸದ ಸಚಿವರನ್ನಾಗಿ ಮಾಡುತ್ತೇನೆ ಆಮೀಷ ಒಡ್ಡುತ್ತಿದ್ದ. ನನಗೂ ವಿದೇಶಾಂಗ ಖಾತೆ ನೀಡುವುದಾಗಿ ಹೇಳಿದ್ದ’ ಎಂದು ಶರ್ಮಾ ಹೇಳಿದ್ದಾರೆ.

ನಿಯಮಿತವಾಗಿ ಇಂಟರ್ನೆಟ್‌ನಲ್ಲಿ ವಿಡಿಯೋ ಅಪ್ಲೋಡ್‌ ಮಾಡುತ್ತಿರುವುದರಿಂದ ನಿತ್ಯನಂದನನ್ನು ಪತ್ತೆ ಹಚ್ಚುವ ಕೆಲಸ ಕಷ್ಟವೇನಲ್ಲ. ಆತನ ಆಶ್ರಮಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ತಿಳಿಯಬೇಕಾದರೆ, ಇಬ್ಬರು ಸಾದ್ವಿಗಳ ಫೋನ್‌ ಮಾಹಿತಿಯನ್ನು ಪಡೆದುಕೊಂಡರೆ ಸಾಕು ಎಂದು ಹೇಳಿದ್ದಾರೆ.

click me!