
ನವದೆಹಲಿ (ಸೆ.19): ಕೇಂದ್ರ ಸರ್ಕಾರದone nation one election ಪ್ರಸ್ತಾಪವನ್ನು ವಿಪಕ್ಷಗಳು ವ್ಯಾಪಕವಾಗಿ ತಿರಸ್ಕರಿಸಿವೆ. ಇದು ಅಪ್ರಾಯೋಗಿಕ ಮತ್ತು ಚೀಪ್ ಗಿಮಿಕ್ ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ಪರಿಕಲ್ಪನೆ ಅಪ್ರಾಯೋಗಿಕವಾಗಿದ್ದು, ಚುನಾವಣೆಗಳು ಸಮೀಪಿದ್ದಾಗ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಬಿಜೆಪಿ ಇಂತಹ ತಂತ್ರ ಹೂಡುತ್ತದೆ’ ಎಂದು ಟೀಕಿಸಿದ್ದಾರೆ.
ಇದಕ್ಕೆ ಜೆಎಂಎಂ ಸಚಿವೆ ಮಹುವಾ ಮಾಜಿ ಕೂಡ ದನಿಗೂಡಿಸಿದ್ದು, ‘ಇಂಥ ಯೋಜನೆಗಳ ಮೂಲಕ ಭಾರತದಲ್ಲಿ ಅಧಿಕಾರ ನಡೆಸುವ ಏಕೈಕ ಪಕ್ಷವಾಗಲು ಬಿಜೆಪಿ ಬಯಸುತ್ತಿದೆ. ಎನ್‌ಸಿಪಿ ಮತ್ತು ಶಿವಸೇನೆಯನ್ನು ವಿಭಜಿಸಿದಂತೆ ಜೆಎಂಎಂ ಸೇರಿದಂತೆ ಅನ್ಯ ಪ್ರಾದೇಶಿಕ ಪಕ್ಷಗಳನ್ನು ತೊಡೆದುಹಾಕಲು ಹವಣಿಸುತ್ತಿದೆ’ ಎಂದಿದ್ದಾರೆ.
‘ಹರ್ಯಾಣಾ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಳಲ್ಲಿ ಸೋಲುವ ಭಯದಲ್ಲಿರುವ ಬಿಜೆಪಿ, ಈಗಾಗಲೇ ಒಂದರ ಮೇಲೊಂದರಂತೆ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಮೈತ್ರಿ ಬಿದ್ದುಹೋಗುವ ಸಾಧ್ಯತೆಯಿದೆ. ಅದರಿಂದ ಗಾಬರಿಯಾಗಿ ಈ ಕ್ರಮ ಕೈಗೊಂಡಿದೆ’ ಎಂದು ಕಾಂಗ್ರೆಸ್ ನಾಯಕ ಹರೀಶ್ ರಾವತ್ ಮೂದಲಿಸಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಒಕ್ಕೂಟ ವ್ಯವಸ್ಥೆಯನ್ನು ನಾಶ ಪಡಿಸುವ ಮೂಲಕ ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಪ್ರಜಾಪ್ರಭುತ್ವವನ್ನು ರಾಜಿ ಮಾಡುವ ಪ್ರಯತ್ನ. ಆದ್ದರಿಂದಲೇ ಇದನ್ನು ನಾನು ವಿರೋಧಿಸುತ್ತೇನೆ. ಬಹು ಚುನಾವಣೆಗಳಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಮಾತ್ರ ತೊಂದರೆ. ಆದ್ದರಿಂದಲೇ ಒಂದು ದೇಶ, ಒಂದು ಚುನಾವಣೆಯನ್ನು ಜಾರಿ ಮಾಡಲು ಮುಂದೆ ಬಿದ್ದಿದ್ದಾರೆ.
-ಅಸಾದುದ್ದೀನ್ ಓವೈಸಿ, ಎಐಎಂಐಎ ಮುಖ್ಯಸ್ಥ
ಬಿಜೆಪಿಯ ಮತ್ತೊಂದು ಕಳಪೆ ಸಾಹಸ
ಒಂದು ರಾಷ್ಟ್ರ, ಒಂದು ಚುನಾವಣಾ ವಿಷಯ ಪ್ರಜಾಪ್ರಭುತ್ವವನ್ನು ವಿರೋಧಿಸುವ ಬಿಜೆಪಿಯ ಮತ್ತೊಂದು ಕಳಪೆ ಸಾಹಸ. ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಚುನಾವಣೆಗಳೊಂದಿಗೆ ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಏಕೆ ಘೋಷಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಒಂದೇ ಬಾರಿ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದೆ.
ಡೆರೆಕ್ ಒ‘ಬ್ರಿಯಾನ್, ಟಿಎಂಸಿ ಸಂಸದ
ಏಕ ಚುನಾವಣೆಗೆ ಎನ್‌ಡಿಎ ಮಿತ್ರರ ಬೆಂಬಲ
ನವದೆಹಲಿ: ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಸುವ ನರೇಂದ್ರ ಮೋದಿ ನೇತೃತ್ವದ ಮಹತ್ವಕಾಂಕ್ಷಿ ಯೋಜನೆ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದಕ್ಕೆ ಎನ್‌ಡಿಎ ಮೈತ್ರಿ ಕೂಟದ ಮಿತ್ರ ಪಕ್ಷಗಳು ಮೆಚ್ಚುಗೆ ಸೂಚಿಸಿವೆ. ಅಲ್ಲದೇ ನರೇಂದ್ರ ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾಗಿರುವ ಲೋಕ ಜನಶಕ್ತಿ, ಶಿವಸೇನಾ, ಜೆಡಿಯು, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಸ್ವಾಗತಿಸಿದ್ದು, ದೇಶದ ಹಿತಾಸಕ್ತಿ ಕಾಪಾಡಲು ಇದು ಐತಿಹಾಸಿಕ ಹೆಜ್ಜೆ ಎಂದಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಜಾರಿಗೆ 10 ಶಿಫಾರಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ