
ಆಂಧ್ರ ಪ್ರದೇಶ (ಸೆ.18) ಹಿಂದಿನ ವೈಎಸ್‌ಆರ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದರು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಭಾರೀ ಸಂಚಲನ ಮೂಡಿಸಿದೆ.
ಎನ್‌ಡಿಎ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳಗಿರಿಯ ಸಿಕೆ ಕನ್ವೆನ್ಷನ್ ಹಾಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳ ಸಭೆ ನಡೆಯಿತು. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಿಂದಿನ ಜಗನ್ ಸರ್ಕಾರ ತಿರುಮಲ ಪ್ರಸಾದ ಕಲಬೆರಕೆ ಮಾಡುವ ಮೂಲಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದು ಅಪವಿತ್ರಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಸಾಮಾನ್ಯವಾಗಿ ತಿರುಮಲ ಲಡ್ಡು ಪ್ರಸಾದಕ್ಕೆ ಶುದ್ಧ ಹಸುವಿನ ತುಪ್ಪ ಬಳಸಬೇಕು ಆದರೆ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವ ಮೂಲಕ ವೆಂಕಟೇಶ್ವರ ಸ್ವಾಮಿಗೆ ಅವಮಾನ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಎಲ್ಲ ಗುಣಮಟ್ಟದ ಪದಾರ್ಥಗಳೊಂದಿಗೆ ಲಡ್ಡು ಪ್ರಸಾದವನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ.
ಜಗನ್ ಅಕ್ರಮದ ಬಗ್ಗೆ ತನಿಖೆ:
ಇದೊಂದೇ ಅಲ್ಲ, ಕಳೆದ ವರ್ಷಗಳಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ಹಲವು ಅಕ್ರಮಗಳನ್ನು ಮಾಡಿದೆ. ಇಂತಹ ತಪ್ಪು ಮಾಡಿ ಹಣ ವಸೂಲಿ ಮಾಡಿದವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.
ತನ್ನ ಸರ್ಕಾರದಲ್ಲಿ ಅಣ್ಣಾ ಕ್ಯಾಂಟೀನ್ ರದ್ದು ಮಾಡುವ ಮೂಲಕ ಜಗನ್ ಕೆಟ್ಟ ಕೆಲಸ ಮಾಡಿದ್ದಾರೆ. ಜಗನ್ ಆಡಳಿತಾವಧಿಯಲ್ಲಿ ಅನೇಕ ಭ್ರಷ್ಟಾಚಾರವನ್ನು ಮಾಡಿದ್ದಾರೆ. ತಪ್ಪು ಮಾಡಿದವರನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು. ಇದೇ ವೇಳೆ ನಮ್ಮ ಸರ್ಕಾರದಲ್ಲಿ ಒಂದೇ ಒಂದು ಅಂತಹ ತಪ್ಪುಗಳಾಗಲು ಬಿಡುವುದಿಲ್ಲ. ಎಲ್ಲರೂ ಜಾಗರೂಕರಾಗಿರಬೇಕು. ಸಮ್ಮಿಶ್ರ ಸರ್ಕಾರ ಅ. 1 ರಿಂದ ಹೊಸ ಮದ್ಯ ನೀತಿ ಜಾರಿಗೆ ತರಲಿದೆ ಎನ್ನುವಷ್ಟರ ಮಟ್ಟಿಗೆ ಹಿಂದಿನ ಸರ್ಕಾರ ಮದ್ಯ ನೀತಿಯನ್ನು ಅವ್ಯವಸ್ಥೆಗೊಳಿಸಿದ್ದಾರೆ. ಮೈತ್ರಿ ಸರ್ಕಾರದ ಉತ್ತಮ ಕೆಲಸಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎಂದರು.
ಆಂಧ್ರ ಪ್ರದೇಶ ಅಭಿವೃದ್ಧಿಗೆ ಕೇಂದ್ರ ನೆರವು:
ಹಿಂದಿನ ಸರಕಾರ ಸಾಕಷ್ಟು ಹಣ ದುರುಪಯೋಗಪಡಿಸಿಕೊಂಡಿತ್ತು. ಕೇಂದ್ರ ನೀಡಿದ್ದ ಹಣವನ್ನೂ ಬೇರೆಡೆಗೆ ಬಳಸಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಖಜಾನೆಯಲ್ಲಿ ಹಣವೇ ಇರಲಿಲ್ಲ. ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಆದರೆ ನಾವು ಧೈರ್ಯದಿಂದ ಮುನ್ನಡೆಯುತ್ತಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ 20 ಲಕ್ಷ ಉದ್ಯೋಗ ನೀಡುವತ್ತ ಗಮನಹರಿಸಿದ್ದೇವೆ. ಮೂರೂ ಪಕ್ಷಗಳ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಆಂಧ್ರ ಪ್ರದೇಶದಲ್ಲಿ ಇಂತಹ ದೊಡ್ಡ ಯಶಸ್ಸಿನೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಇದು ನನ್ನ ಜೀವನದಲ್ಲಿ ಎಂದೂ ಕಂಡಿರದ ಸಾಧನೆ. ಅಲ್ಲದೆ ಕೇಂದ್ರ ಸರ್ಕಾರದ ಸಹಕಾರವಿಲ್ಲದಿದ್ದರೆ ನಮ್ಮ ರಾಜ್ಯದ ಅಭಿವೃದ್ಧಿಯೇ ಆಗುವುದಿಲ್ಲ. ಕೇಂದ್ರದ ನೆರವು ವೆಂಟಿಲೇಟರ್‌ನಲ್ಲಿರುವ ವ್ಯಕ್ತಿಗೆ ಆಮ್ಲಜನಕದಂತಿದೆ ಎಂದು ಚಂದ್ರಬಾಬು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ