ವಿಶ್ವದ ಅತೀ ಎತ್ತರದ ಯುದ್ಧಭೂಮಿ, ಸಂಪೂರ್ಣ ಮಂಜಿನಿಂದ ಆವೃತ, ಶುತ್ರಗಳ ದಾಳಿ ಜೊತೆಗೆ ಹಿಮಸ್ಫೋಟ, ಹಿಮಪಾತದ ಅಡೆತಡೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಅತ್ಯಂತ ಕಠಿಣ. ಇದೇ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಹಿಮಕುಸಿತ ಸಂಭವಿಸಿ 35 ಅಡಿ ಹಿಮದಡಿ ಸಿಲುಕಿದ ದೇಶದ ಹೆಮ್ಮೆಯ, ಕರ್ನಾಟಕದ ವೀರ ಯೋಧ ಲ್ಯಾನ್ಸ್‌ನಾಯಕ್ ಹನುಮಂತಪ್ಪ ಹುತಾತ್ಮ ದಿನದಂದು ಸುವರ್ಣನ್ಯೂಸ್.ಕಾಂ ನಮನ ಸಲ್ಲಿಸುತ್ತಿದೆ.
ಬೆಂಗಳೂರು(ಫೆ.11): ಇಡೀ ದೇಶವೆ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕಿ ಬರಲಿ ಎಂದು ಪ್ರಾರ್ಥಿಸಿತ್ತು. ಎಲ್ಲಾ ದೇವರಲ್ಲಿ ಒಂದೇ ಬೇಡಿಕೆ ಹನುಮಂತಪ್ಪ ಚೇತರಿಸಿಕೊಳ್ಳಲಿ ಎಂದಾಗಿತ್ತು. ಆದರೆ ಪ್ರಾರ್ಥನೆ ಫಲಿಸಲಿಲ್ಲ. 6 ದಿನ 35 ಅಡಿ ಆಳದ ಹಿಮದಡಿ, 3 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕರ್ನಾಟಕದ ವೀರ ಯೋಧ ಫೆಬ್ರವರಿ 11, 2016ರಲ್ಲಿ ಹುತಾತ್ಮರಾದರು.
ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್`ಗೆ ಮರಣೋತ್ತರ ಶೌರ್ಯ ಪ್ರಶಸ್ತಿ
ಫೆಬ್ರವರಿ 11, ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಹುತಾತ್ಮರಾದ ದಿನ. ಇಡೀ ದೇಶವೇ ಕಣ್ಣೀರ ಕಡಲಲ್ಲಿ ಮುಳುಗಿದ ದಿನ. ಭಾರತೀಯ ಸೇನೆಯ ಹೆಮ್ಮೆಯ ಪುತ್ರ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ ಕೊಪ್ಪದ್ ನಮ್ಮನ್ನಗಲಿ ಇಂದಿಗೆ 5 ವರ್ಷ.
ಸಿಯಾಚಿನ್ ಯುದ್ಧ ಭೂಮಿ ನಾವೆಲ್ಲ ಹಲವು ಬಾರಿ ಕೇಳಿದ್ದೇವೆ. ಕಾರಣ ಪಾಕಿಸ್ತಾನ, ಚೀನಾ ಜೊತೆ ಗಡಿ ಹಂಚಿಕೊಂಡಿರುವ ಅತೀ ದುರ್ಗಮ ಹಾಗೂ ಮೈನಸ್ ಡಿಗ್ರಿ ತಾಪಮಾನದ ಪ್ರದೇಶ. ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಪ್ಪದ್ 2015ರಲ್ಲಿ ಸಿಯಾಚಿನ್‌ಗೆ ನಿಯೋಜನೆಗೊಂಡರು.
ಸಿಯಾಚಿನ್ ಮಂಜುಗಡ್ಡೆ ವಲಯದಲ್ಲಿ ಕರ್ತವ್ಯ ನಿರತವಾಗಿದ್ದ ಭಾರತೀಯ ಯೋಧರ ಮೇಲೆ ಹಿಮಕುಸಿದಿತ್ತು. ಸಮುದ್ರಮಟ್ಟದಿಂದ 19,000 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಹಿಮ ಕುಸಿತ ಸಂಭವಿಸಿ ವೀರ ಯೋಧರು 35 ಅಡಿ ಆಳದಲ್ಲಿ ಸಿಲುಕಿಕೊಂಡರು. ದುರ್ಗಮ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣೆ ಅತೀ ದೊಡ್ಡ ಸವಾಲಾಯಿತು.
ಹಿಮದಡಿ ವೀರ ಯೋಧರು ಎಲ್ಲಿದ್ದಾರೆ ಅನ್ನೋ ಯಾವುದೇ ಸುಳಿವು ಇಲ್ಲ. ಸತತ 6 ದಿನದ ಕಾರ್ಯಚರಣೆ ಬಳಿಕ 35 ಅಡಿ ಆಳದಿಂದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ರಕ್ಷಿಸಲಾಯಿತು. ಬದುಕುಳಿದ ಏಕೈಕ ವೀರ ಯೋಧ ಹನುಂತಪ್ಪನನ್ನು ತಕ್ಷಣವೇ ಏರ್‌ಲಿಫ್ಟ್ ಮಾಡಿ ದೆಹಲಿಯ ಸೇನಾ ಆಸ್ಪತ್ರೆ ದಾಖಲಿಸಲಾಯಿತು.
L/Nk Hanumanthappa Koppad, 19 Madras lost his life on 11 Feb 2016 after being rescued 6days from beneath snow when avalanche struck post in at 19,600ft
The nation will remember his courage service & sacrifice pic.twitter.com/8EEBdVyl52
ಫೆಬ್ರವರಿ 9 ರಂದು ಆಸ್ಪತ್ರೆ ದಾಖಲಾದ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಕೋಮಾದಲ್ಲಿದ್ದ ಹನುಮಂತಪ್ಪ ಆರೋಗ್ಯ ವಿಚಾರಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ 3 ದಿನ ಕೋಮಾದಲ್ಲಿದ್ದ ಹನುಮಂತಪ್ಪ, ಬಹುಅಂಗಾಗ ವೈಕಲ್ಯದಿಂದ ಹುತಾತ್ಮರಾದರು.
ಈ ಹಿಮಕುಸಿತದಲ್ಲಿ ಕೊಪ್ಪದ್ ಜೊತೆ ಇನ್ನಿಬ್ಬರು ಕನ್ನಡಿಗರು ಸೇರಿದಂತೆ ಒಟ್ಟು 10 ವೀರ ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 11ರಂದು ಹುತಾತ್ಮರಾದ ಹನುಮಂತಪ್ಪ ಕೊಪ್ಪದ್ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿದೆ. ವಿಶೇಷ ಅಂದರೆ ಕೊಪ್ಪದ್ ಅವರನ್ನು ಪವಾಡ ಪುರುಷ ಎಂದೇ ಕರೆಯಲಾಗುತ್ತದೆ.