- ‘ಬಿಜೆಪಿ ಸೇರಿ, ಇಲ್ಲ ಸುಳ್ಳು ಕೇಸು, ಸಿಬಿಐ, ಇಡಿ ಎದುರಿಸಿ’
- ಬೇರೆ ಶಾಸಕರನ್ನು ಕರೆತಂದರೆ 25 ಕೋಟಿ ರೂ. ನೀಡುತ್ತೇವೆ
- ಬಿಜೆಪಿಯಿಂದ ಪಕ್ಷಾಂತರದ ಆಫರ್ ಎಂದ ಎಎಪಿ
ನವದೆಹಲಿ: ನಮ್ಮ ಪಕ್ಷದ ನಾಲ್ವರು ಶಾಸಕರಿಗೆ ತಲಾ 20 ಕೋಟಿ ಲಂಚದ ಆಫರ್ ನೀಡಿ ಪಕ್ಷಾಂತರ ಮಾಡುವಂತೆ ಬಿಜೆಪಿ ಒತ್ತಡ ಹೇರುತ್ತಿದೆ. ಪಕ್ಷಾಂತರ ಮಾಡದಿದ್ದರೆ ಸುಳ್ಳು ಕೇಸುಗಳು, ಸಿಬಿಐ ಹಾಗೂ ಇ.ಡಿ. ಎದುರಿಸಲು ಸಿದ್ಧರಾಗಿ ಎಂದೂ ಧಮಕಿ ಹಾಕಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಗಂಭೀರ ಆರೋಪ ಮಾಡಿದೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ತಮಗೆ ಆಪ್ ಒಡೆದು ಬಂದರೆ ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಆಫರ್ ನೀಡಿತ್ತು ಎಂದು ಆರೋಪಿಸಿದ ಮರುದಿನವೇ ಈ ಆರೋಪ ಕೇಳಿಬಂದಿದೆ.
ಈ ಕುರಿತು ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ನಮ್ಮ ಪಕ್ಷದ ಶಾಸಕರಾದ ಅಜಯ್ ದತ್ತ, ಸಂಜೀವ್ ಝಾ, ಸೋಮನಾಥ್ ಭಾರ್ತಿ ಹಾಗೂ ಕುಲದೀಪ್ ಕುಮಾರ್ ಅವರಿಗೆ ಬಿಜೆಪಿಯಲ್ಲಿರುವ ಅವರ ಆಪ್ತರು ತಲಾ 20 ಕೋಟಿ ರೂ ಲಂಚದ ಆಮಿಷವೊಡ್ಡಿದ್ದಾರೆ. ಬೇರೆ ಶಾಸಕರನ್ನು ನಿಮ್ಮೊಂದಿಗೆ ಕರೆತಂದರೆ 25 ಕೋಟಿ ರೂ. ನೀಡುತ್ತೇವೆ ಎಂದೂ ಹೇಳಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ: ಬಿಜೆಪಿ ಸೇರಿದರೆ ನಿಮ್ಮ ಕೇಸ್‌ಗಳು ಖುಲಾಸೆಯಾಗುತ್ತದೆ ಎಂದು ಸಂದೇಶ ಬಂದಿದೆ: ಮನೀಶ್ ಸಿಸೋಡಿಯಾ
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಇದು ಬಹಳ ಗಂಭೀರ ವಿಚಾರ. ಮುಂದಿನ ತಂತ್ರಗಾರಿಕೆ ರೂಪಿಸಲು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.
ಆಪ್ ಸರ್ಕಾರ ಬೀಳಿಸಲು ಸಂಚು:
‘ನಿಮಗೆ ನಾಚಿಕೆಯಾಗಬೇಕು ಮೋದಿಜೀ. ಮಹಾರಾಷ್ಟ್ರದಲ್ಲಿ ಫಲ ನೀಡಿದ, ಸಿಸೋಡಿಯಾ ವಿಷಯದಲ್ಲಿ ಫಲ ನೀಡದ ತಂತ್ರಗಾರಿಕೆಯನ್ನು ಈಗ ನಮ್ಮ ಶಾಸಕರ ಮೇಲೆ ಪ್ರಯೋಗಿಸುತ್ತಿದ್ದೀರಿ. ಏನಾದರೂ ಮಾಡಿ ಕೇಜ್ರಿವಾಲ್ ಸರ್ಕಾರವನ್ನು ಬೀಳಿಸುವುದು ನಿಮ್ಮ ಗುರಿ’ ಎಂದೂ ಸಂಜಯ್ ಸಿಂಗ್ ಕಿಡಿಕಾರಿದರು. ಬಿಜೆಪಿಯಿಂದ ಹಣದ ಆಮಿಷವೊಡ್ಡಲಾಗಿದೆ ಎನ್ನಲಾದ ನಾಲ್ವರು ಶಾಸಕರೂ ಪತ್ರಿಕಾಗೋಷ್ಠಿಯಲ್ಲಿದ್ದರು.
ಹೆಸರು ಹೇಳಿ- ಬಿಜೆಪಿ ಸವಾಲು:
ಆಪ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಅವರಿಗೆ ಬಹುಶಃ ಮದ್ಯದ ಮಾಫಿಯಾದಿಂದ ಲಂಚದ ಆಮಿಷ ಬಂದಿರಬಹುದು. ಯಾರು ಲಂಚದ ಆಫರ್ ನೀಡಿದ್ದಾರೆಂದು ಏಕೆ ಅವರು ಬಹಿರಂಗಪಡಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.
ಮನೀಶ್ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್ ನಡೆಸಿದೆ: ಕೇಜ್ರಿವಾಲ್ ಕಿಡಿ
ನಾಳೆ ದೆಹಲಿಯಲ್ಲಿ ವಿಶೇಷ ಅಧಿವೇಶನ
ಆಪ್ ಶಾಸಕರು ಪಕ್ಷಾಂತರ ಮಾಡಲು 25 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂಬ ಆರೋಪಗಳು ಹಾಗೂ ದೆಹಲಿಯ ಹೊಸ ಅಬಕಾರಿ ನೀತಿಯ ಕುರಿತಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಲಿವೆ ಎಂಬುದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ವಿಶೇಷ ಅಧಿವೇಶನ ಕರೆದಿದ್ದಾರೆ. ಆಗಸ್ಟ್ 26ರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಬಿಜೆಪಿ ಸರ್ಕಾರವನ್ನು ಬೀಳಿಸಲು ಮಾಡುತ್ತಿರುವ ಪ್ರಯತ್ನ ಗಂಭೀರವಾದ ವಿಚಾರವಾಗಿದೆ. ಹಾಗಾಗಿ ರಾಜಕೀಯ ತಂತ್ರಗಾರಿಕೆ ರೂಪಿಸಲು ಶಾಸಕರ ಸಭೆ ಕರೆಯಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಈ ನಡುವೆಯೇ ಶುಕ್ರವಾರ ವಿಶೇಷ ಅಧಿವೇಶನ ಕರೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.