
ತಿರುವನಂತಪುರಂ: ಇಷ್ಟದ ದೇವರ ಹೆಸರಿನಲ್ಲಿ ಮತ್ತು ಹುತಾತ್ಮರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿಜೆಪಿ ಪಾಲಿಕೆ ಸದಸ್ಯರ ಪ್ರಮಾಣ ವಚನವನ್ನು ಹೈಕೋರ್ಟ್ ಅಸಿಂಧುಗೊಳಿಸಿರುವ ತೀರ್ಪೊಂದು ಕೇರಳದಿಂದ ಹೊರಬಂದಿದೆ. 20 ಬಿಜೆಪಿಯ ಸದಸ್ಯರು ನಿಯಮಬಾಹಿರವಾಗಿ ಈ ರೀತಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದಿರುವ ಕೇರಳದ ಹೈಕೋರ್ಟ್, ಪ್ರಮಾಣ ವಚನವನ್ನು ಅಸಿಂಧು ಮಾಡಿದ್ದು, ನಾಲ್ಕು ವಾರಗಳೊಳಗೆ ಕಾನೂನುಬದ್ಧವಾಗಿ ಮರು ಪ್ರಮಾಣವಚನ ಸ್ವೀಕರಿಸುವಂತೆ ನಿರ್ದೇಶಿಸಿದೆ.
ಕಾನೂನಿನ ಪ್ರಕಾರ 'ದೇವರ ಹೆಸರಿನಲ್ಲಿ ನಾನು ಪ್ರಮಾಣ ಮಾಡುತ್ತೇನೆ' ಎಂದು ಹೇಳಬೇಕೇ ವಿನಾ ಇಷ್ಟದ ದೇವರು ಅಥವಾ ಹುತಾತ್ಮರಾದವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬಾರದು. ಆದ್ದರಿಂದ ಕೇರಳದ ಹೈಕೋರ್ಟ್ ಈ ತೀರ್ಪು ನೀಡಿದೆ. ಬಿಜೆಪಿ ನಾಯಕರು ತಮ್ಮ ಇಷ್ಟದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದು ಕಾನೂನು ಬಾಹಿರ ಎಂದು ದೂರಿ ಸಿಪಿಎಂ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಮಾಣ ವಚನವನ್ನು ಅಸಿಂಧುಗೊಳಿಸಿದ್ದು, ಇನ್ನು ನಾಲ್ಕು ವಾರಗಳೊಳಗೆ ಕಾನೂನಿನಲ್ಲಿ ಇರುವಂತೆ ನಿಯಮಾನುಸಾರ ಮರು ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದೆ.
ನೂತನವಾಗಿ ಆಯ್ಕೆಯಾಗಿದ್ದ ತಿರುವನಂತಪುರಂ ಪಾಲಿಕೆ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ವಿವಾದ ಹುಟ್ಟಿಕೊಂಡಿತ್ತು. ಬಿಜೆಪಿ ಸದಸ್ಯರು ಸಾಂವಿಧಾನಿಕ ನಿಯಮಗಳನ್ನು ಮೀರಿ ಶ್ರೀ ಪದ್ಮನಾಭಸ್ವಾಮಿ, ಅಟ್ಟುಕಲ್ ಅಮ್ಮ, ಉದಯನ್ನೂರ್ ದೇವಿ ಸೇರಿದಂತೆ ತಮ್ಮಿಷ್ಟದ ನಿರ್ದಿಷ್ಟ ದೇವರುಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಜೊತೆಗೆ ಕೆಲವರು ಹುತಾತ್ಮರು ಹಾಗೂ ಸೈದ್ಧಾಂತಿಕ ನಾಯಕರ ಹೆಸರುಗಳನ್ನೂ ಬಳಸಿ ಪ್ರಮಾಣ ಮಾಡಿದ್ದರು.
ಸಿಪಿಎಂ ಕಾರ್ಪೊರೇಟರ್ ಹಾಗೂ ಸಂಸದೀಯ ಪಕ್ಷದ ನಾಯಕ ಎಸ್.ಪಿ. ದೀಪಕ್ ಅವರು ಈ ಪ್ರಮಾಣವಚನದ ಸಿಂಧುತ್ವವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಎಲ್ಲಾ ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸುವಂತೆ ಅವರು ಕೋರ್ಟ್ ಅನ್ನು ಕೋರಿದ್ದರು. "ಕೇರಳ ಮುನ್ಸಿಪಾಲಿಟಿ ಕಾಯ್ದೆ, 1994ರ ಸೆಕ್ಷನ್ 143 ಮತ್ತು ಅದರ ಮೂರನೇ ಶೆಡ್ಯೂಲ್ ಪ್ರಕಾರ, ಚುನಾಯಿತ ಪ್ರತಿನಿಧಿಗಳು ಕೇವಲ 'ದೇವರ ಹೆಸರಿನಲ್ಲಿ' ಅಥವಾ 'ಗಂಭೀರ ದೃಢೀಕರಣ' ಮಾಡುವ ಮೂಲಕ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಕಾನೂನಿನಲ್ಲಿ ವೈಯಕ್ತಿಕ ದೇವರುಗಳು, ರಾಜಕೀಯ ನಾಯಕರು, ಚಳವಳಿಗಳು ಅಥವಾ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಅವಕಾಶವಿಲ್ಲ" ಎಂದು ಎನ್ನುವುದು ಅವರ ವಾದವಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಸದಸ್ಯರನ್ನು ಅನರ್ಹಗೊಳಿಸಲಾಗದು ಎಂದಿದ್ದು, ಕೇರಳ ಮುನ್ಸಿಪಾಲಿಟಿ ಕಾಯ್ದೆ ಮತ್ತು ಸಂವಿಧಾನದ ನಿಬಂಧನೆಗಳ ಪ್ರಕಾರ ಮರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶಿಸಿದೆ. ಆದೇಶದ ಬೆನ್ನಲ್ಲೇ ಎಲ್ಲಾ ಸದಸ್ಯರೂ ಕಾನೂನುಬದ್ಧವಾಗಿ ಮರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ