
ನವದೆಹಲಿ: ಚೀನಾದ ಗೂಢಚಾರಿಣಿ ಆಲಿಸ್ ಹುವಾಂಗ್ ಜೊತೆ ಅನೈತಿಕ ಸಂಬಂಧಗಳ ವಿವಾದದ ಬಳಿಕ ಎನ್‌ವಿಡಿಯಾ ಸಂಸ್ಥೆಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್ ಮತ್ತೊಂದು ಸಂಬಂಧ ಬೆಳಕಿಗೆ ಬಂದಿದೆ. ಇದರ ನಡುವೆ ಜಾಗತಿಕ ಚಿಪ್ ತಯಾರಿಕಾ ದೈತ್ಯ 'ಎನ್‌ವಿಡಿಯಾ ' ಷೇರುಗಳಲ್ಲಿನ ತೀವ್ರ ಕುಸಿತವು ಅಮೆರಿಕದ ಸಿಲಿಕಾನ್ ವ್ಯಾಲಿಗೆ ದೊಡ್ಡ ಮಟ್ಟದ ಆಘಾತ ನೀಡಿದ್ದರೆ, ಭಾರತದ ಅಗ್ರಗಣ್ಯ ಕಾರ್ಪೊರೇಟ್ ಸಮೂಹಗಳಾದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಮತ್ತು ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್‌ಗೆ ಅನಿರೀಕ್ಷಿತ ವರದಾನವಾಗಿ ಪರಿಣಮಿಸಿದೆ. ಅಕ್ಟೋಬರ್ 2026ರ ಗರಿಷ್ಠ ಮಟ್ಟದಿಂದ ಎನ್‌ವಿಡಿಯಾ ಷೇರುಗಳು ಕುಸಿದ ಪರಿಣಾಮ, ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಬರೋಬ್ಬರಿ ಅಂದಾಜು ₹144 ಲಕ್ಷ ಕೋಟಿ ನಷ್ಟ ಉಂಟಾಗಿದೆ.
ಎನ್‌ವಿಡಿಯಾದ ಸಿಂಗಾಪುರ ಮೂಲದ ಕ್ಲೌಡ್ ಪಾಲುದಾರ ಸಂಸ್ಥೆ 'ಮೆಗಾಸ್ಪೀಡ್ ಇಂಟರ್‌ನ್ಯಾಷನಲ್' ಒಳಗೊಂಡ ಹಗರಣದ ಬೆನ್ನಲ್ಲೇ, ಸಂಸ್ಥೆಯ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರನ್ನು ಎನ್ವಿಡಿಯಾ ಕಾರ್ಪ್‌ನಿಂದ ಹೊರಹಾಕಲಾಗಿದೆ. ಅಲ್ಲದೆ, ಚೀನಾಕ್ಕೆ ಕಂಪ್ಯೂಟಿಂಗ್ ಶಕ್ತಿಯನ್ನು ರಹಸ್ಯವಾಗಿ ಪೂರೈಸುತ್ತಿವೆ ಎಂಬ ಶಂಕೆಯ ಮೇಲೆ ಆಗ್ನೇಯ ಏಷ್ಯಾದ ಡೇಟಾ ಕೇಂದ್ರಗಳ ವಿರುದ್ಧ ವಾಷಿಂಗ್ಟನ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಮೆರಿಕದ ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ ಈಗ ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾಗಳಿಗೆ ಉನ್ನತ ದರ್ಜೆಯ ಚಿಪ್‌ಗಳ ರಫ್ತಿಗೆ ಕಟ್ಟುನಿಟ್ಟಿನ ಪರವಾನಗಿ ನಿಯಮಗಳನ್ನು ಜಾರಿಗೊಳಿಸಿದೆ. ಜೊತೆಗೆ ಚೀನಾ-ಸಂಬಂಧಿತ ಸಂಸ್ಥೆಗಳಿಗೆ ರಿಮೋಟ್ ಪ್ರವೇಶವನ್ನು ನಿರ್ಬಂಧಿಸಿದೆ. ಇದರಿಂದಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಡೇಟಾ ಸೆಂಟರ್ ಉದ್ಯಮಕ್ಕೆ ಹಿನ್ನಡೆಯಾಗಿದ್ದು, ಭಾರತಕ್ಕೆ ಹೊಸ ಬಾಗಿಲು ತೆರೆದುಕೊಂಡಿದೆ.
ಚೀನಾದ ಪ್ರಭಾವದಿಂದ ಜಾಗತಿಕ ಕೃತಕ ಬುದ್ಧಿಮತ್ತೆ (AI) ಪೂರೈಕೆ ಸರಪಳಿಯನ್ನು ರಕ್ಷಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ‘ಪ್ಯಾಕ್ಸ್ ಸಿಲಿಕಾ’ ಎಂಬ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಭಾರತವು ವಾಷಿಂಗ್ಟನ್ ಮತ್ತು ಇಂಡೋ-ಪೆಸಿಫಿಕ್ ಪಾಲುದಾರರೊಂದಿಗೆ ‘ಸ್ಯಾನ್ ಫ್ರಾನ್ಸಿಸ್ಕೋ ಘೋಷಣೆ’ಗೆ ಸಹಿ ಹಾಕಿದೆ. ವಿಶೇಷವೆಂದರೆ, ಚೀನಾಕ್ಕೆ ತಂತ್ರಜ್ಞಾನ ವರ್ಗಾಯಿಸುವ ಅನುಮಾನಾಸ್ಪದ ದೇಶಗಳ ಪಟ್ಟಿಯಿಂದ ಭಾರತ ಹೊರಗುಳಿದಿದೆ. ಹೀಗಾಗಿ, ಪಾಶ್ಚಿಮಾತ್ಯ ತಂತ್ರಜ್ಞಾನ ಕಂಪನಿಗಳಿಗೆ ಏಷ್ಯಾದಲ್ಲಿ ಅತ್ಯಂತ ವಿಶ್ವಾಸಾರ್ಹ ತಾಣವಾಗಿ ಭಾರತ ಹೊರಹೊಮ್ಮಿದೆ.
ಈ ಭೌಗೋಳಿಕ ರಾಜಕೀಯ ಬದಲಾವಣೆಯ ನೇರ ಲಾಭವನ್ನು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಪಡೆಯುತ್ತಿದ್ದಾರೆ. ಇಬ್ಬರೂ ಉದ್ಯಮಿಗಳು ಸೇರಿ ಭಾರತದಲ್ಲಿ ಬೃಹತ್ AI ಮೂಲಸೌಕರ್ಯ ಮತ್ತು ಡೇಟಾ ಕೇಂದ್ರಗಳನ್ನು ನಿರ್ಮಿಸಲು 200 ಶತಕೋಟಿ ಡಾಲರ್‌ಗಿಂತಲೂ (ಬರೋಬ್ಬರಿ ₹16 ಲಕ್ಷ ಕೋಟಿಗೂ ಅಧಿಕ) ಹೆಚ್ಚು ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್: ಗಿಗಾವ್ಯಾಟ್ ಸಾಮರ್ಥ್ಯದ AI ಹಬ್ ನಿರ್ಮಿಸಲು ಮುಂದಿನ ಏಳು ವರ್ಷಗಳಲ್ಲಿ 10 ಟ್ರಿಲಿಯನ್ ರೂಪಾಯಿ ಹೂಡಿಕೆ ಮಾಡಲು ಮುಖೇಶ್ ಅಂಬಾನಿ ಮುಂದಾಗಿದ್ದಾರೆ.
ಅದಾನಿ ಗ್ರೂಪ್: 2035ರ ವೇಳೆಗೆ ಬೃಹತ್ ಡೇಟಾ-ಸೆಂಟರ್ ಯೋಜನೆಗಳಿಗಾಗಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹ ಪ್ರಕಟಿಸಿದೆ.
ಡೇಟಾ ಕೇಂದ್ರಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ವಿದ್ಯುತ್ ಪೂರೈಸಲು ಈ ಇಬ್ಬರೂ ದೈತ್ಯರು ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಗುಜರಾತ್‌ನ ಕಚ್ ಮರುಭೂಮಿಯನ್ನು ವಿಶ್ವದ ಅತಿದೊಡ್ಡ ಹಸಿರು ಇಂಧನ ಕೇಂದ್ರಗಳಾಗಿ ಪರಿವರ್ತಿಸುತ್ತಿದ್ದಾರೆ. ಅದಾನಿ ನಿರ್ಮಿಸುತ್ತಿರುವ ಸೌರ ಉದ್ಯಾನವನವು ಪ್ಯಾರಿಸ್ ನಗರಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದರೆ, ಅಂಬಾನಿ ಸಿಂಗಾಪುರಕ್ಕಿಂತ ಮೂರು ಪಟ್ಟು ವಿಸ್ತೀರ್ಣದ ಇಂಧನ ಸಂಕೀರ್ಣವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅದಾನಿ ಸಮೂಹವು ವಿದ್ಯುತ್ ಪ್ರಸರಣ ಜಾಲದ ಮೇಲೆ ಹಿಡಿತ ಹೊಂದಿದ್ದರೆ, ಅಂಬಾನಿ ಬಳಿ 50 ಕೋಟಿಗೂ ಅಧಿಕ ಟೆಲಿಕಾಂ ಚಂದಾದಾರರ ಬೃಹತ್ ಮಾರುಕಟ್ಟೆಯಿದೆ.
ಅಂಬಾನಿ ಮತ್ತು ಅದಾನಿಯ AI ಕೇಂದ್ರಗಳು ಆರಂಭದಿಂದಲೂ ಅಮೆರಿಕನ್ ಪಾಲುದಾರರ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವುದು ವಾಷಿಂಗ್ಟನ್‌ಗೆ ಹೆಚ್ಚಿನ ಭರವಸೆ ನೀಡಿದೆ.
ಅದಾನಿ - ಗೂಗಲ್ ಒಪ್ಪಂದ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ತನ್ನ ಕೇಂದ್ರಕ್ಕಾಗಿ ಅದಾನಿ ಸಮೂಹವು ಗೂಗಲ್ ಜೊತೆ ಕೈಜೋಡಿಸಿದೆ (ಗೂಗಲ್ ಇಲ್ಲಿ ಸಬ್-ಸೀ ಕೇಬಲ್‌ಗಳನ್ನು ಅಳವಡಿಸುತ್ತಿದೆ). ಅಲ್ಲದೆ, ಫ್ಲೋರಿಡಾ ಮೂಲದ ಜಬಿಲ್ ಸಂಸ್ಥೆಯೊಂದಿಗೆ ಸಮಾನ ಜಂಟಿ ಉದ್ಯಮವನ್ನೂ ಸ್ಥಾಪಿಸುತ್ತಿದೆ.
ರಿಲಯನ್ಸ್ - ಮೆಟಾ ಪಾಲುದಾರಿಕೆ: ಪಶ್ಚಿಮ ಕರಾವಳಿಯಲ್ಲಿ ಮೆಟಾ ಸಂಸ್ಥೆಗಾಗಿ ಅಂಬಾನಿ 168-ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಿಸುತ್ತಿದ್ದಾರೆ. ಇದರೊಂದಿಗೆ, ಮೆಟಾದ 'ಲಾಮಾ' AI ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಅನ್ನು ಭಾರತದಾದ್ಯಂತ ಮಾರಾಟ ಮಾಡಲು 100 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದಾರೆ.
ಟಾಟಾ - ಓಪನ್‌ಎಐ : ಈ ರೇಸ್‌ನಲ್ಲಿ ಮುಂಬೈ ಮೂಲದ ಟಾಟಾ ಗ್ರೂಪ್ ಕೂಡ ಹಿಂದೆ ಬಿದ್ದಿಲ್ಲ. ಟಾಟಾ ಸಂಸ್ಥೆಯು ಓಪನ್‌ಎಐಗಾಗಿ 100 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೌಲಭ್ಯವನ್ನು ನಿರ್ಮಿಸುತ್ತಿದ್ದು, ಮುಂದೆ ಇದನ್ನು 1 ಗಿಗಾವ್ಯಾಟ್‌ಗೆ ವಿಸ್ತರಿಸುವ ಗುರಿ ಹೊಂದಿದೆ.
ಭಾರತದಲ್ಲಿ ಸ್ಥಳೀಯ ಕಂಪನಿಗಳಿಂದ AI ಡೇಟಾ ಸೆಂಟರ್‌ಗಳಿಗೆ ಸದ್ಯಕ್ಕೆ ಬೇಡಿಕೆ ಕಡಿಮೆಯಿದ್ದರೂ, ಸರ್ಕಾರದ 'ಇಂಡಿಯಾ AI ಮಿಷನ್' ಅಡಿಯಲ್ಲಿರುವ ಯೊಟ್ಟಾ, ಟಾಟಾ ಕಮ್ಯುನಿಕೇಷನ್ಸ್ ಮತ್ತು ಇ2ಇ ನೆಟ್‌ವರ್ಕ್ಸ್‌ನಂತಹ ನಿಯೋಕ್ಲೌಡ್ ಸಂಸ್ಥೆಗಳು ಈಗಾಗಲೇ 44,000ಕ್ಕೂ ಹೆಚ್ಚು GPUಗಳನ್ನು ಹೊಂದಿವೆ. ದೇಶೀಯ ಬೇಡಿಕೆ ಹೆಚ್ಚಾಗುವವರೆಗೆ, ಹೆಚ್ಚುವರಿ ಸಾಮರ್ಥ್ಯವನ್ನು ವಿದೇಶಿ ಗ್ರಾಹಕರಿಗೆ 'AI ಟೋಕನ್‌ಗಳ' ರೂಪದಲ್ಲಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಅಮೆರಿಕದ ನಿಯೋಕ್ಲೌಡ್ ಕಂಪನಿಗಳು ಚಿಪ್ ಖರೀದಿಗಾಗಿ ಎನ್‌ವಿಡಿಯಾದ ಸಾಲದ ಸೌಲಭ್ಯವನ್ನೇ ಅವಲಂಬಿಸಿವೆ. ಆದರೆ, ಭಾರತದ ರಿಲಯನ್ಸ್, ಅದಾನಿ ಮತ್ತು ಟಾಟಾ ಸಮೂಹಗಳು ತೈಲ ಸಂಸ್ಕರಣೆ, ಟೆಲಿಕಾಂ, ಬಂದರು, ಇಂಧನ ಮತ್ತು ಸಾಫ್ಟ್‌ವೇರ್ ರಫ್ತುಗಳಿಂದ ವಾರ್ಷಿಕವಾಗಿ ಹತ್ತಾರು ಶತಕೋಟಿ ಡಾಲರ್ ನಗದು ಹರಿವನ್ನು ಹೊಂದಿವೆ. ಈ ಆರ್ಥಿಕ ಸ್ವಾವಲಂಬನೆಯೇ ಜಾಗತಿಕ AI ಮೂಲಸೌಕರ್ಯ ರೇಸ್‌ನಲ್ಲಿ ಭಾರತೀಯ ದೈತ್ಯರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ