2024ರ ಅಂತ್ಯಕ್ಕೆ ಇಡೀ ಮಂದಿರದ ನಿರ್ಮಾಣ ಕಾಮಗಾರಿ ಮುಗಿಸಲು ಪ್ರತಿಯೊಂದು ಹಂತದ ಕೆಲಸಗಳು ಯೋಜನಾಬದ್ಧವಾಗಿ ಸಾಗುತ್ತಿದೆ.
ಅಯೋಧ್ಯೆ(ಅ.28): ಕೋಟ್ಯಂತರ ಹಿಂದೂಗಳ ಆರಾಧ್ಯದೈವನಾಗಿರುವ ಶ್ರೀರಾಮನಿಗೆ ಜನ್ಮಸ್ಥಳ ಅಯೋಧ್ಯೆಯಲ್ಲಿಯೇ ಭವ್ಯ ಮಂದಿರ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ. ರಾಮಮಂದಿರ 57,400 ಚದರ್ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ಇಡೀ ಸಂಕೀರ್ಣವು 67 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. 2024ರ ಅಂತ್ಯಕ್ಕೆ ಇಡೀ ಮಂದಿರದ ನಿರ್ಮಾಣ ಕಾಮಗಾರಿ ಮುಗಿಸಲು ಪ್ರತಿಯೊಂದು ಹಂತದ ಕೆಲಸಗಳು ಯೋಜನಾಬದ್ಧವಾಗಿ ಸಾಗುತ್ತಿದೆ.
ಮೇ. 1ರಂದು ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್ ಸಮೂಹದ ರಾಜೇಶ್ ಕಾಲ್ರಾ ಅಯೋಧ್ಯೆಗೆ ಭೇಟಿ ನೀಡಿದ ವೇಳೆ ಕೇವಲ 5.5 ಅಡಿ ಎತ್ತರವಿದ್ದ ಮಂದಿರದ ಕಟ್ಟಡ ಅಕ್ಟೋಬರ್ ತಿಂಗಳಿನಲ್ಲಿ 21 ಅಡಿ ಎತ್ತರ ಮುಟ್ಟಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ. ಈ ಬಗ್ಗೆ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್ ಸಮೂಹದೊಂದಿಗೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೀರಾಮ ಮಂದಿ ನಿರ್ಮಾಣದ Exclusive ವರದಿ, ಆಯೋಧ್ಯೆಯಲ್ಲಿ ಸುವರ್ಣನ್ಯೂಸ್!
‘ಅಯೋಧ್ಯೆಯ ರಾಮಮಂದಿರ ನಿರ್ಮಾಣ ಪೂರ್ಣಗೊಂಡಾಗ ಅದು ಅದ್ಭುತ ವಾಸ್ತುಶಿಲ್ಪ, ಕರಕುಶಲತೆ ಹಾಗೂ ಅತ್ಯುನ್ನತ ಎಂಜಿನಿಯರಿಂಗ್ ಸಂಕೇತ ಎನಿಸಿಕೊಳ್ಳಲಿದೆ. ನಿಗದಿ ಪಡಿಸಿದಂತೆ 2023ರ ಡಿಸೆಂಬರ್ ವೇಳೆಗೆ ಗರ್ಭಗೃಹ ನಿರ್ಮಾಣ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಭರದಿಂದ ಕಾಮಗಾರಿ ನಡೆಸುತ್ತಿದ್ದೇವೆ. ಗರ್ಭಗೃಹ ನಿರ್ಮಾಣದ ಬಳಿಕ ರಾಮಲಲ್ಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರಾಣ ಪ್ರತಿಷ್ಠೆ ಪೂಜೆ ನೆರವೇರಿಸಲಾಗುವುದು. ಇದರ ಬಳಿಕ ದೂರದಿಂದಲೇ ದೇವರ ದರ್ಶನಕ್ಕೆ ಜನರಿಗೆ ಅವಕಾಶ ನೀಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಎದುರಾದ ಸವಾಲುಗಳು
ರಾಮಮಂದಿರಕ್ಕೆ ಹೊಂದಿಕೊಂಡಿರುವ ಇತರೆ ಕಟ್ಟಡಗಳ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಕಳೆದ ಕೆಲವು ತಿಂಗಳಲ್ಲಿ ಕಂಡುಬಂದ ಆಕಸ್ಮಿಕ ಮಳೆಯಿಂದಾಗಿ ಬಾಕಿಯುಳಿದ ನಿರ್ಮಾಣ ಕಾಮಗಾರಿಯನ್ನು ಸರಿಹೊಂದಿಸಲು ಎಲ್‌ಆ್ಯಂಡ್‌ಟಿ ಹಾಗೂ ಟಾಟಾ ಕನ್ಸಲ್ಟೆನ್ಸಿಯ ಎಂಜಿನಿಯರ್‌ಗಳ ಅಡಿಯಲ್ಲಿ ನೂರಾರು ಜನರು ಶ್ರಮಿಸುತ್ತಿದ್ದಾರೆ. ಲಾರ್ಸೆನ್ ಮತ್ತು ಟೌಬ್ರೊ ಕಂಪನಿಯ ಯೋಜನಾ ವ್ಯವಸ್ಥಾಪಕರಾದ ವಿನೋದ್ ಕುಮಾರ್ ಮೆಹತಾ ಅವರ ಮಂದಿರ ನಿರ್ಮಾಣದ ವೇಳೆ ಎದುರಾದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
‘ಡಿ.2023ರ ಒಳಗಾಗಿ ದೇವರ ಗರ್ಭಗೃಹ ನಿರ್ಮಾಣ ಪೂರ್ಣಗೊಳಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಕಾಲಕ್ಕೆ ಎಲ್ಲ ಕಾಮಗಾರಿ ನಡೆಯುತ್ತಿದೆ. 21 ಅಡಿ ಎತ್ತರಕ್ಕೆ ಸ್ತಂಭಗಳನ್ನು ಸಾಗಿಸುವುದು ನಮಗೆ ಎದುರಾಗಿರುವ ಪ್ರಮುಖ ಸವಾಲಾಗಿತ್ತು. ಈ ವೇಳೆ ಕಲ್ಲುಗಳ ಗಾತ್ರ, ಸಂಖ್ಯೆಗಳ ಆಧಾರದ ಮೇಲೆ ಅವುಗಳನ್ನು ಗುರುತಿಸಿ ಸ್ತಂಭಗಳ ವಿನ್ಯಾಸಗಳನ್ನು ಪೂರ್ಣಗೊಳಿಸುವುದು ಸುಲಭದ ಮಾತೇನಲ್ಲ. ಇದೇ ಸಮಯದಲ್ಲಿ ನಾವು ಬೆಂಗಳೂರು ಹಾಗೂ ಹೈದರಾಬಾದಿನಿಂದ 17,000 ಬೃಹತ್ ಕಲ್ಲುಗಳ ಬ್ಲಾಕ್‌ಗಳನ್ನು ತರಿಸಿಕೊಂಡಿದ್ದೇವೆ. ಈವರೆಗೆ ದೇವಾಲಯದ ಸ್ತಂಭದ ಮಟ್ಟದವರೆಗೆ ಈಗಾಗಲೇ ಕಾಮಗಾರಿ ಮುಗಿಸಿದ್ದೇವೆ. ಇದಲ್ಲದೇ ಪ್ರಮುಖ ದೇವಾಲಯದ ಗೋಡೆಗಳ ಕೆತ್ತನೆ ಕೆಲಸವೂ ಆರಂಭವಾಗಿದೆ’ ಎಂದು ಹೇಳಿದ್ದಾರೆ.
‘ರಾಮನವಮಿಯಂತಹ ವಿಶೇಷ ಸಂದರ್ಭದಲ್ಲಿ ಅಯೋಧ್ಯೆಗೆ ಗರಿಷ್ಠ 3.5 ಲಕ್ಷ ಜನರು ಒಂದೇ ದಿನ ಭೇಟಿ ನೀಡುತ್ತಾರೆ. ನಿರ್ಮಾಣ ಕಾರ್ಯದ ವೇಳೆ ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಿಗದಿ ಪಡಿಸಿದ ಸಮಯದಲ್ಲಿ ಕಾಮಗಾರಿಯನ್ನು ಮುಗಿಸುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ. ಕೋಟ್ಯಂತರ ಜನ ನಿರೀಕ್ಷೆ ಇಟ್ಟುಕೊಂಡಿರುವ ಮಹತ್ವದ ಯೋಜನೆಯಿದು. ಯಾವುದೇ ಸಣ್ಣ ತಪ್ಪಿಗೂ ಅವಕಾಶವಿಲ್ಲದೇ ಇಡೀ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮುಗಿಸಬೇಕಾಗಿದೆ. ಆದರೆ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾಗುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಕೋಪ ಎದುರಿಸಲು ಸಿದ್ಧತೆ
ಉತ್ತರಪ್ರದೇಶದಲ್ಲಿ ಸಂಭವಿಸಿದ ಆಕಸ್ಮಿಕ ಮಳೆಯಿಂದ ಕಾಮಗಾರಿಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ವಿಶೇಷ ಸಿದ್ಧತೆ ಮಾಡಿಕೊಂಡ ಬಗ್ಗೆ ವಿವರಿಸಿದ ಅವರು, ‘ಇತ್ತೀಚೆಗೆ ಉತ್ತರಪ್ರದೇಶದಲ್ಲಾದ ಭಾರೀ ಮಳೆಯಿಂದಾಗಿ ಲಖನೌ-ಅಯೋಧ್ಯಾ ರಸ್ತೆ ಬಂದ್ ಆಗಿತ್ತು. ಮಳೆಗಾಲಕ್ಕೂ ಮುನ್ನವೇ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಿದ್ಧವಾಗಿದ್ದೆವು. ಹೆದ್ದಾರಿಗಳು ಜಲಾವೃತಗೊಂಡಿದ್ದಾಗ ತಾತ್ಕಾಲಿಕ ರಸ್ತೆಗಳನ್ನು ಬಳಸಿಕೊಂಡಿದ್ದೆವು. ಮಳೆಯಿಂದ ಕಾಮಗಾರಿಯ ವೇಗ ಕೊಂಚ ಕಡಿಮೆಯಾದರೂ ಮೊದಲೇ ಸಿದ್ಧತೆ ಮಾಡಿಕೊಂಡಿದ್ದರಿಂದ ಹೆಚ್ಚೇನು ಸಮಸ್ಯೆಯಾಗಿಲ್ಲ’ ಎಂದಿದ್ದಾರೆ.
ರಾಮಮಂದಿರವನ್ನು ನೈಸರ್ಗಿಕ ವಿಕೋಪಗಳನ್ನು ಎದುರಿಸುವ ಸಾಮರ್ಥ್ಯ ಇರುವಂತೆ ವಿನ್ಯಾಸಗೊಳಿಸಿರುವ ಬಗ್ಗೆ ವಿವರಿಸಿದ ಅವರು ,‘ಕೇವಲ ಭೂಕಂಪ ಮಾತ್ರವಲ್ಲದೇ ಅತಿವೃಷ್ಟಿಮೊದಲಾದ ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿಟ್ಟು ಅಧ್ಯಯನದ ಬಳಿಕವೇ ದೇಗುಲದ ನಿರ್ಮಾಣ ನಡೆಸಲಾಗುತ್ತಿದೆ. ಕಾಮಗಾರಿ ವೇಳೆಯೂ ಎಲ್ಲ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸುರಕ್ಷತಾ ಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಹೀಗಾಗಿ ರಾಮಮಂದಿರ ಎಲ್ಲ ವಿಕೋಪಗಳನ್ನು ಎದುರಿಸಿ ಸುರಕ್ಷಿತವಾಗಿರಲಿದೆ ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಗೂ ಚಾಲನೆ
ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆಯೂ ಅಂತರಾಷ್ಟ್ರೀಯ ನಗರವಾಗಿ ಪರಿವರ್ತನೆಯಾಗಲಿದೆ. ಈ ನಿಟ್ಟಿನಲ್ಲಿ ಅಯೋಧ್ಯಾ ಸ್ಮಾರ್ಟ್‌ಸಿಟಿ ಯೋಜನೆಗೂ ಈಗಾಗಲೇ ಚಾಲನೆ ನೀಡಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯು ಆರ್ಥಿಕ ಅಭಿವೃದ್ಧಿ, ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಮತ್ತು ಹೆಚ್ಚು ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಅನುಷ್ಠಾನದ ಮೊದಲ ಭಾಗವಾಗಿ ಭೂಸ್ವಾಧೀನದ ಪ್ರಕ್ರಿಯೆ ಆರಂಭಿಸಲಾಗಿದ್ದು, ನಗರದ ಸೌಂದರ್ಯ ಹೆಚ್ಚಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಮಕಥಾ ಉದ್ಯಾನವನದ ನಿರ್ಮಾಣಕ್ಕೆ ಕೂಡಾ ಚಾಲನೆ ನೀಡಲಾಗಿದೆ.
ಈ ಬಗ್ಗೆ ಸ್ಥಳೀಯ ವ್ಯಾಪಾರಿ ಮುನ್ನಾಲಾಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ‘ಅಯೋಧ್ಯೆ ಮೊದಲಿನಿಂದಲೂ ತೀರ್ಥಕ್ಷೇತ್ರವಾಗಿದ್ದರಿಂದ ಸಾಮಾನ್ಯವಾಗಿ ಇಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ರಾಮಮಂದಿರದ ನಿರ್ಮಾಣ ಆರಂಭವಾದ ಬಳಿಕ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇನ್ನಷ್ಟುಏರಿಕೆಯಾಗಿದೆ. ದೇವಾಲಯ ನಿರ್ಮಾಣದವರೆಗೆ ಅಯೋಧ್ಯೆಯನ್ನು ಸ್ಮಾರ್ಚ್‌ಸಿಟಿ ಮಾಡುವ ಉದ್ದೇಶ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ನಮ್ಮ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಮುನ್ನ ನಮಗೆ ಬೇರೆಡೆಗೆ ಜಾಗವನ್ನು ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಆದರೆ ಸದ್ಯದ ಸ್ಥಿತಿ ಗಮನಿಸಿದರೆ ರಾಮ ಜನ್ಮಭೂಮಿಗೆ ಭೇಟಿ ನೀಡಲು ಬರುವ ಭಾರೀ ಸಂಖ್ಯೆಯ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಯೋಧ್ಯೆ ಹೆಣಹಾಡುತ್ತಿದೆ ಎನ್ನಬಹುದು. ಅಯೋಧ್ಯೆಯ ರಸ್ತೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳು ಸದ್ಯದ ಮಟ್ಟಿಗೆ ಹದಗೆಟ್ಟಸ್ಥಿತಿಯಲ್ಲಿದ್ದರೂ ಶೀಘ್ರವೇ ಈ ಸ್ಥಿತಿ ಬದಲಾವಣೆಯಾಗಲಿದೆ ಎಂದು ಸ್ಥಳೀಯರು ನಿರೀಕ್ಷೆಯಲ್ಲಿದ್ದಾರೆ. ಅವರ ಎಲ್ಲ ಕನಸುಗಳು, ಆಸೆ ಹಾಗೂ ಆಕಾಂಕ್ಷೆಗಳು ಅಯೋಧ್ಯೆಯ ರಾಮಮಂದಿರದೊಂದಿಗೆ ಹೆಣೆದುಕೊಂಡಿವೆ. ರಾಮಮಂದಿರ ತಲೆಯೆತ್ತುತ್ತಿದ್ದಂತೆ ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ಭವ್ಯ ರಾಮಮಂದಿರವನ್ನು ನೋಡಿ ಕಣ್ತುಂಬಿಕೊಳ್ಳಲು ದೇಶವೇ ಕಾತರದಿಂದ ಕಾಯುತ್ತಿದೆ.
Ram Mandir ಕೋಟ್ಯಾಂತರ ಹಿಂದೂಗಳ ಕನಸು ನನಸು, ಜ.14ಕ್ಕೆ ಆಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ!
ಕಳೆದ ಮೇ 1ರಂದು ಏಷ್ಯಾನೆಟ್ ಸಮೂಹದ ರಾಜೇಶ್ ಕಾಲ್ರಾ ಅವರು ರಾಮಮಂದಿರ ನಿರ್ಮಾಣ ಕಾಮಗಾರಿ ಬಗ್ಗೆ ಶ್ರೀರಾಮ ಜನ್ಮಭೂಮಿಗೆ ತೆರಳಿ ಅಲ್ಲಿನ ಪ್ರಗತಿಯ ಸಾಕ್ಷಾತ್ ವರದಿ ಮಾಡಿದ್ದರು. ಈಗ ಮತ್ತೊಮ್ಮೆ ರಾಮಮಂದಿರದ ಕಾಮಗಾರಿ ಎಲ್ಲಿಯವರೆಗೆ ಬಂದಿದೆ, ಯಾವಾಗ ಪೂರ್ಣಗೊಳ್ಳುತ್ತದೆ, ಇನ್ನೂ ಏನೇನು ಕೆಲಸ ಬಾಕಿಯಿದೆ ಹಾಗೂ ಭಕ್ತರು ಯಾವಾಗ ನವ ಅಯೋಧ್ಯೆಗೆ ತೀರ್ಥಯಾತ್ರೆಗೆ ತೆರಳಬಹುದು ಎಂಬುದರ ಬಗ್ಗೆ ಕಾಲ್ರಾ ಅವರು ಸ್ಥಳಕ್ಕೆ ತೆರಳಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬೆಳ್ಳಿಯ ಇಟ್ಟಿಗೆ ಇಟ್ಟು ರಾಮಮಂದಿರಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಅದರ ಸುತ್ತಲೂ ಕಲ್ಲಿನ 7 ಪದರಗಳನ್ನು ನಿರ್ಮಾಣ ಮಾಡಿ ಅದರ ಮೇಲೆ ರಾಜಸ್ಥಾನದ ಬನ್ಸಿ ಪಹಾಡ್‌ದ ಕಲ್ಲಿನ ರಚನೆಯ ಮೇಲೆ ಗರ್ಭಗೃಹ ನಿರ್ಮಾಣ ಆರಂಭಿಸಲಾಗುವುದು. ಈಗಾಗಲೇ ಕಲ್ಲಿನ 3 ಪದರಗಳನ್ನು ಹಾಕಿದ್ದೇವೆ. ಗರ್ಭಗೃಹವನ್ನು 6.5 ಮೀ. ಎತ್ತರದ ಸ್ತಂಭದ ಮೇಲೆ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದೆಡೆ ಕಲ್ಲುಗಳ ಕೆತ್ತನೆಯ ಕಾರ್ಯ ಭರದಿಂದ ಸಾಗುತ್ತಿದೆ. ಅರ್ಧಕ್ಕಿಂತಲೂ ಹೆಚ್ಚು ಕಲ್ಲುಗಳ ಕೆತ್ತನೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ದೇವಾಲಯದ ಕಟ್ಟಡದ ಸುತ್ತಲೂ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಅಂತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.