ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?

By Shrilakshmi Shri  |  First Published Dec 4, 2019, 4:13 PM IST

ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳುತ್ತಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ, ಈಗ ಅದಕ್ಕೆ ಕಾಲಮಿತಿಯನ್ನೂ ನಿಗದಿ ಮಾಡಿದ್ದಾರೆ. 2024 ರ ಒಳಗಾಗಿ ದೇಶಾದ್ಯಂತ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂಬ ಗಡುವು ನೀಡಿದ್ದಾರೆ. 


ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳುತ್ತಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ, ಈಗ ಅದಕ್ಕೆ ಕಾಲಮಿತಿಯನ್ನೂ ನಿಗದಿ ಮಾಡಿದ್ದಾರೆ.

2024 ರ ಒಳಗಾಗಿ ದೇಶಾದ್ಯಂತ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂಬ ಗಡುವು ನೀಡಿದ್ದಾರೆ. ಅಂದರೆ, ಇನ್ನು ನಾಲ್ಕು ವರ್ಷದೊಳಗೆ ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನೂ ಹೊರ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಎಂದರೆ ಏನು, ದೇಶಾದ್ಯಂತ ಇದನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ, ಅಸ್ಸಾಂಗಿಂತ ಇದು ಹೇಗೆ ಭಿನ್ನ ಎಂಬ ಮಾಹಿತಿ ಇಲ್ಲಿದೆ.

Latest Videos

undefined

ರಾಜ್ಯಗಳಲ್ಲಿ ಮೊದಲಿಗೆ ಎನ್‌ಪಿಆರ್‌, ಆಮೇಲೆ ಎನ್‌ಆರ್‌ಸಿ

ಒಮ್ಮೆ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಪ್ರಕ್ರಿಯೆ ಸಂಪೂರ್ಣವಾದ ನಂತರ ಕೇಂದ್ರ ಸರ್ಕಾರ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಗಣತಿ ಆಯುಕ್ತರ ಬಳಿ ಪ್ರತಿಯೊಬ್ಬರ ಜನನ ಪ್ರಮಾಣ ಪತ್ರ, ಗುರುತಿನ ಚೀಟಿಗೆ ಸಂಬಂಧಪಟ್ಟಮಾಹಿತಿ ಲಭ್ಯವಿರುವುದರಿಂದ ಅಕ್ರಮ ವಲಸಿಗರ ಪತ್ತೆ ಕಷ್ಟಏನಲ್ಲ. ಆದರೆ ಇದುವರೆಗೆ ಪೌರತ್ವ ಸಾಬೀತಿಗೆ ಜನರು ಸಲ್ಲಿಸಬೇಕಾದ ದಾಖಲೆ ಯಾವುದು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ದಿಷ್ಟಪಡಿಸಿಲ್ಲ.

2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ

ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಸ್ಪಷ್ಟಪಡಿಸಿದ ಬಳಿಕ ದಾಖಲೆ ಸಲ್ಲಿಸಲು ವಿಫಲರಾದವರು ಅಕ್ರಮ ವಲಸಿಗರಾಗುತ್ತಾರೆ. ಅವರು ವಿದೇಶಿ ನ್ಯಾಯಮಂಡಳಿಯ ಮೊರೆ ಹೋಗಬಹುದು. ಕೇಂದ್ರ ಸರ್ಕಾರ ದೇಶಾದ್ಯಂತ ವಿದೇಶಿ ನ್ಯಾಯಮಂಡಳಿಗಳನ್ನು ರಚಿಸಬೇಕಾಗುತ್ತದೆ. ಆದರೆ ಗಣತಿ ಆಯುಕ್ತರ ಕಚೇರಿಯಲ್ಲಿಯೇ ಜನರ ದತ್ತಾಂಶಗಳ ಸಂಗ್ರಹಣೆ, ವಿಶ್ಲೇಷಣೆ ನಡೆಯುತ್ತದೆಯೇ ಅಥವಾ ಅದಕ್ಕೆಂದೇ ಬೇರೆ ಕೇಂದ್ರಗಳನ್ನು ರಚಿಸಲಾಗುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟನೆ ಇಲ್ಲ.

ಎನ್‌ಆರ್‌ಸಿಗೂ ಎನ್‌ಪಿಆರ್‌ಗೂ ಏನು ವ್ಯತ್ಯಾಸ?

ಎನ್‌ಆರ್‌ಸಿ ಪ್ರಕ್ರಿಯೆಯ ಮೊದಲ ಭಾಗವಾಗಿ ದೇಶಾದ್ಯಂತ 2020ರ ಸೆಪ್ಟೆಂಬರ್‌ನ ವೇಳೆಗೆ ದೇಶದ ಎಲ್ಲಾ ನಾಗರಿಕರನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವ್ಯಾಪ್ತಿಗೆ ತರಲಾಗುತ್ತದೆ. ಎನ್‌ಪಿಆರ್‌ ಎಂದರೆ ದೇಶದ ನಿವಾಸಿಗಳ ಸಾಮಾನ್ಯ ನೋಂದಣಿ. ಇದು ಎನ್‌ಆರ್‌ಸಿಯಂತೆ ಪೌರತ್ವ ನೋಂದಣಿ ಅಲ್ಲ. ವಿದೇಶದಿಂದ ಬಂದು 6 ತಿಂಗಳಿಗಿಂತ ಹೆಚ್ಚು ಕಾಲ ಒಂದು ಪ್ರದೇಶದಲ್ಲಿ ನೆಲೆಸಿದವರನ್ನೂ ಈ ಪಟ್ಟಿಒಳಗೊಂಡಿರುತ್ತದೆ.

ಆದರೆ ನಾಗರಿಕರ ಮಾಹಿತಿಗಳು ಅವರ ಜನಸಂಖ್ಯಾ ಮಾಹಿತಿಯಷ್ಟೇ ಆಗಿರದೆ, ಅವರ ಬಯೋಮೆಟ್ರಿಕ್‌ ಮಾಹಿತಿಗಳನ್ನೂ ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯು 2020ರ ವೇಳೆ ಮುಕ್ತಾಯಗೊಳ್ಳಲಿದೆ. ಗಣತಿ ಆಯುಕ್ತರ ಕಚೇರಿಯಲ್ಲಿ ಸುಮಾರು 117 ಕೋಟಿ ಜನರ ದತ್ತಾಂಶವು ಡಿಜಿಟಲ್‌ ರೂಪದಲ್ಲಿ ಸಂಗ್ರಹಣೆಯಾಗಿದೆ. ಇದರಲ್ಲಿ 40% ಜನರ ಬಯೋಮೆಟ್ರಿಕ್‌ ಮಾಹಿತಿಯು ಎನ್‌ಪಿಆರ್‌ನೊಂದಿಗೆ ಲಿಂಕ್‌ ಆಗಿದೆ.

ಅಸ್ಸಾಂ ಎನ್‌ಆರ್‌ಸಿಗಿಂತ ಇದು ಹೇಗೆ ಭಿನ್ನ?

ಅಸ್ಸಾಂನಲ್ಲಿ ಎನ್‌ಆರ್‌ಸಿ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್‌ 2014ರಲ್ಲಿ ಆದೇಶ ನೀಡಿತ್ತು. ಮತ್ತು ಸುಪ್ರೀಂಕೋರ್ಟ್‌ ನಿರ್ದೇಶನದಂತೆಯೇ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರನುಸಾರ 1971ಕ್ಕೂ ಮುನ್ನ ಅಸ್ಸಾಂನಲ್ಲಿ ನೆಲೆಸಿದವರನ್ನು ಹಾಗೂ ಅವರ ವಂಶಜರನ್ನು ಮಾತ್ರ ನೈಜ ಅಸ್ಸಾಮಿಗಳೆಂದು ಗುರುತಿಸಿ ಅಂತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂದಾಜು 3.3 ಕೋಟಿ ಜನರು ಅರ್ಜಿ ಸಲ್ಲಿಸಿದ್ದು ಅಂತಿಮವಾಗಿ 19 ಲಕ್ಷ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಇವರುಗಳು ವಿದೇಶಿ ನ್ಯಾಯಾಧೀಕರಣದ ಮುಂದೆ ಅಪೀಲು ಸಲ್ಲಿಸಬಹುದು. ಇದಕ್ಕಾಗಿ 300 ನ್ಯಾಯಾಧೀಕರಣಗಳನ್ನು ಸ್ಥಾಪಿಸಲಾಗಿದೆ. ಹೀಗೆ ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಸ್ವತಃ ಸುಪ್ರೀಂಕೋರ್ಟ್‌ ವಹಿಸಿಕೊಂಡಿದ್ದರೆ, ದೇಶಾದ್ಯಂತ ಎನ್‌ಆರ್‌ಸಿ ಮೇಲ್ವಿಚಾರಣೆಯು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆಯಲಿದೆ. ಪೌರತ್ವ ಸಾಬೀತಿಗೆ ನೀಡಬೇಕಾದ ದಾಖಲೆಗಳು ಅಸ್ಸಾಂನಂತೆಯೇ ಇರದಿರಬಹುದು. ಜನರು ತಮ್ಮ ಪೌರತ್ವ ಸಾಬೀತುಪಡಿಸಲು ಯಾವ ದಾಖಲೆಗಳನ್ನು ನೀಡಬೇಕು ಎಂಬ ಬಗ್ಗೆ ಸರ್ಕಾರ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.

ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

65 ಲಕ್ಷ ಜನರ ಬಂಧಿಸಲು ಜೈಲು ಎಲ್ಲಿದೆ? ಖರ್ಚು ಎಷ್ಟು?

ಅಸ್ಸಾಂನಲ್ಲಿ ಎನ್‌ಆರ್‌ಸಿ ಅನುಷ್ಠಾನಕ್ಕೆ ಒಟ್ಟಾರೆ 1600 ಕೋಟಿ ಖರ್ಚಾಗಿದ್ದು, ಒಟ್ಟು 50,000 ಸರ್ಕಾರಿ ಸಿಬ್ಬಂದಿಗಳು ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ನಿಯೋಜನೆಗೊಂಡಿದ್ದರು. ಇದರಲ್ಲಿ ಕಟ್ಟಡ ನಿರ್ಮಾಣ, ಅಕ್ರಮ ನಿವಾಸಿಗಳಿಗಾಗಿ ರಚಿಸಲಾದ ನ್ಯಾಯಾಧೀಕರಣದ ಖರ್ಚು ವೆಚ್ಚಗಳು ಸೇರಿಲ್ಲ. ಈ ಲೆಕ್ಕದ ಪ್ರಕಾರ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲು ಅಂದಾಜು 2 ಲಕ್ಷ ಕೋಟಿ ಖರ್ಚಾಗಬಹುದು ಎನ್ನಲಾಗುತ್ತಿದೆ.

ಒಂದು ವೇಳೆ ಭಾರತದ ಒಟ್ಟು ಜನಸಂಖ್ಯೆಯ 0.5ರಷ್ಟುಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದರೂ ಅದು 65 ಲಕ್ಷವಾಗುತ್ತದೆ. ಹೀಗೆ ಪಟ್ಟಿಯಿಂದ ಹೊರಗುಳಿದ ಅಕ್ರಮ ನಿವಾಸಿಗಳಿಗೆ ಬಂಧನಕ್ಕೆ ಮತ್ತಷ್ಟುಕಟ್ಟಡಗಳನ್ನು ನಿರ್ಮಿಸಬೇಕಾಗುತ್ತದೆ. ಭಾರತದ ಅತಿ ದೊಡ್ಡ ಜೈಲುಗಳಾದ ದೆಹಲಿಯ ತಿಹಾರ್‌ ಜೈಲಿನಲ್ಲೂ 6250 ಕೈದಿಗಳನ್ನು ಬಂಧಿಸಿಡಬಹುದಷ್ಟೆ.

ಇನ್ನು ಎನ್‌ಆರ್‌ಸಿಯಿಂದ ಹೊರಗುಳಿಯುವ 65 ಲಕ್ಷ ಜನರ ಬಂಧನಕ್ಕೆ ಇಂತಹ ಎಷ್ಟು ಜೈಲುಗಳು ನಿರ್ಮಾಣವಾಗಬೇಕು ಮತ್ತು ಅದಕ್ಕೆ ತಗುಲುವ ಖರ್ಚು ಎಷ್ಟಾಗಬಹುದು ಎನ್ನುವುದನ್ನು ಅಂದಾಜಿಸಬಹುದು. ಇದಲ್ಲದೆ ಎನ್‌ಆರ್‌ಸಿಯಿಂದ ಹೊರಗುಳಿದವರು ಅಪೀಲು ಸಲ್ಲಿಸಲು ದೇಶಾದ್ಯಂತ ನ್ಯಾಯಾಧಿಕರಣವನ್ನು ಸ್ಥಾಪಿಸಬೇಕಾಗುತ್ತದೆ.

ನ್ಯಾಯಮಂಡಳಿ ರಚಿಸುವ ಹೊಣೆ ಜಿಲ್ಲಾ ಜಡ್ಜ್‌ಗಳಿಗೆ

ಎನ್‌ಪಿಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಿ ಅಧಿಕಾರಿಗಳು ನೋಡಿಕೊಳ್ಳುವುದರಿಂದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಮಂಡಳಿಗಳನ್ನು ರಚಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು 2019ರ ಮೇ 30ರಂದು ಹೊರಡಿಸಿದ ವಿದೇಶೀಯರ (ನ್ಯಾಯಮಂಡಳಿ) ಆದೇಶ-1964ರಲ್ಲಿನ ತಿದ್ದುಪಡಿ ಪ್ರಕಾರ, ಭಾರತದಲ್ಲಿ ವಾಸಿಸುತ್ತಿರುವ ಅಕ್ರಮ ವಿದೇಶೀಯರನ್ನು ಗುರುತಿಸಲು ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ನ್ಯಾಯಾಧೀಶರಿಗೆ ಅಧಿಕಾರ ನೀಡಿದೆ. ಇದರನುಸಾರ ಅಕ್ರಮ ವಲಸಿಗರನ್ನು ಬಂಧಿಸುವ ಪ್ರಕ್ರಿಯೆಯನ್ನು ಸ್ಥಳೀಯ ಪೊಲೀಸರು ನೋಡಿಕೊಳ್ಳಬೇಕಾಗುತ್ತದೆ. ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರಗಳನ್ನು ನಿರ್ಮಿಸಲು ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಕೈಜೋಡಿಸಬೇಕಾಗುತ್ತದೆ.

ಅಸ್ಸಾಂ ಎನ್‌ಆರ್‌ಸಿ ಅಂತಿಮವೇ?

ಇಲ್ಲ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರೇ ಅಸ್ಸಾಂನಲ್ಲಿ ಮತ್ತೊಮ್ಮೆ ಎನ್‌ಆರ್‌ಸಿ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಿದ್ದಾರೆ. ಅಸ್ಸಾಂನ ಬಿಜೆಪಿ ಘಟಕ ಮತ್ತಿತರ ಸಂಘ-ಸಂಸ್ಥೆಗಳು ಅಸ್ಸಾಂನಲ್ಲಿ ಬಿಡುಗಡೆ ಮಾಡಲಾದ ಅಂತಿಮ ಪಟ್ಟಿಗೆ ವಿರೋಧ ವ್ಯಕ್ತಪಡಿಸಿವೆ. ದೋಷಪೂರಿತ ಗುರುತಿನ ಪ್ರಕ್ರಿಯೆಯ ಕಾರಣದಿಂದಾಗಿ ನಿಜವಾದ ಭಾರತೀಯ ನಾಗರಿಕರನ್ನು ಹೊರಗಿಡಲಾಗಿದೆ ಮತ್ತು ವಲಸಿಗರನ್ನು ಸೇರಿಸಿಕೊಳ್ಳಲಾಗಿದೆ ಎಂದು ಅವು ವಾದಿಸಿವೆ. ಹಾಗಾಗಿ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವಾಗ ಅಸ್ಸಾಂನಲ್ಲಿಯೂ ಮತ್ತೊಮ್ಮೆ ಎನ್‌ಆರ್‌ಸಿ ಜಾರಿ ಮಾಡಲಾಗುತ್ತದೆ.

ಕರ್ನಾಟದಲ್ಲಿ ಎನ್‌ಆರ್‌ಸಿ ಜಾರಿ ಸಿದ್ಧತೆ ಎಲ್ಲಿಗೆ ಬಂದಿದೆ?

ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ವಿದೇಶೀಯರ ಮೊದಲ ನಿರಾಶ್ರಿತರ ಕೇಂದ್ರಕ್ಕೆ ಚಾಲನೆ ನೀಡಲು ಭರದ ಸಿದ್ಧತೆ ನಡೆಯುತ್ತಿದೆ. ನೆಲಮಂಗಲ ಹತ್ತಿರದ ಸೊಂಡೆಕೊಪ್ಪದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ವಸತಿ ನಿಲಯವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ.

ಈಗಾಗಲೇ ಭದ್ರತೆಗಾಗಿ ಅಲ್ಲಿ 40 ಜನ ಪೊಲೀಸರನ್ನೂ ಸಹ ರಾಜ್ಯ ಸರ್ಕಾರ ನೇಮಕ ಮಾಡಿದೆ. ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ದ ವಿದೇಶೀಯರು ದಸ್ತಗಿರಿಯಾದರೆ ಪೊಲೀಸರು ಅವರನ್ನು ಬಂಧಿಸಲು ರಾಜತಾಂತ್ರಿಕ ಸಮಸ್ಯೆ ಎದುರಾಗುತ್ತಿತ್ತು. ಇದೂ ಸಹ ನಿರಾಶ್ರಿತರ ಕೇಂದ್ರ ಸ್ಥಾಪನೆಗೆ ಪ್ರಮುಖ ಕಾರಣ. ಸುಮಾರು ಏಳೆಂಟು ವರ್ಷದ ಬೇಡಿಕೆಗೆ ಈಗ ಅಸ್ತು ಎಂದಿರುವ ಕೇಂದ್ರ ಸರ್ಕಾರ, ಎನ್‌ಆರ್‌ಸಿ ನಿರಾಶ್ರಿತರಿಗೂ ಇಲ್ಲೇ ವಸತಿ ಕಲ್ಪಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಒಟ್ಟು 35 ಇಂತಹ ಕೇಂದ್ರಗಳನ್ನು ಆರಂಭಿಸುವುದಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಎನ್‌ಆರ್‌ಸಿ ಅಂದರೆ ಏನು?

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಇದು ಡಿಜಿಟಲ… ಸ್ವರೂಪದಲ್ಲಿ ಎಲ್ಲಾ ಭಾರತೀಯ ನಾಗರಿಕರ ಹೆಸರುಗಳು ಮತ್ತು ಮೂಲ ಜನಸಂಖ್ಯಾ ಮಾಹಿತಿಯನ್ನು ಹೊಂದಿರುವ ಪರಿಶೀಲಿಸಿದ ಡಿಜಿಟಲ… ನೋಂದಣಿ. 1955ರ ಪೌರತ್ವ ಕಾಯ್ದೆ ಪ್ರಕಾರ ಭಾರತದಲ್ಲಿ ಜನಿಸಿದವರು ಅಥವಾ ತಂದೆ-ತಾಯಿ ಭಾರತದವರಾಗಿದ್ದರೆ ಅಥವಾ ಕನಿಷ್ಠ 11 ವರ್ಷಗಳಿಂದ ಭಾರತದಲ್ಲಿ ನೆಲೆಸಿರುವವರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಈ ದತ್ತಾಂಶಗಳ ಡಿಜಿಟಲ್‌ ಸಂಗ್ರಹಣೆಯೇ ಎನ್‌ಆರ್‌ಸಿ.

ಅಕ್ರಮ ವಲಸಿಗರು ಎಂದರೆ ಯಾರು?

1955ರ ಪೌರತ್ವ ಕಾಯ್ದೆಯ ಪ್ರಕಾರ ಸಮಂಜಸವಾದ ಪ್ರವಾಸಿ ದಾಖಲೆಗಳಿಲ್ಲದೆ, ವೈಯಕ್ತಿಕ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದವರು ಮತ್ತು ಪ್ರವೇಶದ ಅವಧಿ ಮೀರಿದ್ದರೂ ದೇಶದಲ್ಲಿ ನೆಲಸಿರುವವರು ಅಕ್ರಮ ನಿವಾಸಿಗಳು. ಹೀಗೆ ಅಕ್ರಮವಾಗಿ ನೆಲೆಸಿದವರನ್ನು 1946ರ ವಿದೇಶಿಗರ ಕಾಯ್ದೆ, 1920ರ ಪಾರ್ಸ್‌ಪೋರ್ಟ್‌ ಕಾಯ್ದೆ ಅಡಿಯಲ್ಲಿ ಜೈಲಿಗೆ ಕಳುಹಿಸಬಹುದು. ಭಾರತ ಸರ್ಕಾರ 2014, ಡಿಸೆಂಬರ್‌ 31ರ ಒಳಗಾಗಿ ಭಾರತಕ್ಕೆ ಬಂದ ಅಷ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತ ಸರ್ಕಾರ ಇದರಿಂದ ವಿನಾಯಿತಿ ನೀಡಿದೆ.

ಪೌರತ್ವ ಕಾಯ್ದೆ ತಿದ್ದುಪಡಿಗೂ ಎನ್‌ಆರ್‌ಸಿಗೂ ಸಂಬಂಧವೇನು?

ಪೌರತ್ವ ಕಾಯ್ದೆ ಪ್ರಕಾರ ನಾಗರಿಕರನ್ನು ಧರ್ಮದ ಆಧಾರದದಲ್ಲಿ ವಿಭಾಗಿಸುವಂತಿಲ್ಲ. ಆದರೆ ಸರ್ಕಾರ ಈ ಅಂಶಕ್ಕೆ ತಿದ್ದುಪಡಿ ತಂದಿದೆ. ಅದರನುಸಾರ ಮುಸ್ಲಿಂ ಪ್ರಧಾನ ರಾಷ್ಟ್ರಗಳಾದ ಅಷ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್‌ ಅಕ್ರಮ ವಲಸಿಗರಿಗೆ ವಿನಾಯ್ತಿ ನೀಡಿದೆ. ಪ್ರಸ್ತುತ ಪೌರತ್ವ ಕಾಯ್ದೆ ಪ್ರಕಾರ, ಅರ್ಜಿ ಸಲ್ಲಿಸುವ ವ್ಯಕ್ತಿ ಕಳೆದ 12 ತಿಂಗಳಿಂದ ಭಾರತದಲ್ಲಿ ನೆಲೆಸುತ್ತಿರಬೇಕು. ಹಾಗೆಯೇ 11 ವರ್ಷ ಭಾರತದ ಪ್ರಜೆಯಾಗಿರಬೇಕು. ಈ ಮೇಲೆ ತಿಳಿಸಿದ 3 ದೇಶಗಳಿಂದ ಬಂದ 6 ಧರ್ಮಗಳಿಗೆ 11 ವರ್ಷವನ್ನು 6 ವರ್ಷಕ್ಕೆ ಇಳಿಸಿ ತಿದ್ದುಪಡಿ ಮಾಡಲಾಗಿದೆ.

 

click me!