ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪ ಖರೀದಿಸಿರುವ ಧ್ಯಾನಪೀಠದ ವಿವಾದಿತ ಪೀಠಾಧಿಪತಿ| ದ್ವೀಪದಲ್ಲಿ ಹೊಸ ದೇಶ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಸ್ವಾಮಿ ನಿತ್ಯಾನಂದ| ಕೈಲಾಸ'ಹೆಸರಿನ ದೇಶವನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿ ನಿತ್ಯಾನಂದ| ಕಾನೂನಾತ್ಮಕವಾಗಿ ಮಾನ್ಯಗೊಂಡ ಅಧಿಕೃತ ದೇಶವೊಂದನ್ನು ಸ್ಥಾಪಿಸಲು ನಿತ್ಯಾನಂದ ಪ್ರಯತ್ನ| ‘ಕೈಲಾಸ’ ‘ದೇಶ’ ಎಂಬ ಮಾನ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಗೆ ಅರ್ಜಿ| ದೇಶದ ಮಾನ್ಯತೆ ನೀಡಲು ನಿಯಮಾವಳಿ ರೂಪಿಸಿರುವ ವಿಶ್ವಸಂಸ್ಥೆ| ವಿಶ್ವಸಂಸ್ಥೆಯ ಮಾನದಂಡಗಳನ್ನು ಅನುಸರಿಸಿ ಪ್ರದೇಶವೊಂದಕ್ಕೆ ದೇಶದ ಮಾನ್ಯತೆ| 1993ರಲ್ಲಿ ನಡೆದ ಮಾಂಟೇವಿಡಿಯೋ ಸಮಾವೇಶದಲ್ಲಿ ಈ ಕುರಿತು ನಿರ್ಣಯ| ಜಗತ್ತಿನಲ್ಲಿ ಒಟ್ಟು 193 ದೇಶಗಳು ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದಿವೆ|
ಬೆಂಗಳೂರು(ಡಿ.04): ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವ ಕರ್ನಾಟಕದ ಬಿಡದಿ ಬಳಿಯ ಧ್ಯಾನಪೀಠದ ವಿವಾದಿತ ಪೀಠಾಧಿಪತಿ ನಿತ್ಯಾನಂದ, ಅಲ್ಲಿ 'ಕೈಲಾಸ'ಹೆಸರಿನ ದೇಶವನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾನೆ.
‘ಕೈಲಾಸ’ ‘ದೇಶ’ ಎಂಬ ಮಾನ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಗೆ ಅರ್ಜಿಯನ್ನೂ ಸಲ್ಲಿಸಲು ನಿತ್ಯಾನಂದ ಹೆಣಗುತ್ತಿದ್ದಾನೆ. ಅಂದರೆ ಕಾನೂನಾತ್ಮಕವಾಗಿ ಮಾನ್ಯಗೊಂಡ ಅಧಿಕೃತ ದೇಶವೊಂದನ್ನು ಸ್ಥಾಪಿಸಲು ನಿತ್ಯಾನಂದ ಪ್ರಯತ್ನಿಸುತ್ತಿದ್ದಾನೆ.
ನಿತ್ಯಾನಂದನಿಂದ ಹೊಸ ದೇಶ ಸ್ಥಾಪನೆ! ಎಲ್ಲಿದೆ ದೇಶ?
ಆದರೆ ನಿರ್ದಿಷ್ಟ ಪ್ರದೇಶವೊಂದಕ್ಕೆ ದೇಶದ ಮಾನ್ಯತೆ ನೀಡಲು ವಿಶ್ವಸಂಸ್ಥೆ ಕೆಲವು ನಿಯಮಾವಳಿಗಳನ್ನು ರೂಪಿಸಿದ್ದು, ವಿಶ್ವಸಂಸ್ಥೆಯ ಮಾನದಂಡಗಳನ್ನು ಅನುಸರಿಸಿ ನಿರ್ದಿಷ್ಟ ಪ್ರದೇಶವೊಂದಕ್ಕೆ ದೇಶದ ಸ್ಥಾನಮಾನ ನೀಡಲಾಗುತ್ತದೆ.
ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ದೇಶ ಅಥವಾ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿತವಾಗುತ್ತದೆ. ಕೆಲವು ಬಾರಿ ಇದಕ್ಕೆ ರಾಜ್ಯ ಎಂಬ ಪದವನ್ನೂ ಬಳಸಲಾಗುತ್ತದೆ
ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾ ಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು ರಾಜ್ಯವೆಂದೂ ಕರೆಯಲಾಗುತ್ತದೆ.
ಜಗತ್ತಿನಲ್ಲಿ ಒಟ್ಟು 193 ದೇಶಗಳು ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದಿವೆ. ಅಲ್ಲದೇ ಹಲವು ಪ್ರಾಂತ್ಯಗಳು, ಪಂಗಡಗಳು, ಸಂಸ್ಕೃತಿಗಳು ತಮ್ಮನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಿಕೊಂಡಿವೆ. ಇವುಗಳಲ್ಲಿ ಹಲವು ಪ್ರದೇಶಗಳಿಗೆ ವಿಶ್ವಸಂಸ್ಥೆ ಮನ್ನಣೆ ನೀಡಿದೆ.
1993ರಲ್ಲಿ ನಡೆದ ಮಾಂಟೇವಿಡಿಯೋ ಸಮಾವೇಶದಲ್ಲಿ ನಿರ್ಧರಿಸಿದಂತೆ ಸಾರ್ವಭೌಮ ರಾಷ್ಟ್ರಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.
1. ನಿಶ್ಚಿತ ಜನಸಂಖ್ಯೆ
2. ನಿಶ್ಚಿತ ಭೂಪ್ರದೇಶ
3. ಸರಕಾರ ಮತ್ತು
4. ಇತರ ದೇಶಗಳೊಂದಿಗೆ ರಾಜಕೀಯ ಸಂಬಂಧಗಳನ್ನು ಹೊಂದುವ ಸಾಮರ್ಥ್ಯ.
ಈ ಎಲ್ಲ ಕಾನೂನಾತ್ಮಕ ಗುಣಗಳನ್ನು ಹೊಂದಿದ ಪ್ರದೇಶವನ್ನು ಮಾತ್ರ ದೇಶ ಎಂದು ವಿಶ್ವಸಂಸ್ಥೆ ಪರಿಗಣಿಸುತ್ತದೆ. ಹೊಸ ದೇಶಕ್ಕಾಗಿ ಆಗ್ರಹ, ಹೊಸ ಪ್ರದೇಶಗಳನ್ನು ಸ್ಥಾಪಿಸುವ ಪ್ರಯತ್ನಗಳನ್ನು ಅದರ ಸಾಂದರ್ಭಿಕ ಅವಶ್ಯಕತೆಯನ್ನು ಪರಿಗಣಿಸಿ ವಿಶ್ವಸಂಸ್ಥೆ ಮಾನ್ಯ ಮಾಡುತ್ತದೆ.
ಈಕ್ವೆಡಾರ್ ಬಳಿ ನಿತ್ಯಾನಂದನಿಂದ ಸ್ವಂತ ದೇಶ ನಿರ್ಮಾಣ, ಏನೆಲ್ಲ ವ್ಯವಸ್ಥೆಗಳಿವೆ?
ಇಂತಹ ಪರಿಸ್ಥಿತಿಯಲ್ಲಿ ತಾನು ಹೊಸ ದೇಶ ಸ್ಥಾಪಿಸುವುದಾಗಿ ಘೋಷಿಸಿರುವ ನಿತ್ಯಾನಂದ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ನಿರ್ದಿಷ್ಟ ಕೋಮಿನ ಜನರಿಗೆ ಮಾತ್ರ ಈ ದೇಶದಲ್ಲಿ ಪ್ರವೇಶ ಎಂದಿರುವ ನಿತ್ಯಾನಂದನ ಅರ್ಜಿಯನ್ನು ವಿಶ್ವಸಂಸ್ಥೆ ಪರಿಗಣಿಸುವುದಿರಲಿ, ತೆರೆದೂ ನೋಡುವುದಿಲ್ಲ ಎಂಬುದು ಖಚಿತ.