ಆಫ್‌ಲೈನ್‌ನಲ್ಲೂ ಇನ್ನು ಆಧಾರ್‌ ದೃಢೀಕರಣ: ಹೊಸ ವ್ಯವಸ್ಥೆ ಜಾರಿ!

Published : Nov 11, 2021, 09:51 AM ISTUpdated : Nov 11, 2021, 10:07 AM IST
ಆಫ್‌ಲೈನ್‌ನಲ್ಲೂ ಇನ್ನು ಆಧಾರ್‌ ದೃಢೀಕರಣ: ಹೊಸ ವ್ಯವಸ್ಥೆ ಜಾರಿ!

ಸಾರಾಂಶ

* ಆಧಾರ್‌ ಪ್ರಾಧಿಕಾರದಿಂದ ಹೊಸ ಸವಲತ್ತು * ಆಫ್‌ಲೈನ್‌ನಲ್ಲೂ ಇನ್ನು ಆಧಾರ್‌ ದೃಢೀಕರಣ: ಹೊಸ ವ್ಯವಸ್ಥೆ ಜಾರಿ

ನವದೆಹಲಿ(ನ.11): ಆಧಾರ್‌ ದೃಢೀಕರಣವನ್ನು (Aadhar Verification) ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಮಾಡಬಹುದಾದ ಹೊಸ ವ್ಯವಸ್ಥೆಯನ್ನು ಆಧಾರ್‌ ಪ್ರಾಧಿಕಾರ ಜಾರಿಗೆ ತಂದಿದೆ. ಈಗ ಇರುವ ಆನ್‌ಲೈನ್‌ ದೃಢೀಕರಣಕ್ಕೆ ಹೆಚ್ಚುವರಿಯಾಗಿ ಜನರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.

ಬ್ಯಾಂಕ್‌ ಅಥವಾ ಇನ್ನು ಕೆಲವು ಸಂಸ್ಥೆಗಳು ತಮ್ಮ ಗ್ರಾಹಕರಿಂದ ಇ-ಕೆವೈಸಿ (e-KYC) ದೃಢೀಕರಣವನ್ನು ಕೇಳುತ್ತಿರುತ್ತವೆ. ಆಗ ಆಧಾರ್‌ ದೃಢೀಕರಣವು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಅಂದರೆ ಗ್ರಾಹಕರ ಮೊಬೈಲ್‌ಗೆ ಒಟಿಪಿ (OTP) ಬರುತ್ತದೆ. ಒಟಿಪಿ ಹೇಳಿದಾಗ ಆಧಾರ್‌ ಸಂಖ್ಯೆ ದೃಢೀಕರಣಗೊಂಡು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದು ಈವರೆಗಿನ ಆನ್‌ಲೈನ್‌ ದೃಢೀಕರಣ ವ್ಯವಸ್ಥೆ.

ಆದರೆ ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಆಧಾರ್‌ ದೃಢೀಕರಣ ನಡೆಸಬಹುದು. ಆಧಾರ್‌ ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ಆಫ್‌ಲೈನ್‌ ದೃಢೀಕರಣ ವ್ಯವಸ್ಥೆಯಲ್ಲಿ ಜನರು ತಮ್ಮೆಲ್ಲ ಆಧಾರ್‌ ವಿವರಗಳನ್ನು (ಹೆಸರು, ಆಧಾರ್‌ ಸಂಖ್ಯೆ, ವಿಳಾಸ, ಫೋಟೋ ಇತ್ಯಾದಿ) ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ವಿವರವೆಲ್ಲ ಕಂಪ್ಯೂಟರ್‌ ಅಥವಾ ಮೊಬೈಲ್‌ನ ಒಂದು ಫೋಲ್ಡರ್‌ನಲ್ಲಿ ಸಂಗ್ರಹವಾಗುತ್ತದೆ. ಬ್ಯಾಂಕ್‌ ಅಥವಾ ಇತರ ಇಲಾಖೆಗಳು ಗ್ರಾಹಕರಿಂದ ಇ-ಕೆವೈಸಿ ಕೇಳಿದಾಗ ಇದೇ ಫೋಲ್ಡರ್‌ನಲ್ಲಿನ ದತ್ತಾಂಶವನ್ನು ಹಸ್ತಾಂತರಿಸಬಹುದು. ಆಗ ಒಟಿಪಿ ಗೊಡವೆ ಇರುವುದಿಲ್ಲ. ಇದು ಹೊಸ ಆಫ್‌ಲೈನ್‌ ದೃಢೀಕರಣವಾಗಿದೆ.

ಇನ್ನು ತಮ್ಮ ಆಧಾರ್‌ ವಿವರಗಳನ್ನು ಸ್ವಯಂಚಾಲಿತವಾಗಿ ದೃಢೀಕರಣಕ್ಕೆ ಬಳಸಿಕೊಳ್ಳಕೂಡದು ಎಂದೂ ಜನರು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದು.

ಆಧಾರ್‌ ಕಾಯ್ದೆ ಉಲ್ಲಂಘನೆಗೆ ಇನ್ನು 1 ಕೋಟಿವೆರೆಗೂ ದಂಡ!

 

ಆಧಾರ್‌ (Aadhaar) ಕಾಯ್ದೆಯಡಿಗಿನ ಯಾವುದೇ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ 1 ಕೋಟಿ ರು.ವರೆಗೂ ದಂಡ ವಿಧಿಸುವ ಅವಕಾಶವನ್ನು ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಆಧಾರ್‌ ಪ್ರಾಧಿಕಾರಕ್ಕೆ ಇಂಥದ್ದೊಂದು ಅಧಿಕಾರ ನೀಡುವ ಸಲುವಾಗಿ 2019ರಲ್ಲೇ ಕೇಂದ್ರ ಸರ್ಕಾರ (central government) ಆಧಾರ್‌ ಮತ್ತು ಇತರೆ ಕಾನೂನು (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿತ್ತು. ಅದಾದ 2 ವರ್ಷಗಳ ಬಳಿಕ ಅಂದರೆ 2021ರ ನ.2ರಂದು ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಆಧಾರ್‌ ಪಡೆಯಲು ಸುಳ್ಳು ಮಾಹಿತಿ ನೀಡುವುದು, ಆಧಾರ್‌ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳುವುದು- ಇತ್ಯಾದಿ ಅಪರಾಧಗಳು ಇದರಡಿ ಬರುತ್ತವೆ.

ಈ ಕಾಯ್ದೆಯ ಅನ್ವಯ, ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರವು, ಇಂಥ ಕಾನೂನು ಜಾರಿಗೆ ‘ನಿರ್ಣಯ ಅಧಿಕಾರಿ’(Adjudicating officer) ಯೊಬ್ಬರನ್ನು ನೇಮಿಸಬಹುದು. ಇಂಥ ಅಧಿಕಾರಿಯು, ಭಾರತ ಸರ್ಕಾರದ ಜಂಟಿ ನಿರ್ದೇಶಕರ ಹುದ್ದೆಗಿಂತ ಕೆಳಗಿರಬಾರದು. ಕನಿಷ್ಠ 10 ವರ್ಷ ಅಧಿಕಾರ ನಡೆಸಿದ ಅನುಭವ ಇರಬೇಕು, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಿಷಯಗಳ ನಿರ್ವಹಣೆ, ಕಾನೂನು ಕುರಿತು ಮಾಹಿತಿ ಹೊಂದಿರಬೇಕು ಎಂದು ಸರ್ಕಾರ ಹೇಳಿದೆ.

ಹೀಗೆ UIDAI (Unique Identification Authority of India) ನೇಮಿಸಲ್ಪಟ್ಟ ಅಧಿಕಾರಿಯು, ಆಧಾರ್‌ ಕಾಯ್ದೆ ಅಥವಾ ನಿರ್ದೇಶನ ಪಾಲಿಸಲು ವಿಫಲವಾದ ಅಥವಾ ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರ ಬಯಸಿದ ಮಾಹಿತಿ ನೀಡಲು ವಿಫಲವಾದ, ಆಧಾರ್‌ ಕಾಯ್ದೆ ವ್ಯವಸ್ಥೆಯಡಿ ಬರುವ ಯಾವುದೇ ಸಂಸ್ಥೆಯ ವಿರುದ್ಧ ಬರುವ ದೂರಿನ ವಿರುದ್ಧ ಕ್ರಮ ಕೈಗೊಳ್ಳಬಹುದು. ಅರ್ಹ ಪ್ರಕರಣಗಳಲ್ಲಿ 1 ಕೋಟಿ ರುವರೆಗೂ ದಂಡ ವಿಧಿಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !