ಕಾಸರಗೋಡಿನ ಮಧೂರಲ್ಲಿ ಸೆರೆಸಿಕ್ಕ ನಕ್ಸಲ್‌ ಕೃಷ್ಣಮೂರ್ತಿ!

Published : Nov 11, 2021, 07:22 AM IST
ಕಾಸರಗೋಡಿನ ಮಧೂರಲ್ಲಿ ಸೆರೆಸಿಕ್ಕ ನಕ್ಸಲ್‌ ಕೃಷ್ಣಮೂರ್ತಿ!

ಸಾರಾಂಶ

* ಕೇರಳದಲ್ಲಿ ಮೊನ್ನೆ ಕೃಷ್ಣಮೂರ್ತಿ ಸೆರೆ * ಕಾಸರಗೋಡಿನ ಮಧೂರಲ್ಲಿ ಸೆರೆಸಿಕ್ಕ ನಕ್ಸಲ್‌ ಕೃಷ್ಣಮೂರ್ತಿ * ಸಾವಿತ್ರಿ, ಈತನಿಗೆ 9 ದಿನ ನ್ಯಾಯಾಂಗ ಬಂಧನ

ಕಣ್ಣೂರು(ನ.11): ಕೇರಳದ (Kerala) ಭಯೋತ್ಪಾದನಾ ನಿಗ್ರಹ ದಳಕ್ಕೆ ಸೆರೆ ಸಿಕ್ಕ ಕರ್ನಾಟಕ ಮೂಲದ ಕುಖ್ಯಾತ ನಕ್ಸಲ್‌ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ (Naxal Leader BG Krishnamurthy) ಮತ್ತು ಸಾವಿತ್ರಿ ಅವರನ್ನು ಕಾಸರಗೋಡು (kasaragodu) ಸಮೀಪದ ಮಧೂರು ಬಳಿ ವಶಕ್ಕೆ ಪಡೆಯಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ನಡುವೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಸ್ಥಳೀಯ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಇಬ್ಬರನ್ನೂ ಕೇರಳ ಪೊಲೀಸರು (Kerala Police) ಬುಧವಾರ ಭಾರಿ ಬಿಗಿ ಭದ್ರತೆಯಲ್ಲಿ ತಲಶ್ಶೇರಿಯ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

ತಿಂಗಳ ಹಿಂದೆ ಇದೇ ಎಟಿಎಸ್‌ (ATS) ಪಡೆ ವಯನಾಡು ಸಮೀಪ ಮೂವರು ನಕ್ಸಲರನ್ನು ಬಂಧಿಸಿತ್ತು. ಅವರು ನೀಡಿದ ಖಚಿತ ಸುಳಿವು ಆಧರಿಸಿ ಭಯೋತ್ಪಾದನಾ ನಿಗ್ರಹ ದಳವು ಹಲವು ದಿನಗಳಿಂದ ಕಾಸರಗೋಡಿನ ಮಧೂರಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಮೇಲೆ ಹದ್ದಿನ ಕಣ್ಣಿಟ್ಟು, ಮಂಗಳವಾರ ಇಬ್ಬರನ್ನೂ ವಶಕ್ಕೆ ಪಡೆಯಿತು ಎನ್ನಲಾಗಿದೆ.

ಹಲವು ಕೇಸು:

ಕೃಷ್ಣಮೂರ್ತಿ ವಿರುದ್ಧ ಕರ್ನಾಟಕ (Karnataka), ತಮಿಳುನಾಡು (Tamil Nadu), ಕೇರಳದ ಹಲವು ಪೊಲೀಸ್‌ ಠಾಣೆಗಳಲ್ಲಿ 29 ಪ್ರಕರಣ ಹಾಗೂ ಸಾವಿತ್ರಿ ವಿರುದ್ಧ 6 ಪ್ರಕರಣಗಳು ದಾಖಲಾಗಿವೆ. ಇಬ್ಬರ ವಿರುದ್ಧವೂ ಮಾವೋವಾದಿ ಸಿದ್ಧಾಂತ ಪ್ರಚಾರ, ಶಸ್ತ್ರಾಸ್ತ್ರ ಪೂರೈಕೆ, ಸಶಸ್ತ್ರ ದಂಗೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ತಿಂಗಳ ಹಿಂದೆ ವಯನಾಡು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಬಂಧನಕ್ಕೊಳಗಾಗಿದ್ದ ನಕ್ಸಲರು ನೀಡಿದ್ದ ಮಾಹಿತಿಯನ್ನು ಆಧರಿಸಿ ಮಧೂರು ಬಳಿ ಈ ಇಬ್ಬರನ್ನು ಬಂಧಿಸಲಾಗಿತ್ತು. ತೀರ್ಪಿನ ನಂತರ ಇಬ್ಬರನ್ನು ತ್ರಿಶೂರ್‌ ಜಿಲ್ಲೆಯ ವಿಯ್ಯೂರ್‌ ಕೇಂದ್ರಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

ಯಾರು ಈ ಕೃಷ್ಣಮೂರ್ತಿ?:

ಶೃಂಗೇರಿ (Sringeri) ತಾಲೂಕಿನ ಬುಕಡಿಬೈಲು ಗ್ರಾಮದ ನಿವಾಸಿ ಬಿ.ಜಿ. ಕೃಷ್ಣಮೂರ್ತಿ, ಪರಿಸರ, ನದಿ ಮೂಲ ಹಾಗೂ ಆದಿವಾಸಿಗಳ ಪರವಾಗಿ ಹೋರಾಟದಲ್ಲಿ ಗುರುತಿಸಿಕೊಂಡು 2002ರ ವೇಳೆಗೆ ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಶೃಂಗೇರಿ ಸಮೀಪದ ತಲಗಾರು ಬಳಿ ಪೊಲೀಸರ ಮೇಲೆ ದಾಳಿ ನಡೆದ ಸಂಬಂಧ 2004ರಲ್ಲಿ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಯಿತು. ನಂತರದಲ್ಲಿ ಜಿಲ್ಲೆಯ ವಿವಿಧೆಡೆ ನಕ್ಸಲೀಯರ ದಾಳಿಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ವಿರುದ್ಧ ಒಟ್ಟು 29 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 26 ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿದ್ದರೆ, ಇನ್ನುಳಿದ 3 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗಿವೆ. 2005ರಲ್ಲಿ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಸಾವಿನ ಬಳಿಕ, ಈತ ಕರ್ನಾಟಕದಲ್ಲಿ ನಕ್ಸಲ್‌ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ.

ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಸಾವಿತ್ರಿ ವಿರುದ್ಧ ಹರೂರುಮಕ್ಕಿ ಗ್ರಾಮದ ಅಚ್ಚುತಗೌಡ ಅವರ ಮನೆಗೆ ಭೇಟಿ ನೀಡಿದ ಕಾರಣಕ್ಕಾಗಿ ಮೊದಲ ಬಾರಿಗೆ 2007ರಲ್ಲಿ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ