ನವದೆಹಲಿ (ಜ.06): ಕೊರೋನಾದಿಂದ (Corona) ಪಾರಾಗಲು ದೇಶದಲ್ಲಿ ಬೂಸ್ಟರ್ ಡೋಸ್‌ಗೆ (Booster Dose) ಅರ್ಹವಿರುವವರಿಗೆ ಲಸಿಕೆಗಳ ಮಿಶ್ರಣ ನೀಡುವುದಿಲ್ಲ. ಬದಲಿಗೆ ಅವರು ಪಡೆದ ಮೊದಲೆರಡು ಡೋಸ್‌ಗಳ ಲಸಿಕೆಯನ್ನೇ (Vaccination) ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ ಎಂದು ಭಾರತದ (India) ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ ಪೌಲ್ ತಿಳಿಸಿದ್ದಾರೆ. ಈ ಪ್ರಕಾರ ಸೀರಂ ಸಂಸ್ಥೆಯ ಕೋವಿ ಶೀಲ್ಡ್ ಲಸಿಕೆಯ ಮೊದಲೆರಡು ಡೋಸ್ ಪಡೆದವರಿಗೆ ಅದೇ ಲಸಿಕೆಯ 3ನೇ ಡೋಸ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪಡೆದವರಿಗೆ 3ನೇ ಡೋಸ್ ಅನ್ನು ಅದೇ ಲಸಿಕೆ ನೀಡಲಾಗುತ್ತದೆ.
ಲಸಿಕೆಯ (Vaccination) ಮೊದಲೆರಡು ಡೋಸ್‌ಗಳನ್ನು ಪಡೆದ ವ್ಯಕ್ತಿಗಳಿಗೆ ಅದೇ ಲಸಿಕೆಯ 3ನೇ ಡೋಸ್ (Dose) ಅನ್ನು ಮಾತ್ರವೇ ನೀಡಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳ ಮಿಶ್ರಣದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.
undefined
ದೇಶಾದ್ಯಂತ ಒಮಿಕ್ರೋನ್ (Omicron) ಅಟ್ಟಹಾಸ ತೀವ್ರವಾದ ಬಳಿಕ ಅಗತ್ಯವಿರುವವರೆಗೆ ಬೂಸ್ಟರ್ ಡೋಸ್ ನೀಡುವುದಾಗಿ ಪ್ರಧಾನಿ ಮೋದಿ (Prime Minister Modi) ಅವರು ಘೋಷಣೆ ಮಾಡಿದರು. ಅದರಂತೆ ಜ.10ರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್ ಅಭಿಯಾನ ಆರಂಭವಾಗಲಿದೆ.
ಅಲ್ಲದೆ ಕಳೆದ ವಾರವಷ್ಟೇ ಕೋವಿಡ್ (Covid) ವಿರುದ್ಧದ ಭಾರತದ ಬತ್ತಳಿಕೆಗೆ ಸೇರ್ಪಡೆಯಾಗಿರುವ ಕೋರ್ಬೆವ್ಯಾಕ್ಸ್ ಮತ್ತು ಕೋವೋವ್ಯಾಕ್ಸ್ ಲಸಿಕೆಗಳನ್ನು ಬೂಸ್ಟರ್ ಡೋಸ್‌ಗೆ ಪರಿಗಣಿಸುವ ಸಾಧ್ಯತೆಯಿಲ್ಲ ಎಂದು ದೇಶದ ಲಸಿಕಾಕರಣದ ಅಧ್ಯಕ್ಷ ಡಾ. ಅರೋರಾ ತಿಳಿಸಿದ್ದಾರೆ. ದೇಶಾದ್ಯಂತ ಈಗಾಗಲೇ 147 ಡೋಸ್‌ಗಳನ್ನು ನೀಡಿದ್ದು, ಇದರಲ್ಲಿ 61.8 ಕೋಟಿ ಮಂದಿಗೆ 2ನೇ ಡೋಸ್ ನೀಡಲಾಗಿದೆ.
ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ : ಕೋವಿಡ್-19 ಬೂಸ್ಟರ್ ಡೋಸ್ ಪಡೆಯಲು 60 ವರ್ಷ ಮೇಲ್ಪಟ್ಟರೋಗಪೀಡಿತರು ವೈದ್ಯಕೀಯ ಪ್ರಮಾಣಪತ್ರ ಒದಗಿಸಬೇಕು. ಈ ಮೂಲಕ ತಮಗಿರುವ ಕಾಯಿಲೆಗಳ ಬಗ್ಗೆ ವಿವರ ನೀಡಬೇಕು. ಪಟ್ಟಿಮಾಡಿದ ನಿರ್ದಿಷ್ಟ20 ಕಾಯಿಲೆಗಳಿರುವ ವಯೋವೃದ್ಧರಿಗೆ ಮುಂಜಾಗ್ರತಾ ಡೋಸ್ ನೀಡಲಾಗುತ್ತದೆ ಎಂದು ಕೋವಿನ್ ಪ್ಲಾರ್ಟ್‌ಫಾಮ್‌ರ್ ಮುಖ್ಯಸ್ಥ, ರಾಷ್ಟ್ರೀಯ ಆರೋಗ್ಯ ಇಲಾಖೆ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್.ಶರ್ಮಾ ತಿಳಿಸಿದ್ದಾರೆ.
ಹೃದಯ ಸಮಸ್ಯೆ, ಮಧುಮೇಹ, ಸ್ಟೆಮ್ ಸೆಲ್ ಕಸಿ, ಕಿಡ್ನಿ ಸಂಬಂಧಿತ ಕಾಯಿಲೆ, ಕ್ಯಾನ್ಸರ್, ಸಿರೋಸಿಸ್ ಮುಂತಾದ 20 ಕಾಯಿಲೆಗಳಿರುವ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇಂಥ ರೋಗಿಗಳು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ನೋಂದಾಯಿತ ವೈದ್ಯರ ಸಹಿ ಇರಬೇಕು. ಫಲಾನುಭವಿಗಳು ಇದನ್ನು ಸ್ವತಃ ಕೋವಿನ್ 2.0 ವೆಬ್‌ಸೈಟಲ್ಲಿ ಅಪ್ಲೋಡ್ ಮಾಡಬಹುದು ಅಥವಾ ಲಸಿಕಾ ಕೇಂದ್ರಕ್ಕೆ ಹಾರ್ಡ್ ಕಾಪಿ ತಂದು ನಂತರ ಲಸಿಕೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಮಕ್ಕಳಿಗೆ, ವಯಸ್ಕರಿಗೆ ನೀಡಲು ಬೇಕು 20 ಕೋಟಿ ಡೋಸ್ ಲಸಿಕೆ
15-18ರ ವಯೋಮಾನದ ಮಕ್ಕಳಿಗೆ ಲಸಿಕೆ, ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ವಯೋವೃದ್ಧರಿಗೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ನೀಡುವ ಕೇಂದ್ರದ ನಿರ್ಧಾರದಿಂದಾಗಿ ಹೆಚ್ಚುವರಿ 20 ಕೋಟಿ ಡೋಸ್ ಲಸಿಕೆ ಅಗತ್ಯ ಬೀಳಲಿದೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 7.4 ಕೋಟಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿದ್ದಾರೆ. 13.79 ಕೋಟಿ 60 ವರ್ಷ ಮೇಲ್ಪಟ್ಟವಯಸ್ಕರಿದ್ದಾರೆ. ಈ ಪೈಕಿ ಶೇ.75ರಷ್ಟುಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಸಚಿವಾಲಯದ ವರದಿ ಹೇಳಿದೆ. ಅಂದರೆ 13.79 ಕೋಟಿ ಜನರ ಪೈಕಿ 10 ಕೋಟಿ ಜನರು ಬೂಸ್ಟರ್ ಡೋಸ್ ಪಡೆಯುವ ಅರ್ಹತೆ ಪಡೆಯುತ್ತಾರೆ. ಇವರ ಜೊತೆ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಹೀಗಾಗಿ 20 ಕೋಟಿಗಿಂತ ಹೆಚ್ಚಿನ ಡೋಸ್ ಹೆಚ್ಚುವರಿ ಡೋಸ್ ಲಸಿಕೆ ಬೇಕಾಗಿ ಬರಲಿದೆ.