ರಸ್ತೆಯಲ್ಲಿ ಸಭೆ ಸಮಾವೇಶ ನಡೆಸಲು ಅನುಮತಿ ಇಲ್ಲ: ಆಂಧ್ರಪ್ರದೇಶ ಸರ್ಕಾರ ಆದೇಶ

By Kannadaprabha NewsFirst Published Jan 4, 2023, 11:30 AM IST
Highlights

ರಾಜ್ಯದಲ್ಲಿ ರಸ್ತೆ, ಹೆದ್ದಾರಿಗಳಲ್ಲಿ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದನ್ನು ನಿಷೇಧಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ವಾರ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಎರಡು ಸಮಾವೇಶಗಳಲ್ಲಿ 11 ಜನರು ಕಾಲ್ತುಳಿತಕ್ಕೆ ತುತ್ತಾದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅಮರಾವತಿ : ರಾಜ್ಯದಲ್ಲಿ ರಸ್ತೆ, ಹೆದ್ದಾರಿಗಳಲ್ಲಿ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದನ್ನು ನಿಷೇಧಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ವಾರ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಎರಡು ಸಮಾವೇಶಗಳಲ್ಲಿ 11 ಜನರು ಕಾಲ್ತುಳಿತಕ್ಕೆ ತುತ್ತಾದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. 1861ರ ಪೊಲೀಸ್‌ ಕಾಯ್ದೆ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ಎಲ್ಲಾ ಜಿಲ್ಲಾಡಳಿತಗಳು ಜನರ ಓಡಾಟಕ್ಕೆ ಅಡ್ಡಿಯಾಗದ, ಸಂಚಾರಕ್ಕೆ ಅಡ್ಡಿ ಮಾಡದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪ್ರತಿಭಟನೆ, ರಾರ‍ಯಲಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು ಎಂದು ಸೂಚಿಸಿದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಇಂಥ ಸಭೆ ಮತ್ತು ಸಮಾವೇಶಗಳಿಗೆ ಅವಕಾಶ ನೀಡಬಹುದು ಎಂದು ಹೇಳಿದೆ. ಇತ್ತೀಚೆಗೆ ಕಂದಕೂರಿನಲ್ಲಿ ನಡೆದ ಘಟನೆಯು ರಸ್ತೆ, ಹೆದ್ದಾರಿಗಳಲ್ಲಿ ಸಭೆ, ಸಮಾವೇಶ ನಡೆಸಿದರೆ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ಎಂದು ಸರ್ಕಾರ ಹೇಳಿದೆ. ಆದರೆ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದ್ದು, ಅತ್ಯಂತ ಕ್ರೂರ ಎಂದು ಬಣ್ಣಿಸಿವೆ.

ನಾಯ್ಡು ಸಭೆಯಲ್ಲಿ  ಕಾಲ್ತುಳಿತಕ್ಕೆ ಮೂರು ಬಲಿ,

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಯೋಜಿಸಿದ್ದ ಸಮಾವೇಶದಲ್ಲಿ ಎರಡು ಬಾರಿ ಕಾಲ್ತುಳಿತ ಸಂಭವಿಸಿ ಒಟ್ಟು 11 ಜನ ಸಾವಿಗೀಡಾಗಿದ್ದಾರೆ. ಮೊದಲಿಗೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ನಾಯ್ಡು ಸಮಾವೇಶದಲ್ಲಿ ಒಟ್ಟು 8 ಜನ ಸಾವಿಗೀಡಾಗಿದ್ದರು. ಈ ಘಟನೆ ಮಾಸುವ ಮೊದಲೇ ಮತ್ತೆ ಅದೇ ರೀತಿಯ ದುರಂತವೊಂದು ಸಂಭವಿಸಿತ್ತು.  ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕಾಲ್ತುಳಿತ ಉಂಟಾಗಿ ಮೂವರು ಸಾವನ್ನಪ್ಪಿದ್ದರು. ಕಾರ‍್ಯಕ್ರಮ ಮುಗಿಸಿ ನಾಯ್ಡು ತೆರಳಿದ ಬಳಿಕ ಈ ದುರ್ಘಟನೆ ಸಂಭವಿಸಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪಡಿತರ ಚೀಲಗಳನ್ನು ವಿತರಿಸುವ ಕಾರ್ಯಕ್ರಮವನ್ನು ಟಿಡಿಪಿ ಆಯೋಜಿಸಿತ್ತು. ಇದನ್ನು ಪಡೆದುಕೊಳ್ಳಲು ಜನ ಒಂದೇ ಬಾರಿಗೆ ಧಾವಿಸಿದ ಕಾರಣ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಮತ್ತೆ ಕಾಲ್ತುಳಿತ: ಮೂವರ ಸಾವು, ಹಲವರಿಗೆ ಗಾಯ

ಘಟನೆ ಬಗ್ಗೆ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಎಲ್ಲ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಒಂದೇ ವಾರದಲ್ಲಿ ನಡೆದ 2ನೇ ಕಾಲ್ತುಳಿತ ಪ್ರಕರಣ ಇದಾಗಿತ್ತು. ಇತ್ತ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ 8 ಜನರಿಗೆ ತಲಾ 28 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಟಿಡಿಪಿ ಪಕ್ಷವು ಘೋಷಣೆ ಮಾಡಿದ ತಲಾ 24 ಲಕ್ಷ ಪರಿಹಾರದ ಚೆಕ್‌ನ್ನು ಚಂದ್ರಬಾಬು ನಾಯ್ಡು ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ, ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ಮೋಹನ್‌ ರೆಡ್ಡಿ ಪ್ರತ್ಯೇಕವಾಗಿ ಮೃತಪಟ್ಟವರಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ರೋಡ್‌ಶೋದಲ್ಲಿ ಭೀಕರ ಕಾಲ್ತುಳಿತ, 8 ಸಾವು ಹಲವರು ಗಂಭೀರ!

click me!