ದೀಪಾವಳಿ ಹಬ್ಬಕ್ಕೂ ಈ ಊರಲ್ಲಿ ಮನೆಗೆ ಬಣ್ಣ ಹಚ್ಚಲ್ಲ, ಕಪ್ಪು ಬಟ್ಟೆ, ಚಪ್ಪಲಿ ಧರಿಸಲ್ಲ! 400 ವರ್ಷಗಳ ವಿಚಿತ್ರ ಸಂಪ್ರದಾಯವೇನು?

Published : Nov 07, 2026, 11:59 AM ISTUpdated : Nov 07, 2026, 12:30 PM IST
Kachhaliya village strange traditions

ಸಾರಾಂಶ

ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಕಚಲಿಯಾ ಗ್ರಾಮದಲ್ಲಿ ಕಳೆದ 400 ವರ್ಷಗಳಿಂದ ಮನೆಗಳಿಗೆ ಬಣ್ಣ ಬಳಿಯುವಂತಿಲ್ಲ. ಇಲ್ಲಿ ಕಪ್ಪು ಬಟ್ಟೆ, ಚಪ್ಪಲಿ ಧರಿಸುವುದು ಮತ್ತು ಕುದುರೆ ಏರುವುದು ಸಂಪೂರ್ಣ ನಿಷಿದ್ಧವಾಗಿದೆ. ಬಾಬಾ ಕಾಳೇಶ್ವರ ಮತ್ತು ಭೈರವ ಬಾಬಾ ಮೇಲಿನ ನಂಬಿಕೆಯಿಂದ ಈ ವಿಚಿತ್ರ ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ.

ಮದ್ಯಪ್ರದೇಶದಲ್ಲಿ ಒಂದು ಗ್ರಾಮವಿದೆ. ಅಲ್ಲಿ ನಿನ್ನೆ ಮೊನ್ನೆಯಿಂದಲ್ಲ ಬರೋಬ್ಬರಿ ನಾಲ್ಕು ನೂರು ವರ್ಷಗಳಿಂದಲೂ ವಿಚಿತ್ರ ಸಂಪ್ರದಾಯವೊಂದು ಆಚರಿಸಲಾಗುತ್ತಿದೆ. ಇಲ್ಲಿನ ಮನೆಗಳಿಗೆ ಯಾವ ಹಬ್ಬ ಹರಿದಿನಗಳಿಗೂ ಮನೆಗಳಿಗೆ ಬಣ್ಣ ಬಳಿಯುವುದಿಲ್ಲ. ಕಪ್ಪು ಬಟ್ಟೆ ಧರಿಸುವಂತಿಲ್ಲ, ಚಪ್ಪಲಿ ಹಾಕುವಂತಿಲ್ಲ. ಅದರ ಹಿನ್ನೆಲೆ, ಕಾರಣಗಳು ಕೂಡ ವಿಚಿತ್ರವಾಗಿವೆ. ಅದೇನೆಂಬುದು ಇಲ್ಲಿ ತಿಳಿಯೋಣ.

ಈ ಊರಲ್ಲಿ 400 ವರ್ಷಗಳಿಂದ ಮನೆಗಳಿಗೆ ಬಣ್ಣ ಬಳಿದಿಲ್ಲ!

ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿರುವ ಈ ವಿಚಿತ್ರ ಗ್ರಾಮದಲ್ಲಿ ಕಳೆದ ನಾಲ್ಕು ನೂರು ವರ್ಷಗಳಿಂದಲೂ ಮನೆಗಳಿಗೆ ಬಣ್ಣ ಬಳಿದಿಲ್ಲ, ಹಾಗೆ ಬಣ್ಣ ಬಳಿಯುವಂತೆಯೂ ಇಲ್ಲ. ಕಪ್ಪು ಬಟ್ಟೆ, ಶೂ, ಚಪ್ಪಲಿ ಸಂಪೂರ್ಣ ನಿಷಿದ್ಧ. ಕುಡಿಯುವ ನೀರು ಕೂಡ ಬಟ್ಟೆಯಲ್ಲಿ ಸೋಸಿ ಕುಡಿಯುವದಕ್ಕೂ ಅವಕಾಶವಿಲ್ಲ. ಇನ್ನು ವಿಚಿತ್ರವೆಂದರೆ ಇಲ್ಲಿನ ದೇವಸ್ಥಾನದ ಮುಂಭಾಗದಿಂದ ಕುದುರೆ ಏರಿ ಮಧುಮಗ ಹೋಗುವಂತಿಲ್ಲ.

ಮಧ್ಯಪ್ರದೇಶದ ಕಚಲಿಯ ಗ್ರಾಮದಲ್ಲಿನ ವಿಚಿತ್ರ ಆಚರಣೆಗಳು!

ಹಿಂದಿನ ಆಚರಣೆಯ ಕಾರಣ ಏನಿತ್ತೋ. ಆದರೆ ಈಗ ಕಾಲ ಬದಲಾಗಿದೆ. ಜಗತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿದ್ದರೆ ಈ ಗ್ರಾಮದಲ್ಲಿ ಮಾತ್ರ ಕಳೆದ ನಾಲ್ಕು ನೂರು ವರ್ಷಗಳಿಂದಲೂ ಸಂಪ್ರದಾಯಗಳನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಹೀಗೆ ವಿಚಿತ್ರ ಆಚರಣೆಯಿಂದ ಸುದ್ದಿಯಲ್ಲಿರುವ ಸ್ಥಳವೇ ಮಧ್ಯಪ್ರದೇಶದ ಕಚಲಿಯಾ (Kachhaliya) ಗ್ರಾಮ.

ಈ ಹಳ್ಳಿ ರತ್ಲಾಂ ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ತಾಲ್ ಮತ್ತು ಅಲೋಟ್ ಪಟ್ಟಣಗಳ ನಡುವೆ ಇದೆ. ಈ ಊರಲ್ಲಿ ಸುಮಾರು 700 ಮನೆಗಳಿದ್ದು, 1,200ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದ ಜನರ ಧಾರ್ಮಿಕ ನಂಬಿಕೆಗಳು ಇಲ್ಲಿನ ಬಾಬಾ ಕಾಳೇಶ್ವರ ಮತ್ತು ಭೈರವ ಬಾಬಾ ಅವರೊಂದಿಗೆ ಬೆಸೆದುಕೊಂಡಿವೆ. ಇಲ್ಲಿನ ವಿಚಿತ್ರ ಆಚರಣೆಗಳಿಗೂ ಇದೇ ಕಾರಣ ಎನ್ನಲಾಗಿದೆ.

400 ವರ್ಷಗಳಿಂದಲೂ ಮನೆಗಳಿಗೆ ಬಣ್ಣ ಹಚ್ಚಿಲ್ಲ!

ಈ ಗ್ರಾಮದ ಅತ್ಯಂತ ವಿಶೇಷ ಮತ್ತು ವಿಚಿತ್ರವೆನಿಸುವ ಸಂಪ್ರದಾಯವೆಂದರೆ ಇಲ್ಲಿನ ಯಾವ ಮನೆಯಲ್ಲಿಗೂ ಬಣ್ಣ ಕಾಣುವುದಿಲ್ಲ. ಯಾವುದೆ ಹಬ್ಬ, ಮದುವೆ, ಮುಂಜಿ ಕಾರ್ಯಕ್ರಮ ಇದ್ರೂ ಇಲ್ಲಿನ ಮನೆಗಳಿಗೆ ಬಣ್ಣ ಹಚ್ಚುವಂತಿಲ್ಲ. ಈ ಸಂಪ್ರದಾಯವನ್ನು ಸುಮಾರು ನಾಲ್ಕು ನೂರು ವರ್ಷಗಳಿಂದಲೂ ಕಟ್ಟುನಿಟ್ಟಾಗಿ ಗ್ರಾಮಸ್ಥರು ಪಾಲಿಸಿಕೊಂಡು ಬರಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಆಚರಣೆಯ ಹಿಂದೆ ಸ್ಥಳೀಯವಾಗಿ ಒಂದು ಕಥೆಯಿದೆ, ಹಿಂದೆ ಯಾರೋ ಬಾಬಾ ಕಾಳೇಶ್ವರ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ರಂತೆ. ಆ ಘಟನೆಯ ಬಳಿಕ ಮನೆಗೆ ಬಣ್ಣ ಬಳಿದರೆ ಕೆಡುಕು ಆಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಹುಟ್ಟಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಯಾರೂ ಮನೆಗಳಿಗೆ ಬಣ್ಣ ಬಳಿದಿಲ್ಲ. ಇತ್ತೀಚೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳಿಗೂ ಬಣ್ಣ ಬಳಿದಿಲ್ಲ. ಈ ಸಂಪ್ರದಾಯ ಮೀರಿ ಯಾರೂ ಮನೆಗೆ ಹಚ್ಚಿದರಂತೆ. ಬಣ್ಣ ಹಚ್ಚಿದ ಬಳಿಕ ಆ ಮನೆಯವರಿಗೆ ಆರ್ಥಿಕ ಸಂಕಷ್ಟ, ನಷ್ಟ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ಇಂತಹ ಘಟನೆಗಳಿಗೂ ಮನೆಗಳಿಗೆ ಬಣ್ಣ ಬಳಿಯುವುದಕ್ಕೂ ಯಾವುದೇ ವೈಜ್ಞಾನಿಕ ಸಂಬಂಧ ಸಾಬೀತಾಗಿಲ್ಲ.

ಕಪ್ಪು ಬಟ್ಟೆ, ಕಾಲಿಗೆ ಧರಿಸುವಂತಿಲ್ಲ!

ಇನ್ನು ವಿಚಿತ್ರ ಎಂದರೆ ಈ ಗ್ರಾಮದಲ್ಲಿ ಯಾರೂ ಕಪ್ಪು ಬಟ್ಟೆ ಧರಿಸುವದಿಲ್ಲ. ಕಪ್ಪು ಬಟ್ಟೆ ಬಿಡಿ. ಕಾಲಿಗೂ ಚಪ್ಪಲಿ ಕೂಡ ಹಾಕುವಂತಿಲ್ಲ, ಶೂ, ಸಾಕ್ಸ್ ಕೂಡ ಹಾಕಿಕೊಳ್ಳುವುದು ನಿಷೇಧ. ಇಲ್ಲಿ ಖೋವಾ ತಯಾರಿಸುವ ಕುಲುಮೆಗಳಾಗಲಿ, ಇಟ್ಟಿಗೆ ಸುಡುವ ಭಟ್ಟಿಗಳಾಗಲಿ ಇಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಕಟ್ಟುನಿಟ್ಟಿನ ಸಂಪ್ರದಾಯ ಪಾಲಿಸುತ್ತಾರೆ. ಇಲ್ಲಿ ಬಾವಿಯಿಂದ ತಂದ ನೀರು ಬಟ್ಟೆಯಲ್ಲಿ ಸೋಸುವಂತಿಲ್ಲ. ನೇರವಾಗಿ ಕುಡಿಯಬೇಕು. ಸೋಸಿ ಕುಡಿಯುವುದು ಸಂಪ್ರದಾಯಕ್ಕೆ ವಿರುದ್ಧವೆಂದು ಗ್ರಾಮಸ್ಥರು ಹೇಳುತ್ತಾರೆ.

ಕಳೆದ ಮೂವತ್ತು ವರ್ಷಗಳಿಂದ ಈ ಗ್ರಾಮದಲ್ಲೇ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಅನಿಲ್ ಪಾಠಕ್ ಎಂಬುವವರು ಹೇಳುವಂತೆ, ಈ ಆಚರಣೆಗಳು ತಲೆಮಾರುಳಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ.

ದೇವಸ್ಥಾನದ ಮುಂದೆ ಕುದುರೆ ಏರುವಂತಿಲ್ಲ!

ಕಚಲಿಯಾ ಗ್ರಾಮದಲ್ಲಿ ಮದುವೆ ಸಮಾರಂಭಗಳಿಗೂ ಕೆಲವು ವಿಚಿತ್ರ ನಿಯಮಗಳಿವೆ. ಮದುಮಗ ದೇವಸ್ಥಾನ ಮುಂದೆ ಕುದುರೆ ಏರಿ ಮೆರವಣಿಗೆ ಹೋಗುವಂತಿಲ್ಲ. ಇಲ್ಲಿನ ಭೈರವ ಬಾಬಾ ದೇವಸ್ಥಾನ ಮುಂದಿನಿಂದ ಸಾಗುವಂತಿಲ್ಲ. ದೇವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸಂಪ್ರದಾಯ ಪಾಲಿಸಲಾಗುತ್ತಿದೆಯಂತೆ!

ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆಯುವ ಭಕ್ತರು!

ಕಚಲಿಯಾ ಗ್ರಾಮದ ಮತ್ತೊಂದು ಅಚ್ಚರಿಯ ಸಂಪ್ರದಾಯ ಎಂದರೆ ಧುಲಂಡಿ ಹಬ್ಬ. ಈ ಹಬ್ಬದಂದು ದೇವಸ್ಥಾನದಲ್ಲಿ'ಚೂಲ್' ಎಂಬ ಧಾರ್ಮಿಕ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ನೂರಾರು ಭಕ್ತರು ಉರಿಯುತ್ತಿರುವ ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ. ಈ ಆಚರಣೆ ನೋಡಲೆಂದೇ ಸುತ್ತಮುತ್ತಲಿನ ಗ್ರಾಮಸ್ಥರು ಕಚಲಿಯಾ ಗ್ರಾಮಕ್ಕೆ ಬರುತ್ತಾರೆ. ಅಂದಹಾಗೆ ಕಚಲಿಯಾ ಗ್ರಾಮದಲ್ಲಿ ರಜಪೂತ್, ಧಾಕಡ್, ಗೋಸ್ವಾಮಿ ಸೇರಿದಂತೆ ಹಲವು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಸಮುದಾಯ ಭೇದವಿಲ್ಲ ಎಲ್ಲರೂ ಒಟ್ಟಾಗಿ ವಾಸಿಸುತ್ತಾರೆ. ಬಹುತೇಕರು ಹಿಂದಿನ ಸಂಪ್ರಾದಯಗಳನ್ನು ಪಾಲಿಸುತ್ತಾರೆ.

ಭಾರತ ಇಂದು ಆರ್ಥಿಕ, ತಾಂತ್ರಿಕವಾಗಿ ವೇಗವಾಗಿ ಬೆಳೆಯುತ್ತಿದ್ದರೂ ದೇಶದಲ್ಲಿ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರುವ ಕಚಲಿಯಾ ಗ್ರಾಮಗಳಿವೆ ಎಂಬುದು ಅಚ್ಚರಿ. ಇಂದು ಕಚಲಿಯಾ ಗ್ರಾಮದಲ್ಲಿ ಆಧುನಿಕ ಸೌಲಭ್ಯಗಳು ಬಂದಿವೆ. ಜನರ ಜೀವನ ಶೈಲಿಯಲ್ಲೂ ಬದಲಾವಣೆಗಳಾಗುತ್ತಿವೆ. ಆದರೂ ನಾಲ್ಕು ನೂರು ವರ್ಷಗಳ ಹಿಂದಿನ ನಂಬಿಕೆ ಮತ್ತು ಸಂಪ್ರದಾಯಗಳು ಇಂದಿಗೂ ಜನಜೀವನದ ಹಾಗೆಯೇ ಉಳಿದುಕೊಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಸಮಾರಂಭದಲ್ಲಿ ಶಾಸಕನ ವರ್ತನೆಗೆ ಆಕ್ಷೇಪ: ಸನ್‌ರೂಫ್‌ನಲ್ಲಿ ನಿಂತು ಚಾಲಕನಿಗೆ ಒದ್ದರಾ ಅನಂತ್ ಸಿಂಗ್?
ತಿರುಪತಿ ದೇವಸ್ಥಾನಕ್ಕೆ 208 ಕೋಟಿ ಮೌಲ್ಯದ ಚಿನ್ನವನ್ನು ದಾನ ಮಾಡಿದ್ದೇಕೆ ಅನ್ನೋದನ್ನ ತಿಳಿಸಿದ ಉದ್ಯಮಿ ವರ್ಧಮಾನ್‌ ಜೈನ್‌