ಭಾಷಾ ಸಂಘರ್ಷ ಬೇಕಿಲ್ಲ, ಮಾತೃಭಾಷೆ ಉಳಿಸಿ : ಶಾ

Kannadaprabha News   | Kannada Prabha
Published : Sep 15, 2025, 06:19 AM IST
Amit Shah

ಸಾರಾಂಶ

‘ಹಿಂದಿ ಮತ್ತು ಇತರೆ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ಪ್ರತಿಯೊಬ್ಬರು ತಮ್ಮ ಮಾತೃಭಾಷೆ ಉಳಿಸಿ ಬೆಳೆಸಿ ಬಳಸುವ ಮೂಲಕ ಅದನ್ನು ಜೀವಂತವಾಗಿಡಬೇಕು’ ಎಂದು ಕೇಂದ್ರ ಸಚಿವ ಅಮಿತ್‌ ಶಾ ಪ್ರತಿಪಾದಿಸಿದ್ದಾರೆ.

ಗಾಂಧಿನಗರ: ‘ಹಿಂದಿ ಮತ್ತು ಇತರೆ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ಪ್ರತಿಯೊಬ್ಬರು ತಮ್ಮ ಮಾತೃಭಾಷೆ ಉಳಿಸಿ ಬೆಳೆಸಿ ಬಳಸುವ ಮೂಲಕ ಅದನ್ನು ಜೀವಂತವಾಗಿಡಬೇಕು’ ಎಂದು ಕೇಂದ್ರ ಸಚಿವ ಅಮಿತ್‌ ಶಾ ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ದಕ್ಷಿಣದ ಹಲವು ರಾಜ್ಯಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿರುವ ಹೊತ್ತಿನಲ್ಲೇ ಅಮಿತ್‌ ಶಾ, ಇಂಥದ್ದೊಂದು ಭಾಷಾ ಸಾಮರಸ್ಯದ ಮಾತುಗಳನ್ನಾಡಿದ್ದಾರೆ.

5ನೇ ಅಖಿಲ ಭಾರತೀಯ ರಾಜ್‌ಭಾಷಾ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದ ಅಮಿತ್‌ ಶಾ, ‘ಭಾರತೀಯರು ತಮ್ಮ ಭಾಷೆ ಉಳಿಸಿಕೊಳ್ಳಬೇಕು. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳ ಜತೆಗೆ ಮಾತೃಭಾಷೆಯಲ್ಲೇ ಮಾತನಾಡಬೇಕು’ ಎಂದು ಕರೆ ನೀಡಿದರು.

ಇದೇ ವೇಳೆ, ‘ಶ್ರೀಕೃಷ್ಣದೇವರಾಯರು ಉತ್ತರ ಮತ್ತು ದಕ್ಷಿಣ ಎರಡೂ ಕಡೆ ಜನಪ್ರಿಯರಾಗಿದ್ದರು. ಸಂತ ಕಬೀರರ ದೋಹಾಗಳು ಕನ್ನಡ, ತಮಿಳು, ಮಲಯಾಳಂಗಳಂತಹ ದಕ್ಷಿಣದ ಭಾಷೆಗಳಿಗೂ ಅನುವಾದವಾಗಿವೆ’ ಎಂದ ಅವರು, ಭಾಷೆಗಳಿಗೆ ಗಡಿಯಿಲ್ಲ ಎಂಬ ಸಂದೇಶ ನೀಡಿದರು.

ಜೊತೆಗೆ, ‘ಹಿಂದಿ ಮತ್ತು ಅನ್ಯ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ದಯಾನಂದ ಸರಸ್ವತಿ, ಮಹಾತ್ಮಾಗಾಂಧಿ, ಕೆ.ಎಂ.ಮುನ್ಷಿ, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಮತ್ತು ಇತರ ವಿದ್ಯಾವಂತರು ಆ ಕಾಲದಲ್ಲೇ ಹಿಂದಿಯನ್ನು ಒಪ್ಪಿಕೊಂಡು ಪ್ರೋತ್ಸಾಹ ನೀಡಿದರು’ ಎಂದೂ ನೆನಪಿಸಿಕೊಂಡರು.

ಪೊಲೀಸ್‌ ಭಾಷೆಯೂ ಆಗಲಿ:

‘ಹಿಂದಿ ಕೇವಲ ಸಂಭಾಷಣೆಗಷ್ಟೇ ಸೀಮಿತವಾಗಬಾರದು. ಬದಲಿಗೆ ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ, ಪೊಲೀಸರ ಭಾಷೆಯೂ ಆಗಬೇಕು’ ಎಂದೂ ಶಾ ಕರೆಯಿತ್ತರು.

‘ಗುಜರಾತ್‌ನಲ್ಲಿ ಗುಜರಾತಿ ಮತ್ತು ಹಿಂದಿ ಜತೆಯಾಗಿ ಅಸ್ತಿತ್ವ ಉಳಿಸಿಕೊಂಡಿರುವುದು ಎರಡೂ ಭಾಷೆಗಳೂ ಜತೆಯಾಗಿ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಅತ್ಯದ್ಭುತ ಉದಾಹರಣೆ. ಹಿಂದಿಯು ಆಡಳಿತ ಭಾಷೆಯಷ್ಟೇ ಆಗಬಾರದು. ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ, ಪೊಲೀಸ್‌ ಭಾಷೆಯೂ ಆಗಬೇಕು. ಆಗ ಸಾರ್ವಜನಿಕರ ಜತೆಗೆ ಸಂಪರ್ಕ ಸುಲಭವಾಗುತ್ತದೆ. ಸಂಸ್ಕೃತವು ನಮಗೆ ಜ್ಞಾನದ ಗಂಗೆಯನ್ನೇ ನೀಡಿದ್ದರೆ, ಹಿಂದಿಯು ಈ ಜ್ಞಾನವನ್ನು ಮನೆಗೆ ಹರಿಸಿತು. ಸ್ಥಳೀಯ ಭಾಷೆಗಳು ಜ್ಞಾನವನ್ನು ಪ್ರತಿ ವ್ಯಕ್ತಿಗೂ ತಲುಪಿಸಿದವು’ ಎಂದು ಹೇಳಿದರು.

‘ಮಕ್ಕಳ ಭವಿಷ್ಯಕ್ಕೆ ಪೋಷಕರು ಅವರ ಜತೆಗೆ ಮಾತೃಭಾಷೆಯಲ್ಲೇ ಮಾತನಾಡುವುದು ಉತ್ತಮ. ಮನೋವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಕೂಡ ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಯೋಚನೆ ಮಾಡುತ್ತಾರೆ ಎಂದಿದ್ದಾರೆ. ನೀವು ಬೇರೆ ಭಾಷೆಯನ್ನು ಅವರ ಮೇಲೆ ಹೇರಲು ಮುಂದಾದಾಗ ಮಕ್ಕಳ ಶೇ.25ರಿಂದ ಶೇ.30ರಷ್ಟು ಸಾಮರ್ಥ್ಯವು ಅದನ್ನು ಭಾಷಾಂತರ ಮಾಡುವುದಕ್ಕೇ ವಿನಿಯೋಗವಾಗುತ್ತದೆ’ ಎಂದು ಶಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?