
ನವದೆಹಲಿ(ಫೆ.03): ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ಸಂಘಟನೆಗಳು, ಬಂಧಿತರ ಬಿಡುಗಡೆ ಆಗುವವರೆಗೆ ಹಾಗೂ ರೈತರ ಮೇಲಿನ ದೌರ್ಜನ್ಯ ನಿಲ್ಲುವವರೆಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಮಂಗಳವಾರ ಘೋಷಿಸಿವೆ.
ಇದೇ ವೇಳೆ ಫೆಬ್ರವರಿ 6ರಂದು ದೇಶಾದ್ಯಂತ ಮಾಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿವೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆ ಅಮಾನತುಗೊಳಿಸಿ ಈಗಲೂ ಮಾತುಕತೆಗೆ ಸರ್ಕಾರ ಸಿದ್ಧ ಎಂದಿದ್ದರು. ಮಾತುಕತೆ ಬಾಗಿಲು ಇನ್ನೂ ತೆರೆದಿದೆ ಎಂದು ಕಿಸಾನ್ ಮೋರ್ಚಾ ಹೇಳಿತ್ತು. ಆದರೆ ಮಂಗಳವಾರ ರೈತರ ಬಿಡುಗಡೆ ಮಾಡಬೇಕೆಂಬ ಷರತ್ತು ವಿಧಿಸಿದೆ. ಈ ಮೂಲಕ ಪ್ರತಿಭಟನೆ ಮತ್ತಷ್ಟುತೀವ್ರಗೊಳ್ಳಲಿದೆ ಎಂಬ ಸುಳಿವು ನೀಡಿವೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕಿಸಾನ್ ಮೋರ್ಚಾ, ‘ರಸ್ತೆಯ ಮೇಲೆ ಮೊಳೆ ಹೊಡೆಯಲಾಗುತ್ತಿದೆ. ತಗ್ಗು ತೋಡಲಾಗುತ್ತಿದೆ. ವೈರ್ ಕಟ್ಟಿಬ್ಯಾರಿಕೇಡ್ ಹಾಕಲಾಗುತ್ತಿದೆ. ಅಂತರ್ಜಾಲ ಸೇವೆಯನ್ನು ಸ್ತಬ್ಧ ಮಾಡಲಾಗುತ್ತಿದೆ ಹಾಗೂ ರೈತರ ಪ್ರತಿಭಟನಾ ಸ್ಥಳದಲ್ಲಿನ ತಾತ್ಕಾಲಿಕ ಶೌಚಾಲಯವನ್ನೂ ತೆರವುಗೊಳಿಸಲಾಗುತ್ತಿದೆ. ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರನ್ನು ಕಳಿಸಿ ನಮ್ಮ ಮೇಲೆ ಛೂಬಿಡಲಾಗುತ್ತಿದೆ. ಇದು ಎಲ್ಲ ಸರ್ಕಾರದ ಕುಟಿಲ ತಂತ್ರ’ ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸರ್ಕಾರದ ದೌರ್ಜನ್ಯ ನಿಲ್ಲುವವರೆಗೆ ಮತ್ತು ಬಂಧಿತ ರೈತರ ಬಿಡುಗಡೆ ವರೆಗೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದೆ.
ಗೋಡೆ ಬೇಡ- ಸೇತುವೆ ಕಟ್ಟಿ:
ಈ ನಡುವೆ, ರೈತರು ದಿಲ್ಲಿ ಪ್ರವೇಶಿಸದಂತೆ ತಡೆಯಲು ಸರ್ಕಾರವು ರಸ್ತೆಯ ಮೇಲೇ ಗೋಡೆಗಳನ್ನು ಕಟ್ಟುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ‘ಸರ್ಕಾರ ಸೇತುವೆ ಕಟ್ಟಬೇಕೇ ವಿನಃ ಗೋಡೆಗಳನ್ನಲ್ಲ’ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ