ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು ನೇತಾರ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಭಾನುವಾರ 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಪಟನಾ (ಜನವರಿ 27, 2024): ಬಿಹಾರದಲ್ಲಿ ರಾಜಕೀಯ ವಿಪ್ಲವ ಮುಂದುವರಿದಿದ್ದು, ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು ನೇತಾರ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಭಾನುವಾರ 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಹೊಸ ಜೆಡಿಯು-ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಬಿಜೆಪಿಗೆ 2 ಉಪಮುಖ್ಯಮಂತ್ರಿ ಸ್ಥಾನ ಲಭಿಸಲಿವೆ ಎಂದೂ ತಿಳಿದುಬಂದಿದೆ. ಬಿಹಾರದಲ್ಲಿ ಹೇಗೂ ಮುಂದಿನ ವರ್ಷ ಚುನಾವಣೆ
ನಡೆಯಬೇಕಿದೆ. ಹೀಗಾಗಿ ಈಗ ಆಸೆಂಬ್ಲಿ ವಿಷರ್ಜಿಸಲು ನಿತೀಶ್ ಮುಂದಾಗುವುದಿಲ್ಲ. ಇದರ ಬದಲು ಹಳೇ ಸ್ನೇಹಿತ ಬಿಜೆಪಿ ಜತೆ ಮತ್ತೆ ಒಂದುಗೂಡಿ ಸರ್ಕಾರ ರಚಿಸಲಿದ್ದಾರೆ. ಇದೇ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ತಕ್ಷಣದ ಗಮನ ಕೇಂದ್ರೀಕರಿಸಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನು ಓದಿ: ಯಾವುದೇ ಕ್ಷಣದಲ್ಲಿ ನಿತೀಶ್ ರಾಜೀನಾಮೆ! ಭಾನುವಾರ ಮತ್ತೆ ಸಿಎಂ ಆಗಿ ಪ್ರಮಾಣ ವಚನ; ಇಬ್ಬರು ಬಿಜೆಪಿ ನಾಯಕರಿಗೆ ಡಿಸಿಎಂ ಪಟ್ಟ?
ತೀವ್ರ ರಾಜಕೀಯ ಚಟುವಟಿಕೆ: ಗುರುವಾರ ನಿತೀಶ್ ಅವರು ಆರ್‌ಜೆಡಿ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಕುಟುಕು ಮಾತುಗಳನ್ನಾಡಿದ್ದರು. ಇದಕ್ಕೆ ಆರ್‌ಜೆಡಿ ಸಂಸ್ಥಾಪಕ ಲಾಲು ಯಾದವ್ ಅವರ ಪುತ್ರಿ ರೋಹಿಣಿ ತಿರುಗೇಟು ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕಡೆದ ಗಣರಾಜ್ಯೋತ್ಸವ ಚಹಾಕೂಟಕ್ಕೆ ನಿತೀಶ್ ಆಗಮಿಸಿದರೆ, ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗೈರು ಹಾಜರಾದರು.
ಇನ್ನು ಆರ್‌ಜೆಡಿ ನಾಯಕರು ನಿತೀಶ್ ಭೇಟಿಗೆ ಸಮಯ ಕೋರಿದ್ದರೂ, ಅವರು ಯಾವುದೇ ಉತ್ತರ ನೀಡಿಲ್ಲ ಎಂದು ಲಾಲೂ ಆಪ್ತ ಶಿವಾನಂದ ತಿವಾರಿ ಕಿಡಿ ಕಾರಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ಮತ್ತು ಜೆಡಿಯು- ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿವೆ ಎಂದು ಗೊತ್ತಾಗಿದೆ.
ನಿತೀಶ್ ಮುನಿಸು ಏಕೆ?: ಇಂಡಿಯಾ ಕೂಟಕ್ಕೆ ಕಳೆದ 4-5 ತಿಂಗಳಲ್ಲಿ ಯಾವುದೇ ವೇಗ ಸಿಕ್ಕಿಲ್ಲ, ಸದ್ಯದ ಪರಿಸ್ಥಿತಿ ನೋಡಿದರೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ದೂರವಾಗಿರುವುದು. ಆರ್‌ಜೆಡಿ ಸಚಿವರು ಯಾವುದೇ ವಿಷಯದಲ್ಲಿ ನಿತೀಶ್ ಜೊತೆ ಚರ್ಚಿಸದೇ ಇರುವುದು. ಮಹತ್ವದ ಖಾತೆಗಳ ನಿರ್ವಹಣೆಯಲ್ಲಿ ಆರ್‌ಜೆಡಿ ಸಚಿವರ ವೈಫಲ್ಯ, ಇಂಡಿಯ ಮೈತ್ರಿಕೂಟದ ನಾಯಕತ್ವ ನೀಡದಿರುವುದು ಮುನಿಸಿಗೆ ಕಾರಣವೆನ್ನಲಾಗಿದೆ.
ಸುಶೀಲ್, ಚೌಧರಿಗೆ ಪಟ್ಟ?
ಇನ್ನು ಬಿಜೆಪಿ ವತಿಯಿಂದ ಸುಶೀಲ್ ಮೋದಿ ಹಾಗೂ ಅಲೋಕ್ ಕುಮಾರ್ ಚೌಧರಿ ಉಪಮುಖ್ಯ ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಇದಕ್ಕೆ ಪೂರಕವಾಗಿ ಗಣರಾಜ್ಯ ದಿನದ ರಾಜ್ಯಪಾಲರ ಚಹಾಕೂಟಕ್ಕೆ ಡಿಸಿಎಂ ತೇಜಸ್ವಿ ಯಾದವ್ ಗೈರಾಗಿದ್ದರು. ಅವರ ಹಸರಿನಲ್ಲಿ ಕುರ್ಚಿ ಮೀಸಲಿರಿಸಿ ಅವರ ಹೆಸರಿನ ಸ್ಪಿಕ್ಟರ್ ಅಂಟಿಸಲಾಗಿತ್ತು, ಈ ಸ್ಟಿಕ್ಕರನ್ನು ಕಿತ್ತು ನಿತೀಶ್ ಪಕ್ಕದ ಆ ಸೀಟಿನಲ್ಲಿ ಚೌಧುರಿ ಅವರು ಕೂತಿದ್ದು ಗಮನ ಸೆಳೆಯಿತು.