ನಿರ್ಭಯಾ ಹಂತಕರಿಂದ ಕಡೇ ಆಟ: ಯಾರಿಗೆ ಯಾವ ಅವಕಾಶ ಬಾಕಿ?

By Kannadaprabha News  |  First Published Jan 30, 2020, 12:37 PM IST

ನಿರ್ಭಯಾ ರೇಪಿಸ್ಟ್‌ಗಳ ನೇಣು ನಾಡಿದ್ದೂ ಡೌಟ್‌!| ಮುಕೇಶ್‌ ಕ್ಷಮಾದಾನ ಅರ್ಜಿ ತಿರಸ್ಕಾರ| ಬೆನ್ನಲ್ಲೇ ಮತ್ತಿಬ್ಬರು ಹಂತಕರಿಂದ ಹೊಸ ಕಾನೂನು ದಾಳ| ಕ್ಯುರೇಟಿವ್‌ ಅರ್ಜಿ ಸಲ್ಲಿಸಿದ ಅಕ್ಷಯ್‌| ಕ್ಷಮಾದಾನ ಬೇಡಿ ರಾಷ್ಟ್ರಪತಿಗಳಿಗೆ ವಿನಯ್‌ ಶಮಾ ಮೊರೆ


ನವದೆಹಲಿ[ಜ.30]: ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಕೋರಿಕೆ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿ ಮುಕೇಶ್‌ ಕುಮಾರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಬುಧವಾರ ವಜಾ ಮಾಡಿದೆ. ಆದರೆ ಇದರ ಬೆನ್ನಲ್ಲೇ ಪ್ರಕರಣದ ಇನ್ನಿತರ ದೋಷಿಗಳಾದ ಅಕ್ಷಯ್‌ ಕುಮಾರ್‌ ಹಾಗೂ ವಿನಯ್‌ ಶರ್ಮಾ, ಗಲ್ಲು ಶಿಕ್ಷೆ ಜಾರಿ ವಿಳಂಬ ಮಾಡುವ ಹೊಸ ತಂತ್ರಗಳನ್ನು ಉರುಳಿಸಿದ್ದಾರೆ.

ಅಕ್ಷಯ್‌ ಕುಮಾರ್‌ ಸುಪ್ರೀಂ ಕೋರ್ಟ್‌ಗೆ ಗಲ್ಲು ಶಿಕ್ಷೆ ಪ್ರಶ್ನಿಸಿ ಕ್ಯುರೇಟಿವ್‌ ಅರ್ಜಿ ಸಲ್ಲಿಸಿದ್ದು, ಗುರುವಾರ ಇದರ ವಿಚಾರಣೆ ನಡೆಯಲಿದೆ. ಇದೇ ವೇಳೆ, ವಿನಯ್‌ ಶರ್ಮಾ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡು 14 ದಿನ ಆಗುವವರೆಗೆ ನೇಣು ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ನಿಯಮಗಳೇ ಹೇಳುತ್ತವೆ. ಹೀಗಾಗಿ ತಕ್ಷಣಕ್ಕೇ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡರೂ ಫೆಬ್ರವರಿ 1ರ ಬೆಳಗ್ಗೆ 6 ಗಂಟೆಗೆ ಈ ಮುಂಚೆ ನಿಗದಿಯಾದಂತೆ ಪ್ರಕರಣದ ನಾಲ್ವರೂ ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿ ಅನುಮಾನವಾಗಿದೆ.

Tap to resize

Latest Videos

undefined

ನಿರ್ಭಯಾ ಕೇಸ್: ಮುಕೇಶ್ ಅರ್ಜಿ ವಜಾ, ಅತ್ತ ಹೊಸ ಅರ್ಜಿ ಸಲ್ಲಿಸಿದ ಅಕ್ಷಯ್ ಸಿಂಗ್!

ಮೇಲಾಗಿ ಪವನ್‌ ಗುಪ್ತಾ ಎಂಬಾತ ಇನ್ನೂ ಕ್ಯುರೇಟಿವ್‌ ಅರ್ಜಿ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಕೆಯ ಎರಡೂ ಅವಕಾಶಗಳನ್ನು ಉಳಿಸಿಕೊಂಡಿದ್ದಾನೆ ಎಂಬುದು ಇಲ್ಲಿ ಗಮನಾರ್ಹ. ಆದರೆ ಮುಕೇಶ್‌ ಮುಂದಿನ ಬಚಾವಾಗುವ ಎಲ್ಲ ಮಾರ್ಗಗಳೂ ಮುಕ್ತಾಯವಾಗಿವೆ.

ಮತ್ತೆ ಕೋರ್ಟ್‌ಗೆ ಹೋದ ಕಿರಾತಕರು: ಸಾವು ಮುಂದೂಡುವುದು ಎಲ್ಲಿಯ ತನಕ?

ಮುಕೇಶ್‌ ಅರ್ಜಿ ವಜಾ:

ಮುಕೇಶ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಆರ್‌. ಭಾನುಮತಿ, ನ್ಯಾ| ಅಶೋಕ್‌ ಭೂಷಣ್‌ ಹಾಗೂ ನ್ಯಾ| ಎ.ಎಸ್‌. ಬೋಪಣ್ಣ ಅವರ ಪೀಠ, ತಿಹಾರ್‌ ಜೈಲಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಹಾಗೂ ರಾಷ್ಟ್ರಪತಿಗಳು ವಿವೇಚನಾರಹಿತವಾಗಿ ‘ಮಿಂಚಿನ ವೇಗದಲ್ಲಿ’ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದಾರೆ ಎಂಬ ಆತನ ವಾದವನ್ನು ತಿರಸ್ಕರಿಸಿತು.

‘ಜೈಲಿನಲ್ಲಿ ಮುಕೇಶ್‌ ಅನುಭವಿಸಿದ ಯಾತನೆಗಳು ಕ್ಷಮಾದಾನಕ್ಕೆ ಮಾನದಂಡವಾಗದು. ರಾಷ್ಟ್ರಪತಿಗಳು ವಿವೇಚನೆ ಇಲ್ಲದೇ ಗಡಿಬಿಡಿಯಲ್ಲಿ ಅರ್ಜಿ ವಜಾ ಮಾಡಿದ್ದಾರೆ ಎಂದು ಹೇಳಲಾಗದು’ ಎಂದು ನ್ಯಾಯಪೀಠ ಹೇಳಿತು.

ಇದಲ್ಲದೆ, ‘ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವ ವೇಳೆ ಅವರ ಮುಂದೆ ಎಲ್ಲ ದಾಖಲೆಗಳನ್ನೂ ಇರಿಸಲಾಗಿತ್ತು ಎಂದು ಸಾಬೀತಾಗಿದೆ’ ಎಂದ ಪೀಠ, ಎಲ್ಲ ದಾಖಲೆಗಳನ್ನು ಸರ್ಕಾರವು ರಾಷ್ಟ್ರಪತಿಗಳಿಗೆ ನೀಡಿರಲಿಲ್ಲ ಎಂಬ ಮುಕೇಶ್‌ ವಾದವನ್ನು ಅದು ತಳ್ಳಿಹಾಕಿತು.

ಯಾರ ಮುಂದೆ ಯಾವ ಅವಕಾಶ ಬಾಕಿ?

ಮುಕೇಶ್‌ ಸಿಂಗ್‌: ಕಾನೂನಿನ ಯಾವ ಆಯ್ಕೆಗಳೂ ಈತನ ಮುಂದಿಲ್ಲ

ವಿನಯ್‌ ಶರ್ಮಾ: ಕ್ಯುರೇಟಿವ್‌ ಅರ್ಜಿ ವಜಾ ಆಗಿದೆ. ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ವಿಲೇವಾರಿ ಆಗಬೇಕಿದೆ

ಅಕ್ಷಯ್‌: ಕ್ಯುರೇಟಿವ್‌ ಅರ್ಜಿ ಹಾಕಿದ್ದಾನೆ. ಇದು ವಜಾ ಆದರೆ ಕ್ಷಮಾದಾನ ಕೋರಲು ಅವಕಾಶವಿದೆ

ಪವನ್‌ ಗುಪ್ತಾ: ಕ್ಯುರೇಟಿವ್‌ ಅರ್ಜಿ, ಕ್ಷಮಾದಾನ ಅರ್ಜಿ ಸಲ್ಲಿಕೆಯ 2 ಅವಕಾಶಗಳೂ ಉಂಟು

click me!