
ನವದೆಹಲಿ[ಫೆ.22]: ಮಾರ್ಚ್ 3ರಂದು ಇತರ ಮೂವರು ದೋಷಿಗಳೊಂದಿಗೆ ನೇಣುಗಂಬಕ್ಕೆ ಏರಬೇಕಿರುವ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ತಪ್ಪಿತಸ್ಥ ವಿನಯ್ ಶರ್ಮಾ, ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುವ ನಾನಾ ತಂತ್ರಗಳನ್ನು ಮುಂದುವರಿಸಿದ್ದಾನೆ. ತನ್ನ ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿ ಅಚ್ಚರಿ ಮೂಡಿಸಿದ್ದಾನೆ.
‘ದಿಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ವೇಳೆ ಸರ್ಕಾರ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸಚಿವರಿಗೆ ಶಾಸಕ/ಮಂತ್ರಿ ಪದವಿಯ ಯಾವುದೇ ಅಧಿಕಾರ ಇರುವುದಿಲ್ಲ. ಆದರೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಂಹಿತೆ ಜಾರಿಯಲ್ಲಿದ್ದ ಅವಧಿಯಾದ ಜನವರಿ 30ರಂದು ನನ್ನ ಕ್ಷಮಾದಾನ ಕೋರಿಕೆ ತಿರಸ್ಕರಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. ಇದು ಕಾನೂನು ಬಾಹಿರ’ ಎಂದು ವಿನಯ್ ಶರ್ಮಾ ಪರ ವಕೀಲ ಎ.ಪಿ. ಸಿಂಗ್ ಅವರು ಆಯೋಗಕ್ಕೆ ದೂರು ನೀಡಿದ್ದಾರೆ.
ಅಲ್ಲದೆ, ‘ಸಿಸೋಡಿಯಾ ಅವರು ಕ್ಷಮಾದಾನ ತಿರಸ್ಕರಿಸುವ ಶಿಫಾರಸು ಪತ್ರಕ್ಕೆ ಡಿಜಿಟಲ್ ಸಹಿ ಹಾಕಬೇಕಿತ್ತು. ಆದರೆ ಡಿಜಿಟಲ್ ಸಹಿ ಬದಲಾಗಿ ಅವರ ಅಂಕಿತದ ಸ್ಕ್ರೀನ್‌ಶಾಟನ್ನು ವಾಟ್ಸಾಪ್‌ನಲ್ಲಿ ತರಿಸಿಕೊಂಡು ಕ್ಷಮಾದಾನ ಅರ್ಜಿ ತಿರಸ್ಕರಿಸಲಾಗಿದೆ. ಚುನಾವಣಾ ಆಯೋಗ, ರಾಷ್ಟ್ರಪತಿ ಹಾಗೂ ಗೃಹ ಸಚಿವಾಲಯದ ಗೌರವವನ್ನು ಈ ರೀತಿ ಹಾಳು ಮಾಡಬಾರದು’ ಎಂದೂ ಅವರು ದೂರಿದ್ದಾರೆ.
ಮೊನ್ನೆಯಷ್ಟೇ ಶರ್ಮಾ ತಿಹಾರ್ ಜೈಲಿನಲ್ಲಿ ತನ್ನ ಹಣೆಯನ್ನು ಗೋಡೆಗೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದ. ಅಲ್ಲದೆ ಹೆಚ್ಚಿನ ಚಿಕಿತ್ಸೆ ನೀಡುವಂತೆ ಕೋರಿದ್ದ. ಈ ಕುರಿತು ದೆಹಲಿ ನ್ಯಾಯಾಲಯ ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಕೂಡ ನೇಣನ್ನು ಮುಂದೂಡಲು ಶರ್ಮಾ ಹೆಣೆದ ವಿಳಂಬ ತಂತ್ರ ಎಂದೇ ವಿಶ್ಲೇಷಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ