ಅಸ್ಥಿರೋಗದಿಂದ ಅಂಗವಿಕಲಳಾಗಿರುವ ಮಹಿಳೆಗೆ ಟೋಲ್ ಪ್ಲಾಜಾದಲ್ಲಿ ತಡೆದು ಹಣ ವಸೂಲಿ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನ್ಯಾಯಾಲಯ ದಂಡ ವಿಧಿಸಿದೆ. ಟೋಲ್ ವಿನಾಯಿತಿ ದಾಖಲೆಗಳನ್ನು ತೋರಿಸಿದರೂ ಕಾರಿನಿಂದ ಇಳಿದು ನಡೆದು ತೋರಿಸುವಂತೆ ಟೋಲ್ ಪ್ಲಾಜಾ ಸಿಬ್ಬಂದಿ ಒತ್ತಾಯಿಸಿದ್ದರು.
ನವದೆಹಲಿ (ಫೆ.1): ಅಸ್ಥಿರೋಗದಿಂದ ದಿವ್ಯಾಂಗರಾಗಿದ್ದ ಮಹಿಳೆಗೆ ಟೋಲ್ ಪ್ಲಾಜಾದಲ್ಲಿ ತಡೆದು ಹಣ ವಸೂಲಿ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನ್ಯಾಯಾಲಯ ದಂಡ ವಿಧಿಸಿದೆ. ಚಂಡೀಗಢದ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಿದೆ. ಅಂಗವಿಕಲ ಮಹಿಳೆಯಿಂದ 40 ರೂ. ಟೋಲ್ ವಸೂಲಿ ಮಾಡಲಾಗಿತ್ತು. ಈಗ ಪ್ರಾಧಿಕಾರಕ್ಕೆ ವಸೂಲಿ ಮಾಡಿದ ಹಣದ ಶೇ.425 ರಷ್ಟು ಎಂದರೆ, ಮಹಿಳೆಗೆ 17 ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಚಂಡೀಗಢದ ಸೆಕ್ಟರ್ 27ರ ನಿವಾಸಿ ಗೀತಾ ಎಂಬ ಮಹಿಳೆಯ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಅಂಗವಿಕಲರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಹೊಂದಿರುವ ಹೊಸ ಕಾರಿನೊಂದಿಗೆ ಟೋಲ್ ಪ್ಲಾಜಾ ತಲುಪಿದ ಮಹಿಳೆಯಿಂದ ಟೋಲ್ ವಸೂಲಿ ಮಾಡಲಾಗಿದೆ. ಇಂತಹ ವಾಹನಗಳಿಗೆ ಟೋಲ್ ವಿನಾಯಿತಿ ಇದ್ದರೂ, ಟೋಲ್ ಪಾವತಿಸುವಂತೆ ಒತ್ತಾಯಿಸಿ ಪ್ಲಾಜಾದಲ್ಲಿ ಸಿಬ್ಬಂದಿ ಅವಮಾನಿಸಿದ್ದಾರೆ. ಅಂಗವಿಕಲರಿಗಾಗಿ ಎಂದು ಸ್ಪಷ್ಟವಾಗಿ ಸೂಚಿಸುವ ಸ್ಟಿಕ್ಕರ್‌ಗಳನ್ನು ಹೊಂದಿದ್ದ ಕಾರನ್ನು ಅವರು ಬಳಸುತ್ತಿದ್ದರೂ, ಟೋಲ್ ವಿನಾಯಿತಿ ನೀಡಲಾಗಿರಲಿಲ್ಲ.
2024ರ ಏಪ್ರಿಲ್ 28ರಂದು ಈ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಕಸೋಲಿಯಲ್ಲಿರುವ ಕುಟುಂಬವನ್ನು ಭೇಟಿ ಮಾಡಲು ಹೋದಾಗ ಮಹಿಳೆಯಿಂದ ಟೋಲ್ ವಸೂಲಿ ಮಾಡಿರಲಿಲ್ಲ. ಆದರೆ, ಚಂಡೀಗಢಕ್ಕೆ ಹಿಂತಿರುಗುವಾಗ ಚಂಡೀಮಂದಿರ್ ಟೋಲ್ ಪ್ಲಾಜಾದಲ್ಲಿ 40 ರೂ. ಟೋಲ್ ವಸೂಲಿ ಮಾಡಲಾಗಿದೆ. ಅಂಗವಿಕಲಳೆಂದು ಸಾಬೀತುಪಡಿಸುವ ಗುರುತಿನ ಚೀಟಿ ಮತ್ತು ಕಾರಿನ ನೋಂದಣಿ ಸಂಖ್ಯೆಯನ್ನು ತೋರಿಸಿದರೂ ಟೋಲ್ ವಸೂಲಿ ಮಾಡಲಾಗಿದೆ. ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸುವಂತೆ ಮತ್ತು ಕಾರಿನಿಂದ ಇಳಿದು ನಡೆದು ತೋರಿಸುವಂತೆ ಟೋಲ್ ಪ್ಲಾಜಾ ಸಿಬ್ಬಂದಿ ಒತ್ತಾಯಿಸಿದ್ದಾರೆ. ಅಂಗವಿಕಲರಿಗೆ ಮೀಸಲಾದ ಲೇನ್‌ನಲ್ಲಿ ಪ್ರಯಾಣಿಸಿದರೂ ಫಾಸ್ಟ್‌ಟ್ಯಾಗ್‌ನಿಂದ ಹಣ ಕಡಿತಗೊಳಿಸಿದ್ದರಿಂದ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.
Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್!
ಟೋಲ್ ಪ್ಲಾಜಾ ಸಿಬ್ಬಂದಿಯ ಕೆಟ್ಟ ವರ್ತನೆ ಮತ್ತು ಮಹಿಳೆ ಎದುರಿಸಿದ ಅವಮಾನಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಹಕರ ಆಯೋಗದ ನೋಟಿಸ್ ಸ್ವೀಕರಿಸಿದ ನಂತರವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ನ್ಯಾಯಾಲಯ ಆದೇಶ ಹೊರಡಿಸಿದೆ.
Toll Plaza Exemptions: ಯಾರಿಗೆಲ್ಲಾ ಟೋಲ್ ಹಣ ಕಟ್ಟುವುದರಿಂದ ವಿನಾಯಿತಿ ಇದೆ?