
ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ನಾಳೆಯಿಂದ ಜಾರಿಗೆ ಬರಲಿದ್ದು, ಈ ಒಪ್ಪಂದದ ಜಾರಿ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಈ ಒಪ್ಪಂದವು 'ವಿಕಸಿತ ಭಾರತ 2047'ಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ದೂರದೃಷ್ಟಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಈ ಒಪ್ಪಂದವು ಭಾರತದ ರಫ್ತುದಾರರಿಗೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ , ಕುಶಲಕರ್ಮಿಗಳಿಗೆ, ರೈತರಿಗೆ ಮತ್ತು ಔಷಧೀಯ ವಲಯಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. 2030ರ ವೇಳೆಗೆ ನ್ಯೂಜಿಲೆಂಡ್ನೊಂದಿಗಿನ ಸರಕು ಮತ್ತು ಸೇವೆಗಳ ದ್ವಿಪಕ್ಷೀಯ ವ್ಯಾಪಾರವನ್ನು ಸುಮಾರು 35 ಸಾವಿರ ಕೋಟಿ ರೂಪಾಯಿಗಳಿಗೆ, ಅಂದರೆ ಪ್ರಸ್ತುತ ಮಟ್ಟಕ್ಕಿಂತ ದುಪ್ಪಟ್ಟುಗೊಳಿಸುವ ಗುರಿಯೊಂದಿಗೆ ಕೆಲಸ ಮಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಸಚಿವರು ಹೇಳಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಮುಕ್ತ ವ್ಯಾಪಾರ ಒಪ್ಪಂದ- FTA ಗೆ ಕಳೆದ ಏಪ್ರಿಲ್ನಲ್ಲಿ ದೆಹಲಿಯ 'ಭಾರತ ಮಂಟಪಂ'ನಲ್ಲಿ ಸಹಿ ಹಾಕಲಾಗಿತ್ತು. ಈ ಒಪ್ಪಂದವು ಸೇವೆಗಳು, ಹೂಡಿಕೆ ಹಾಗೂ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಯುವಜನರ ಓಡಾಟಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ; ಇದರಲ್ಲಿ ಭಾರತೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.
ಭಾರತದ ರೈತರಿಗೆ ಹಣ್ಣುಗಳು, ತರಕಾರಿಗಳು, ಸಾಂಬಾರ ಪದಾರ್ಥಗಳು ಮತ್ತು ಇತರ ಕೃಷಿ ಉತ್ಪನ್ನಗಳಿಗೆ ವಿಶಾಲವಾದ ಮಾರುಕಟ್ಟೆ ಪ್ರವೇಶಾವಕಾಶ ಈ ಒಪ್ಪಂದದಿಂದ ಲಭಿಸಲಿದೆ ಎಂದ ಸಚಿವರು, ಈ ಒಪ್ಪಂದವು ಉತ್ಪಾದಕತೆಯನ್ನು ಹೆಚ್ಚಿಸಲು, ಹೆಚ್ಚಿನ ಆದಾಯವನ್ನು ಬೆಂಬಲಿಸಲು ಮತ್ತು ಜೀವನೋಪಾಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಸರ್ಕಾರದ ಕಾರ್ಯತಂತ್ರದಲ್ಲಿ ರೈತರ ಕಲ್ಯಾಣಕ್ಕೆ ಅಗ್ರಗಣ್ಯ ಆದ್ಯತೆ ನೀಡಲಾಗಿದ್ದು, ಹೈನುಗಾರಿಕೆಯಂತಹ ಸೂಕ್ಷ್ಮ ವಲಯಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಲಾಗಿದೆ ಎಂದರು.
ಭಾರತದಲ್ಲಿ 20 ಶತಕೋಟಿ ಡಾಲರ್ಗಳ ಹೂಡಿಕೆಗೆ ಅನುಕೂಲ ಕಲ್ಪಿಸುವ ನ್ಯೂಜಿಲೆಂಡ್ನ ಬದ್ಧತೆಯು, ಉತ್ಪಾದನಾ ವಲಯ, ಮೂಲಸೌಕರ್ಯ, ಸೇವೆಗಳು ಮತ್ತು ನಾವೀನ್ಯತೆಯನ್ನು ಬಲಪಡಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಒಪ್ಪಂದವು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು. ಉಭಯ ರಾಷ್ಟ್ರಗಳ ನಡುವಿನ ಬೆಳವಣಿಗೆ ಮತ್ತು ಪರಸ್ಪರ ಸಮೃದ್ಧಿಯ ಹಂಚಿಕೆಯ ದೃಷ್ಟಿಕೋನದೊಂದಿಗೆ, ಈ ಪರಸ್ಪರ ಲಾಭದಾಯಕ ಪಾಲುದಾರಿಕೆಯು ಭವಿಷ್ಯದಲ್ಲಿ ಇನ್ನೂ ಅನೇಕ ಮೈಲಿಗಲ್ಲುಗಳನ್ನು ತಲುಪಲಿದೆ ಎಂದರು.
ಭಾರತ ಮತ್ತು ನ್ಯೂಜಿಲೆಂಡ್ ದೀರ್ಘಕಾಲದ ಮತ್ತು ನಿಕಟ ಸಂಬಂಧಗಳನ್ನು ಹೊಂದಿವೆ. ಈ ಸಂಬಂಧವು ಜನರ ನಡುವಿನ ಬಲವಾದ ಬಾಂಧವ್ಯವನ್ನು ಆಧರಿಸಿದ್ದು, ವ್ಯಾಪಾರ ಮತ್ತು ಹೂಡಿಕೆ, ಕೃಷಿ, ಶಿಕ್ಷಣ, ಕ್ರೀಡೆ, ತಂತ್ರಜ್ಞಾನ ಹಾಗೂ ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುತ್ತಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು 2025-26ರಲ್ಲಿ ಸುಮಾರು 1.1 ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟಿತ್ತು. ಈ ಮುಕ್ತ ವ್ಯಾಪಾರ ಒಪ್ಪಂದವು, ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವಲ್ಲಿ ಮತ್ತು ಎರಡೂ ದೇಶಗಳ ಉದ್ಯಮಗಳು ಹಾಗೂ ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಒಪ್ಪಂದದ ಅಡಿಯಲ್ಲಿ, ಭಾರತದಿಂದ ನ್ಯೂಜಿಲೆಂಡ್ಗೆ ರಫ್ತಾಗುವ ಎಲ್ಲಾ ಸರಕುಗಳಿಗೆ ಶೇಕಡಾ 100 ರಷ್ಟು ಸುಂಕ ರಹಿತ ಪ್ರವೇಶಾವಕಾಶ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ