Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!

By Suvarna News  |  First Published Dec 31, 2021, 8:40 PM IST

ಗೋವಾದಲ್ಲಿ ಕ್ರಿಶ್ಚಿಯಾನೋ ರೊನಾಲ್ಡೊ ಪ್ರತಿಮೆಗೆ ಜನರ ಆಕ್ಷೇಪ
ರೊನಾಲ್ಡೊ ಬದಲು ನಮ್ಮ ದೇಶದ ಕ್ರೀಡಾಪಟುಗಳ ಪ್ರತಿಮೆ ಸ್ಥಾಪಿಸಬೇಕಿತ್ತು ಎಂದ ಜನತೆ
ನಾವಿನ್ನೂ ಪೋರ್ಚುಗೀಸ್ ಆಳ್ವಿಕೆಯ ಹ್ಯಾಂಗೋವರ್ ನಲ್ಲಿದ್ದೇವೆ


ಪಣಜಿ (ಡಿ. 31): ಗೋವಾದಲ್ಲಿ (Goa) ಫುಟ್ಬಾಲ್ ಆಟಗಾರ (football player) ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರ ಹೊಸ ಪ್ರತಿಮೆ (statue) ವಿವಾದಕ್ಕೆ ಕಾರಣವಾಗಿದ್ದು, ಭಾರತದ ಆಟಗಾರನ ಬದಲಿಗೆ ಪೋರ್ಚುಗೀಸ್ ಫುಟ್ಬಾಲ್ ಆಟಗಾರನಿಗೆ ಗೌರವ ನೀಡಿರುವುದನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದಾರೆ. ನಮ್ಮ ರಾಜ್ಯವನ್ನು ಆಳಿದ ದೇಶದ ತಾರೆಗೆ ಗೌರವ ನೀಡಲು ನಮ್ಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ ಎಂದು ಟೀಕಿಸಿದ್ದಾರೆ. ಈ ವಾರ ಕಲಾಂಗುಟೆ (Calangute) ಪಟ್ಟಣದಲ್ಲಿ ದಿಗ್ಗಜ ಫುಟ್ ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೊ ಪ್ರತಿಮೆಯನ್ನು ಅನಾವರಣ ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಕಪ್ಪು ಬಾವುಟ (black flag)ಪ್ರದರ್ಶಿಸುವ ಮೂಲಕ ಸ್ಥಳೀಯರು ಪ್ರತಿಭಟನೆ ನಡೆಸಿದರು.

ನಮ್ಮ ಅಧಿಕಾರಿಗಳಿಗೆ ಈ ಸ್ಥಳದಲ್ಲಿ ಭಾರತೀಯ ಫುಟ್ ಬಾಲ್ ತಾರೆ ಅಥವಾ ಭಾರತೀಯ ಕ್ರೀಡಾತಾರೆಯ ಪ್ರತಿಮೆಯನ್ನು ಸ್ಥಾಪಿಸುವ ಎಲ್ಲಾ ಅವಕಾಶವಿತ್ತು. ಆದರೆ, ನಮ್ಮ ರಾಜ್ಯವನ್ನು ಆಳಿ, 1961ರಲ್ಲಿ ಸ್ವಾತಂತ್ರ್ಯ ಕೊಟ್ಟು ಹೋದ ಪೋರ್ಚುಗಲ್ ದೇಶದ ಫುಟ್ ಬಾಲ್ ತಾರೆಯನ್ನು ಆಯ್ಕೆ ಮಾಡಿರುವುದಕ್ಕೆ ಬೇಸರವಾಗಿದೆ ಎಂದು ತಿಳಿಸಿದ್ದಾರೆ. "ನಿಜಕ್ಕೂ ಇದು ಬೇಸರದ ಸಂಗತಿ ಹಾಗೂ ನಾವಿನ್ನೂ ಪೋರ್ಚುಗೀಸ್ ಹ್ಯಾಂಗೋವರ್ ನಲ್ಲಿಯೇ ಇದ್ದೇವೆ ಎನ್ನುವುದನ್ನು ಇದು ತೋರಿಸುತ್ತದೆ" ಎಂದು ಗೋವಾ ಮೂಲದ ಭಾರತ ರಾಷ್ಟ್ರೀಯ ಫುಟ್ ಬಾಲ್ ತಂಡದ ಮಾಜಿ ಆಟಗಾರ ಮಿಕ್ಕಿ ಫೆರ್ನಾಂಡಿಸ್ (Micky Fernandes) ಹೇಳಿದ್ದಾರೆ. ರೊನಾಲ್ಡೊ ವಿಶ್ವದ ಶ್ರೇಷ್ಠ ಫುಟ್ ಬಾಲ್ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಸ್ಥಳದಲ್ಲಿ ಗೋವಾ ಮೂಲದ ಫುಟ್ ಬಾಲ್ ಆಟಗಾರನ ಪ್ರತಿಮೆ ಇದ್ದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

ಆದರೆ, ಗೋವಾದಲ್ಲಿರುವ ಬಿಜೆಪಿ ಸರ್ಕಾರದ (BJP) ಸಚಿವ ಮೈಕೆಲ್ ಲೋಬೋ (Michael Lobo), ರೊನಾಲ್ಡೊ ಪ್ರತಿಮೆ ಸ್ಥಾಪನೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮಲ್ಲಿನ ಫುಟ್‌ ಬಾಲ್ ತಾರೆಗಳನ್ನು ದೇಶೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ  ಉತ್ತಮ ಸಾಧನೆ ಮಾಡಲು ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ. ಫುಟ್ ಬಾಲ್ ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವ ಎಲ್ಲಾ ಹುಡುಗರು ಹಾಗೂ ಹುಡುಗಿಯರಿಗೆ ಕ್ರಿಶ್ಚಿಯಾನೋ ರೊನಾಲ್ಡೊ ಅವರಿಂದ ಖಂಡಿತವಾಗಿ ಸ್ಫೂರ್ತಿ ಪಡೆಯುತ್ತಾರೆ ಎಂದು ಲೋಬೋ ಹೇಳಿದ್ದಾರೆ. "ನೀವು ನಿಮ್ಮ ಕನಸನ್ನು ಬೆನ್ನಟ್ಟಿದರೆ ಹಾಗೂ ಅದರ ಬಗ್ಗೆ ಉತ್ಸಾಹ ಹೊಂದಿದ್ದರೆ ಖಂಡಿತವಾಗಿಯೂ ನೀವು ಉನ್ನತ ಗುರಿಯನ್ನು ತಲುಪಬಹುದು" ಇದೇ ಸಾಲನ್ನು ಪ್ರತಿಮೆಯ ಕೆಳಗಿರುವ ಫಲಕದಲ್ಲಿ ಬರೆಯಲಾಗಿದೆ.
 

Footballer Cristiano Ronaldo's statue installed in Panaji, Goa. To inspire youth &take football to next level in the state, country, we came up with this statue. We want our children to become like this legendary footballer, who is a global legend:Goa Minister Michael Lobo(28.12) pic.twitter.com/KthPHc7ox0

— ANI (@ANI)


ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದ ಎಲ್ಲಾ ಪ್ರದೇಶವು 1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡರೆ, ಪೋರ್ಚುಗೀಸರ ಮಿಲಿಟರಿ ಆಳ್ವಿಕೆಯಲ್ಲಿದ್ದ ಗೋವಾ, 1961ರಲ್ಲಿ ಭಾರತೀಯ ಸೇನೆಯ ಆಕ್ರಮಣ ಹಾಗೂ ಎರಡು ದಿನಗಳ ಯುದ್ಧದ ನಂತರ ಪ್ರದೇಶವನ್ನು ಬಿಟ್ಟುಕೊಟ್ಟಿತ್ತು. ಹಾಗಿದ್ದರೂ ಪೋರ್ಚುಗೀಸರ ಪ್ರಭಾವ ಇನ್ನೂ ಗೋವಾ ಜನರ ಜೀವನಶೈಲಿಯಲ್ಲಿದೆ. ಅಲ್ಲಿನ ಚರ್ಚುಗಳ ವಾಸ್ತುಶಿಲ್ಪ ಈಗಲೂ ಪೋರ್ಚುಗೀಸರ ಶೈಲಿಯಲ್ಲಿದೆ. ಅಲ್ಲದೆ, ಅನೇಕ ಜನರು ಪೋರ್ಚುಗೀಸ್ ಶೈಲಿಯ ಅಡ್ಡ ಹೆಸರನ್ನು ಹೊಂದಿದ್ದಾರೆ.

Merry Christmas 2021: ಧೋನಿಯಿಂದ ರೊನಾಲ್ಡೋವರೆಗೆ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿದ ಕ್ರೀಡಾ ತಾರೆಯರು..!
ಭಾರತದ ಇತರ ಎಲ್ಲಾ ಪ್ರದೇಶಗಳಲ್ಲಿ ಕ್ರಿಕೆಟ್ ಜನಪ್ರಿಯವಾಗಿದ್ದರೆ, ಗೋವಾದಲ್ಲಿ ಮಾತ್ರ ಫುಟ್ ಬಾಲ್ ಪ್ರಸಿದ್ಧ ಕ್ರೀಡೆ. ವಿಶ್ವಕಪ್ ನಂಥ ಟೂರ್ನಿಯ ವೇಳೆ ಇಲ್ಲಿನ ಜನ ಹೆಚ್ಚಾಗಿ ಬೆಂಬಲಿಸುವುದು ಪೋರ್ಚುಗೀಸ್ ತಂಡವನ್ನು. "ನಾನೂ ಕೂಡ ಪೋರ್ಚುಗಲ್ ತಂಡವನ್ನು ಬೆಂಬಲಿಸುತ್ತೇನೆ. ಆದರೆ, ಫುಟ್ ಬಾಲ್ ನಲ್ಲಿ ನಮ್ಮದೇ ದಿಗ್ಗಜ ತಾರೆಯರು ಇರುವಾಗ ಹೊರಗಿನವರ ಪ್ರತಿಮೆಯನ್ನು ಹಾಕುವ ಅಗತ್ಯವಿರಲಿಲ್ಲ' ಎಂದು ಫೆರ್ನಾಂಡಿಸ್ ಹೇಳಿದ್ದಾರೆ.

Latest Videos

click me!