
ನವದೆಹಲಿ : ಸರಕು ಸಾಗಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ತನ್ನ ಬದ್ಧತೆ ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್‌ಗಳಿಗೆ (ಇ-ಟ್ರಕ್‌ಗಳು) ಆರ್ಥಿಕ ಉತ್ತೇಜನ ನೀಡುವ ಯೋಜನೆ ಆರಂಭಿಸುವ ಘೋಷಣೆ ಮಾಡಿದೆ.ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಯೋಜನೆ ಪ್ರಕಟಿಸಿದರು.
‘ಪಿಎಂ ಇ-ಡ್ರೈವ್ (ಪಿಎಂ ಇ-ಡ್ರೈವ್) ಯೋಜನೆ ಅಡಿ ಟ್ರಕ್ ಗಳಿಗೆ ಪ್ರೋತ್ಸಾಹ ಧನ ಕೊಡಲಾಗುವುದು. ಪ್ರತಿ ಟ್ರಕ್‌ಗೆ ಖರೀದಿದಾರರಿಗೆ 9.6 ಲಕ್ಷ ರು.ವರೆಗೆ ಪ್ರೋತ್ಸಾಹಧನ ನೀಡಲಾಗುವುದು. ಪಿಎಂ ಇ-ಡ್ರೈವ್ ಉಪಕ್ರಮಕ್ಕಾಗಿ ವಿನಿಯೋಗಿಸಲಾಗುವ 10,900 ಕೋಟಿ ರು. ಯೋಜನೆಯಲ್ಲಿ, 500 ಕೋಟಿ ರು. ಅನ್ನು ವಿದ್ಯುತ್ ಟ್ರಕ್‌ಗಳಿಗಾಗಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ವಿದ್ಯುತ್ ಟ್ರಕ್‌ಗಳಿಗೆ ನೇರ ಆರ್ಥಿಕ ಪ್ರೋತ್ಸಾಹ ನೀಡುತ್ತಿರುವುದು ಇದೇ ಮೊದಲು’ ಎಂದರು.
ಯೋಜನೆ ಏಕೆ ಮಹತ್ವದ್ದು?:‘ಡೀಸೆಲ್ ಟ್ರಕ್‌ಗಳು ಒಟ್ಟು ವಾಹನ ಸಂಖ್ಯೆಯಲ್ಲಿ ಕೇವಲ 3% ರಷ್ಟಿದ್ದರೂ ಸಾರಿಗೆ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ 42% ರಷ್ಟು ಕೊಡುಗೆ ನೀಡುತ್ತವೆ ಮತ್ತು ವಾಯುಮಾಲಿನ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇಂಗಾಲದ ಹೊರಸೂಸುವಿಕೆಯನ್ನು ಪರಿಪೂರ್ಣವಾಗಿ ತಗ್ಗಿಸುವ ನಿಟ್ಟಿನಲ್ಲಿ ಇ-ಟ್ರಕ್ ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಮೂಲಕ ರಾಷ್ಟ್ರವನ್ನು ಸುಸ್ಥಿರ ಸರಕು ಸಾಗಣೆ, ಸ್ವಚ್ಛ ಭವಿಷ್ಯ ಮತ್ತು 2047ರ ವೇಳೆಗೆ ವಿಕಸಿತ ಭಾರತ ಸಾಕಾರದತ್ತ ಕೊಂಡೊಯ್ಯುತ್ತದೆ, 2070ರ ವೇಳೆಗೆ ಇಂಗಾಲದ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಮುಟ್ಟಲಿದ್ದೇವೆ. ಇದು ಪ್ರಧಾನಿ ಸಂಕಲ್ಪ’ ಎಂದರು.
ವೋಲ್ವೋ, ಐಷರ್, ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಹಲವಾರು ಪ್ರಮುಖ ಕಂಪನಿಗಳು ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಉತ್ಪಾದಿಸುತ್ತಿವೆ.ಯಾವ ಟ್ರಕ್‌ಗಳಿಗೆ ಅನ್ವಯ? :N2 ಮತ್ತು N3 ವರ್ಗದ ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಈ ಬೇಡಿಕೆ ಪ್ರೋತ್ಸಾಹಧನ ನೀಡಲಾಗುತ್ತದೆ. N2 ವರ್ಗವು 3.5 ಟನ್‌ಗಳಿಗಿಂತ ಹೆಚ್ಚು ಮತ್ತು 12 ಟನ್‌ಗಳವರೆಗೆ ಒಟ್ಟು ವಾಹನ ತೂಕ (GVW) ವಿಭಾಗದ ಟ್ರಕ್‌ಗಳಾಗಿವೆ.
ಇನ್ನು N3 ವರ್ಗವು 12 ಟನ್‌ಗಳಿಗಿಂತ ಹೆಚ್ಚು ಮತ್ತು 55 ಟನ್‌ಗಳವರೆಗೆ GVW ತೂಕ ಹೊಂದಿರುವ ಟ್ರಕ್‌ಗಳಾಗಿವೆ. ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆ ಖಚಿತಪಡಿಸಿಕೊಳ್ಳಲು ಯೋಜನೆಯು ಸಮಗ್ರ ತಯಾರಿಕಾ ಬೆಂಬಲಿತ ವಾರಂಟಿಗಳನ್ನು ಕಡ್ಡಾಯಗೊಳಿಸುತ್ತದೆ.ಗರಿಷ್ಠ ಪ್ರೋತ್ಸಾಹಕ ಮೊತ್ತವನ್ನು ಪ್ರತಿ ವಾಹನಕ್ಕೆ ₹9.6 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ದೇಶಾದ್ಯಂತ ಸುಮಾರು 5,600 ಇ-ಟ್ರಕ್‌ಗಳ ನಿಯೋಜನೆಯನ್ನು ಈ ಯೋಜನೆ ಬೆಂಬಲಿಸುವ ನಿರೀಕ್ಷೆಯಿದೆ.
ಏನೇನು ಷರತ್ತು? ಬ್ಯಾಟರಿಯನ್ನು 5 ವರ್ಷ ಅಥವಾ 5 ಲಕ್ಷ ಕಿ.ಮೀ.ವರೆಗೆ, ಇದರಲ್ಲಿ ಯಾವುದು ಮೊದಲೋ ಅದರ ಖಾತರಿ ಒಳಗೊಳ್ಳಬೇಕು. ವಾಹನ ಮತ್ತು ಮೋಟಾರ್ 5 ವರ್ಷಗಳು ಅಥವಾ 2.5 ಲಕ್ಷ ಕಿ.ಮೀ.ಗಳ ಖಾತರಿ ಹೊಂದಿರಬೇಕು, ಇದರಲ್ಲೂ ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ ಎಂಬ ಷರತ್ತು ವಿಧಿಸಲಾಗಿದೆ.
ಸೈಲ್‌ನಿಂದ 150 ಇ-ಟ್ರಕ್ ನಿಯೋಜನೆ:ವಿದ್ಯುತ್ ಚಾಲಿತ ಟ್ರಕ್ ಗಳ ಬಳಕೆಯಲ್ಲಿ ದೊಡ್ಡ ಹೆಜ್ಜೆ ಇರಿಸಿರುವ ಉಕ್ಕು ಸಚಿವಾಲಯದ ಅಧೀನ ಸಂಸ್ಥೆಯಾಗಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮುಂದಿನ 2 ವರ್ಷಗಳಲ್ಲಿ 150 ಇ-ಟ್ರಕ್‌ಗಳನ್ನು ತನ್ನ ಕಾರ್ಯಾಚರಣೆಯ ವಿವಿಧ ವ್ಯೂಹಾತ್ಮಕ ಸ್ಥಳಗಳಲ್ಲಿ ಬಳಸಲಿದೆ. ಅಲ್ಲದೆ, ವಿವಿಧ ಉದ್ದೇಶಗಳಿಗೆ ತಾನು ಬಳಕೆ ಮಾಡುತ್ತಿರುವ ಒಟ್ಟಾರೆ ಟ್ರಕ್ ಗಳ ಪೈಕಿ ಕನಿಷ್ಠ 15% ವಿದ್ಯುತ್ ಚಾಲಿತ ಟ್ರಕ್ ಗಳನ್ನೇ ಬಳಸಲು ಪ್ರಾಧಿಕಾರ ನಿರ್ಧರಿಸಿದೆ.
ಇದರ ಜತೆ, ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆಯಲು ಹಾಗೂ ತಾನು ಬಳಕೆ ಮಾಡುತ್ತಿರುವ ಅವಧಿ ಮೀರಿದ ಹಳೆಯ ಮಾಲಿನ್ಯಕಾರಕ ಟ್ರಕ್‌ಗಳನ್ನು ವಿಲೇವಾರಿ ಮಾಡಲಿದೆ ಎಂದು ಉಕ್ಕು ಸಚಿವರೂ ಆಗಿರುವ ಕುಮಾರಸ್ವಾಮಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ