ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?| ಸ್ಪರ್ಶ ದರ್ಶನದ ಅವಧಿಯನ್ನು ಬೆಳಗ್ಗೆ 11ರವರೆಗೆ ವಿಸ್ತರಿಸುವ ಚಿಂತನೆ
ವಾರಾಣಸಿ[ಜ.14]: ಇಲ್ಲಿನ ಪ್ರಸಿದ್ಧ ಕಾಶಿ ವಿಶ್ವನಾಥ ಮಂದಿರದಲ್ಲಿ ಜ್ಯೋತಿರ್ಲಿಂಗದ ಸ್ಪರ್ಶದರ್ಶನ ಮಾಡಲು ಪುರುಷರಿಗೆ ಧೋತಿ-ಕುರ್ತಾ ಹಾಗೂ ಮಹಿಳೆಯರಿಗೆ ಸೀರೆ ಕಡ್ಡಾಯ ಮಾಡುವ ಚಿಂತನೆ ನಡೆದಿದೆ. ಅಲ್ಲದೆ ಸ್ಪರ್ಶ ದರ್ಶನದ ಅವಧಿಯನ್ನು ಬೆಳಗ್ಗೆ 11ರವರೆಗೆ ವಿಸ್ತರಿಸುವ ಚಿಂತನೆಯನ್ನೂ ಉತ್ತರ ಪ್ರದೇಶ ಸರ್ಕಾರ ನಡೆಸಿದೆ ಎಂದು ತಿಳಿದು ಬಂದಿದೆ.
‘ಭಾನುವಾರ ನಡೆದ ರಾಜ್ಯ ಮುಜರಾಯಿ ಸಚಿವ ನೀಲಕಂಠ ತಿವಾರಿ ಅಧ್ಯಕ್ಷತೆಯಲ್ಲಿ ನಡೆದ ಪಂಡಿತರನ್ನು ಒಳಗೊಂಡ ಕಾಶಿ ವಿದ್ವತ್ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಆದರೆ ಇನ್ನೂ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿಲ್ಲ. ಜನತೆಯ ಅಭಿಪ್ರಾಯ ಆಲಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!
ಈ ನಡುವೆ, ‘ಧೋತಿ-ಕುರ್ತಾ, ಸೀರೆ ಧರಿಸಿದವರಿಗೆ ಮಾತ್ರ ಸ್ಪರ್ಶದರ್ಶನ. ಪ್ಯಾಂಟ್, ಶರ್ಟ್, ಚೂಡಿದಾರ್, ಜೀನ್ಸ್ ಧರಿಸಿದವರಿಗೆ ಕೇವಲ ದೂರದಿಂದ ಶಿವಲಿಂಗ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಬಗ್ಗೆ ಹಾಗೂ ಪುರೋಹಿತರಿಗೂ ವಸ್ತ್ರಸಂಹಿತೆ ಜಾರಿ ಮಾಡುವ ಬಗ್ಗೆ ಸಭೆ ಚರ್ಚಿಸಿದೆ’ ಎಂದು ವರದಿಗಳು ಹೇಳಿವೆ.