ಹೊಸ ಸಂಸತ್ತಿನ ಲೋಕಸಭೆಯಲ್ಲಿ 900 ಸದಸ್ಯರಿಗೆ ಸೀಟು!| ಸೆಂಟ್ರಲ್ ವಿಸ್ತಾ ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಹೇಳಿಕೆ| ಮುಂದಿನ ಲೋಕಸಭಾ ಚುನಾವಣೆ ವೇಳೆ ಸೀಟು ಹೆಚ್ಚಳ?
ಅಹಮದಾಬಾದ್(ಜೂ.15): ನವದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಸಂಸತ್ ಕಟ್ಟಡದಲ್ಲಿ 800ರಿಂದ 900 ಸದಸ್ಯರು ಕುಳಿತುಕೊಳ್ಳಬಹುದಾದಷ್ಟುದೊಡ್ಡ ಲೋಕಸಭೆ ಸಭಾಂಗಣ ನಿರ್ಮಿಸಲಾಗುವುದು ಎಂದು ಈ ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಬಿಮಲ್ ಪಟೇಲ್ ಹೇಳಿದ್ದಾರೆ. ಅದರೊಂದಿಗೆ, ಮುಂದಿನ ದಿನಗಳಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಡೆಸಿ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಏರಿಸುವ ಸುಳಿವು ದೊರೆತಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಅರ್ಧ ಆನ್‌ಲೈನ್?
undefined
ಬಿಮಲ್ ಪಟೇಲ್ ಅವರು ಸೆಂಟ್ರಲ್ ವಿಸ್ತಾ ಯೋಜನೆಯ (ಹೊಸ ಸಂಸತ್ ಭವನ) ಕುರಿತು ಮಹಾರಾಷ್ಟ್ರದ ಆರ್ಕಿಟೆಕ್ಚರ್ ಕಾಲೇಜುಗಳ ಸಂಘ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಶನಿವಾರ ಹೊಸ ನೀಲನಕ್ಷೆಯ ಕುರಿತು ವಿವರ ನೀಡಿದರು. ಅದರಲ್ಲಿ, ಹೊಸ ಕಟ್ಟಡವು ತ್ರಿಕೋಣಾಕಾರದಲ್ಲಿರಲಿದೆ ಮತ್ತು ಭೂಕಂಪ ನಿರೋಧ ವ್ಯವಸ್ಥೆಗೆ ಅನುಗುಣವಾಗಿ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರವು ಇದರಲ್ಲಿನ ಲೋಕಸಭಾ ಸಭಾಂಗಣವು 800-900 ಸದಸ್ಯರು ಕುಳಿತುಕೊಳ್ಳುವಷ್ಟುದೊಡ್ಡದಿರಬೇಕು ಎಂದು ಹೇಳಿದೆ ಎಂದು ಮಾಹಿತಿ ನೀಡಿದರು.
ಈ ಮೊದಲು ತಯಾರಿಸಿದ್ದ ನೀಲನಕ್ಷೆಗೂ, ನಂತರ ಆರು-ಏಳು ಬಾರಿ ಬದಲಾಗಿ ಈಗಿನ ಹಂತಕ್ಕೆ ಬಂದಿರುವ ನೀಲನಕ್ಷೆಗೂ ಸಾಕಷ್ಟುವ್ಯತ್ಯಾಸಗಳಿವೆ. ಇನ್ನುಮುಂದೆಯೂ ಕೆಲ ಬದಲಾವಣೆಗಳು ಆಗಬಹುದು ಎಂದು ತಿಳಿಸಿದರು. 25,000 ಕೋಟಿ ರು. ವೆಚ್ಚದಲ್ಲಿ ಸೆಂಟ್ರಲ್ ವಿಸ್ತಾ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.