ನೇಪಾಳ ನೆರೆಗೆ 580 ಸಾವು: 320 ಭಾರತೀಯರು ನಾಪತ್ತೆ, 1000 ಜನರಿಗಾಗಿ ಹುಡುಕಾಟ

Published : Aug 29, 2026, 07:37 AM IST
Nepal Flood

ಸಾರಾಂಶ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮೃತರ ಸಂಖ್ಯೆ 580ಕ್ಕೆ ಏರಿದೆ. 320 ಭಾರತೀಯರು ಸೇರಿದಂತೆ ಸುಮಾರು 1 ಸಾವಿರ ಮಂದಿ ನಾಪತ್ತೆಯಾಗಿದ್ದು, ನದಿಗಳಲ್ಲಿ ತಾತ್ಕಾಲಿಕ ಕೆರೆಗಳು ಸೃಷ್ಟಿಯಾಗಿರುವುದರಿಂದ ಎರಡನೇ ಪ್ರವಾಹದ ಅಲೆಯ ಎಚ್ಚರಿಕೆ ನೀಡಲಾಗಿದೆ.

ಕಾಠ್ಮಂಡು/ನವದೆಹಲಿ (ಆ.29): ಬುಧವಾರ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹ ಅಹುತಿ ತೆಗೆದುಕೊಳ್ಳುವುದನ್ನು ಮುಂದುರಿಸಿದ್ದು, ಒಟ್ಟು ಮೃತರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ. ಇದರಲ್ಲಿ 320 ಮಂದಿ ಭಾರತೀಯರು ಸೇರಿದ್ದಾರೆ. ಇಂತಹ ಹೊತ್ತಿನಲ್ಲೇ, ಮತ್ತದೇ ಪ್ರದೇಶದಲ್ಲಿ ನೆರೆಯ 2ನೇ ಅಲೆ ಏಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದು, ಜನಮಾನಸದಲ್ಲಿ ಭಯ ಬೇರೂರುವಂತೆ ಮಾಡಿದೆ.

ರಕ್ಷಣಾ ಕಾರ್ಯ ಮುಂದುವರಿಕೆ

ಕೆಸರು ಮುಚ್ಚಿದ ಅವಶೇಷಗಳಡಿಯಲ್ಲಿ ಶೋಧ ಕಾರ್ಯ ಮುಂದುವರಿಸಿರುವ ನೇಪಾಳ ಪೊಲೀಸರು, ಚಿತ್ವಾನ್‌ನಲ್ಲಿ 178, ನವಾಲ್‌ಪರಸಿ ಪೂರ್ವದಲ್ಲಿ 110, ಗೋರ್ಖಾದಲ್ಲಿ 44, ನುವಾಕೋಟ್‌ನಲ್ಲಿ 37, ಧಾಡಿಂಗ್ ಜಿಲ್ಲೆಯಲ್ಲಿ 33, ತನಹುವಿನಲ್ಲಿ 28, ಪಶ್ಚಿಮ ನವಾಲ್‌ಪರಸಿಯಲ್ಲಿ 27 ಮತ್ತು ರಸುವಾದಲ್ಲಿ 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಜತೆಗೆ ಟಿಬೆಟ್‌ನ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು. ಒಟ್ಟಿನಲ್ಲಿ ಈವರೆಗೆ 1,545 ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅದರಲ್ಲಿ 84 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೇ ಪ್ರವಾಹದ ಭೀತಿ: ಹಿಮಪಾತದ ವೇಳೆ ನದಿ ಸೇರಿದ ಮಂಜಿನ ಬೃಹತ್‌ ಗಡ್ಡೆಗಳು ಮತ್ತು ಬಂಡೆಗಳು ನೇಪಾಳ-ಟಿಬೆಟ್ ಗಡಿಯ ಸಮೀಪದಲ್ಲಿರುವ ಚೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳ ಸಂಗಮ ಪ್ರದೇಶದಲ್ಲಿ ಹರಿವ ನೀರಿಗೆ ಅಡ್ಡಲಾಗಿ ನಿಂತು ತಾತ್ಕಾಲಿಕ ಕೆರೆಗಳನ್ನು ಸೃಷ್ಟಿಸಿವೆ. ಕ್ರಮೇಣ ಇವು ಸರಿದಲ್ಲಿ, ನದಿಯಲ್ಲಿ ಶೇಖರಣೆಯಾಗಿರುವ 20 ಲಕ್ಷ ಕ್ಯೂಬಿಕ್‌ ಕೆಸರುನೀರು ಒಮ್ಮೆಲೆ ನುಗ್ಗಿ, ಸುತ್ತಮುತ್ತಲಿನ ಪ್ರದೇಶಗಳನ್ನು ನುಂಗಿಹಾಕುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜತೆಗೆ, ಯಾವುದೇ ಅಪಾಯದ ಮುನ್ಸೂಚನೆ ದೊರೆತಲ್ಲಿ, ಭೋಟೇಕೋಶಿ ಮತ್ತು ತ್ರಿಶೂಲಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಿರ್ದೇಶಿಸಿದ್ದಾರೆ. ಅತ್ತ ಟಿಬೆಟ್‌ನ ಜಲಾಶಯವೂ ಒಡೆದಿದ್ದು, ಪ್ರವಾಹದ ಮತ್ತೊಂದು ಅಲೆಗೆ ಸಿದ್ಧರಾಗಿರಿ ಜನರನ್ನು ಎಚ್ಚರಿಸಲಾಗಿದೆ.

320 ಭಾರತೀಯರು ನಾಪತ್ತೆ; 21 ಜನ ತವರಿಗೆ, 400 ಮಂದಿ ಚೀನಾದಲ್ಲಿ

ನವದೆಹಲಿ: ಪ್ರವಾಹದ ವೇಳೆ ನೇಪಾಳದಲ್ಲಿದ್ದ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ‘ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ತಮಿಳುನಾಡಿನವರು ಸೇರಿದಂತೆ 21 ಭಾರತೀಯರು ಕಾಠ್ಮಂಡು ಮಾರ್ಗವಾಗಿ ದೆಹಲಿಗೆ ಬಂದಿಳಿದಿದ್ದಾರೆ. ಅವರನ್ನೆಲ್ಲಾ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಬರಮಾಡಿಕೊಂಡರು. ಅತ್ತ ಚೀನಾದಲ್ಲಿದ್ದ 96 ಮಂದಿ ರಸ್ತೆ ಮಾರ್ಗದ ಮೂಲಕ ಸುರಕ್ಷಿತವಾಗಿ ನೇಪಾಳ ತಲುಪಿದ್ದಾರೆ. ಇನ್ನೂ 100 ಜನ ಭಾರತೀಯರು ನಮ್ಮ ಸಂಪರ್ಕಕ್ಕೇ ಸಿಕ್ಕಿಲ್ಲ’ ಎಂದು ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್‌ ಹೇಳಿದ್ದಾರೆ. ಜತೆಗೆ, ‘ಚೀನಾದಲ್ಲಿ ಸಿಲುಕಿರುವ 400 ಭಾರತೀಯರು ತಮ್ಮ ಪರಿವಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ನಮ್ಮ ದೂತಾವಾಸವೂ ಅವರನ್ನು ಸಂಪರ್ಕಿಸಿದೆ. ಅವರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಚೀನಾದ ಸ್ಥಳೀಯ ಅಧಿಕಾರಿಗಳ ಜತೆ ಕೆಲಸ ಮಾಡುತ್ತಿದ್ದೇವೆ’ ಎಂದರು. ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗಾಗಿ ವಿದೇಶಾಂಗ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

National News Live: ನೇಪಾಳ ನೆರೆಗೆ 580 ಸಾವು - 320 ಭಾರತೀಯರು ನಾಪತ್ತೆ, 1000 ಜನರಿಗಾಗಿ ಹುಡುಕಾಟ
ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ