
ಕಠ್ಮಂಡು: ನೇಪಾಳ-ಚೀನಾ ಗಡಿಯ ರಸುವಾಗಧಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಿಮನದಿ ಪ್ರವಾಹ ದುರಂತವು ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಈ ಭೀಕರ ವಿಪತ್ತಿನಲ್ಲಿ ಸುಮಾರು 469ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಕಾಣೆಯಾಗಿದ್ದಾರೆ. ಈ ದುರಂತದ ಬೆನ್ನಲ್ಲೇ ಚೀನಾದ ಜವಾಬ್ದಾರಿರಹಿತ ನಡವಳಿಕೆ ಹಾಗೂ ಪ್ರಧಾನಿ ಬಾಲೆನ್ ಶಾ ನೇತೃತ್ವದ ನೇಪಾಳ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ದೇಶೀಯ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಟಿಬೆಟ್ ಗಡಿಭಾಗದಲ್ಲಿದ್ದ ಹಿಮನದಿಯೊಂದು ಇದ್ದಕ್ಕಿದ್ದಂತೆ ಒಡೆದು, ಪ್ರಚಂಡ ಪ್ರಮಾಣದ ನೀರು ಮತ್ತು ಭಗ್ನಾವಶೇಷಗಳು ಕೆಳಭಾಗದಲ್ಲಿದ್ದ ನೇಪಾಳದ ರಸುವಾಗಧಿ ಪ್ರದೇಶಕ್ಕೆ ನುಗ್ಗಿದವು. ಹಿಮನದಿ ಒಡೆದ ನೀರು ರಸುವಾಗಧಿಗೆ ತಲುಪಲು ಕೇವಲ 1.5 ಗಂಟೆಗಳ ಕಾಲಾವಕಾಶವಿತ್ತು. ಚೀನಾ ಸರ್ಕಾರವು ಸುಧಾರಿತ ಉಪಗ್ರಹ ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿದ್ದರೂ, ನೇಪಾಳಕ್ಕೆ ಯಾವುದೇ ಮುಂಚಿನ ಎಚ್ಚರಿಕೆ ನೀಡಲಿಲ್ಲ. ಚೀನಾದಿಂದ ಒಂದು ಸಣ್ಣ ಫೋನ್ ಕರೆ ಅಥವಾ ಎಚ್ಚರಿಕೆಯ ಸಂದೇಶ ಬಾರದೇ ಇದ್ದುದರಿಂದ, ತಗ್ಗು ಪ್ರದೇಶದಲ್ಲಿದ್ದ ಜಲವಿದ್ಯುತ್ ಯೋಜನೆಯ ಕಾರ್ಮಿಕರು, ಸ್ಥಳೀಯ ನಾಗರಿಕರು ಹಾಗೂ ಪೊಲೀಸರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.
ಅಧಿಕಾರಕ್ಕೆ ಬಂದು ಸುಮಾರು 5 ತಿಂಗಳು ಕಳೆಯುತ್ತಿರುವ ಪ್ರಧಾನಿ ಬಾಲೆನ್ ಶಾ, ತಮ್ಮ ರಾಷ್ಟ್ರೀಯತಾವಾದಿ ಇಮೇಜ್‌ನಿಂದ ಗಮನ ಸೆಳೆದಿದ್ದರು. ಆದರೆ ಈ ಪ್ರಕೃತಿ ವಿಕೋಪದ ವೇಳೆ ಅವರ ನೀತಿಗಳು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲಿಗೆ ಟಿಬೆಟ್ ಗಡಿ ಹಾಗೂ ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುತ್ತಿರುವ ವಿವೇಚನಾರಹಿತ ನಿರ್ಮಾಣ ಕಾರ್ಯಗಳು ಮತ್ತು ಅಣೆಕಟ್ಟುಗಳು ಅಪಾಯಕಾರಿ ಎಂದು ಪರಿಸರ ತಜ್ಞರು ಹಾಗೂ ಮಾಜಿ ಸಿವಿಲ್ ಎಂಜಿನಿಯರ್‌ಗಳ ಗುಂಪು ಎಚ್ಚರಿಸಿತ್ತು. ಆದರೂ ಬಾಲೆನ್ ಶಾ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಇನ್ನು ಎರಡನೇ ವಿಚಾರವೆಂದರೆ, ಸಣ್ಣಪುಟ್ಟ ವಿಷಯಗಳಿಗೂ ಭಾರತದ ವಿರುದ್ಧ ಕಠಿಣ ನಿಲುವು ತಳೆಯುವ ನೇಪಾಳದ ನಾಯಕರು, ಚೀನಾದ ಅಪಾಯಕಾರಿ ನಿರ್ಮಾಣಗಳ ವಿರುದ್ಧ ಧ್ವನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಲೆಗಳ ಹೆಸರುಗಳನ್ನು ನೇಪಾಳಿ ಭಾಷೆಗೆ ಬದಲಾಯಿಸುವುದು ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಚಾರ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಾಗರಿಕರ ಜೀವ ರಕ್ಷಣೆಯಂತಹ ಮೂಲಭೂತ ವಿಷಯಕ್ಕೆ ಆದ್ಯತೆ ನೀಡಬೇಕಿತ್ತು ಎಂಬ ಆಕ್ರೋಶವೂ ವ್ಯಕ್ತವಾಗಿದೆ.
ಈ ಭೀಕರ ವಿಪತ್ತಿನ ನಂತರ ನೇಪಾಳದ ಪ್ರಮುಖ ದಿನಪತ್ರಿಕೆ 'ನಯಾ ಪತ್ರಿಕಾ'ದ ಹಿರಿಯ ಪತ್ರಕರ್ತರು ಮತ್ತು ಚಿಂತಕರು ಚೀನಾದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನೇಪಾಳವು ಚೀನಾದ ಎಲ್ಲಾ ಕಾನೂನುಬದ್ಧ ಹಾಗೂ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದರೂ, ಇಂತಹ ತುರ್ತು ಸಂದರ್ಭದಲ್ಲಿ ಚೀನಾ ಮಾಹಿತಿ ನೀಡದೆ ಕೈಕೊಟ್ಟಿರುವುದು ಏಕಪಕ್ಷೀಯ ಪ್ರೀತಿಯ ಬೆಲೆ ಎಂದು ಬಣ್ಣಿಸಲಾಗಿದೆ. ರಾಷ್ಟ್ರೀಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ಗೋವಿಂದ್ ರಾಜ್ ಪೋಖರೆಲ್ ಪ್ರಕಾರ, ಬಲವಾದ ಪ್ರವಾಹದ ಮುನ್ಸೂಚನೆ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿದ್ದ ಜನರು ಕ್ಷಣಾರ್ಧದಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ ಎನ್ನುವುದು ಕೇಳಿ ಬಂದಿದೆ.
ನೇಪಾಳದಲ್ಲಿ ಆಕ್ರೋಶ ಭುಗಿಲೇಳುತ್ತಿದ್ದಂತೆ ಕಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿಯು ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಕಲಿ ಎಂದು ತಳ್ಳಿಹಾಕಿದೆ. ಈ ಘಟನೆಯು ನೇಪಾಳದ ಭಾಗದಲ್ಲೇ ಸಂಭವಿಸಿದ ಹಿಮನದಿ ದುರಂತವಾಗಿದ್ದು, ಇದರಲ್ಲಿ ಚೀನಾದ ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದೆ. ಅಲ್ಲದೆ ದೂಷಣೆ ಮಾಡುವುದಕ್ಕಿಂತ ಸಹಕಾರ ಮುಖ್ಯ ಎಂದು ಚೀನಾ ಸಲಹೆ ನೀಡಿದೆ. ಆದರೆ, ಕಳೆದ ವರ್ಷದ ಆಗಸ್ಟ್‌ನಲ್ಲೂ ಟಿಬೆಟ್‌ನ ಹಿಮನದಿ ಸರೋವರ ಒಡೆದು ರಸುವಾಗಧಿ ಮತ್ತು ಗೈರಾಂಗ್ ಸಂಪರ್ಕಿಸುವ 'ಫ್ರೆಂಡ್‌ಶಿಪ್ ಸೇತುವೆ' ನಾಶವಾಗಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಚೀನಾ ಎಚ್ಚರಿಕೆ ವ್ಯವಸ್ಥೆ ರೂಪಿಸಿಲ್ಲ.
ರಸುವಾಗಧಿ ದುರಂತವು ನೇಪಾಳ ಸರ್ಕಾರಕ್ಕೆ ದೊಡ್ಡ ಪಾಠವಾಗಿದೆ. ಬರಿ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಮತ್ತು ಸಿದ್ಧಾಂತಗಳಿಂದ ದೇಶದ ಗಡಿ ಹಾಗೂ ನಾಗರಿಕರನ್ನು ರಕ್ಷಿಸಲು ಸಾಧ್ಯವಿಲ್ಲ. ಚೀನಾ ಸರ್ಕಾರವು ತನ್ನ ವಾಣಿಜ್ಯ ಮತ್ತು ರಾಜತಾಂತ್ರಿಕ ಹಿತಾಸಕ್ತಿಗಳನ್ನಷ್ಟೇ ನೋಡಿಕೊಳ್ಳುತ್ತದೆ ಎಂಬ ಸತ್ಯವನ್ನು ಅರಿತು, ಬಾಲೆನ್ ಶಾ ಸರ್ಕಾರವು ಭಾರತದಂತೆ ಚೀನಾವನ್ನೂ ಗಂಭೀರವಾಗಿ ಪ್ರಶ್ನಿಸುವ ಹಾಗೂ ದೇಶದ ಜನರ ಭದ್ರತೆಗೆ ಮೊದಲ ಆದ್ಯತೆ ನೀಡುವ ತುರ್ತು ಅಗತ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ