Neerja bhanot: ಸ್ಮಿತ್ ಮಚ್ಚರ್‌ಗಿಂತಲೂ ನಾಲ್ಕು ದಶಕಗಳ ಮೊದಲು: 350 ಪ್ರಯಾಣಿಕರನ್ನು ರಕ್ಷಿಸಿ ಪ್ರಾಣ ಬಿಟ್ಟ 22 ಹರೆಯದ ಭಾರತೀಯ ಹುಡುಗಿ!

Published : Oct 01, 2026, 03:58 PM IST
Smith Macchar

ಸಾರಾಂಶ

1986ರಲ್ಲಿ ಕರಾಚಿಯಲ್ಲಿ ಪ್ಯಾನ್ ಆಮ್ ವಿಮಾನವನ್ನು ಉಗ್ರರು ಅಪಹರಿಸಿದಾಗ, 22 ವರ್ಷದ ನೀರ್ಜಾ ಭಾನೋಟ್ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದರು. ಅಮೆರಿಕನ್ ಪ್ರಯಾಣಿಕರ ಪಾಸ್‌ಪೋರ್ಟ್ ಬಚ್ಚಿಟ್ಟು, 350ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿ ಹುತಾತ್ಮರಾದರು. ಅವರ ಈ ನಿಸ್ವಾರ್ಥ ತ್ಯಾಗಕ್ಕೆ ಮರಣೋತ್ತರ 'ಅಶೋಕ ಚಕ್ರ' ಒಲಿದುಬಂತು.

ವಾಯುಯಾನ ರಂಗದಲ್ಲಿ ತುರ್ತು ಪರಿಸ್ಥಿತಿಗಳು ಎದುರಾದಾಗ, ಪ್ರಯಾಣಿಕರ ಪ್ರಾಣ ಉಳಿಸಲು ಸಿಬ್ಬಂದಿ ತೋರುವ ಸಾಹಸ ಅಪಾರವಾದದ್ದು. ಇತ್ತೀಚೆಗೆ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ದಾಳಿಗೊಳಗಾಗಿಯೂ ಧೈರ್ಯದಿಂದ ಕಾರ್ಯನಿರ್ವಹಿಸಿ ಪ್ರಯಾಣಿಕರ ರಕ್ಷಣೆಗೆ ನೆರವಾಗಿದ್ದರು. ಆದರೆ, ಈ ಘಟನೆಗೂ ನಾಲ್ಕು ದಶಕಗಳ ಮೊದಲು, ಅಂದರೆ 1986ರಲ್ಲಿ, ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಾರಿ ಹಾಗೂ ಕಣ್ಣೀರು ತರಿಸುವ ಶೌರ್ಯದ ಕಥೆಯೊಂದು ಬರೆಯಲ್ಪಟ್ಟಿತ್ತು. ಅದುವೇ 22 ವರ್ಷದ ಹಿರಿಯ ಪರ್ಸರ್ ನೀರ್ಜಾ ಭಾನೋಟ್ ಅವರ ನಿಸ್ವಾರ್ಥ ತ್ಯಾಗದ ಗಾತ.

'ಪ್ಯಾನ್ ಆಮ್'ನಲ್ಲಿ ತರಬೇತಿ!

ಸಿನೆಮಾ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ನೀರ್ಜಾ, ನಂತರ 'ಪ್ಯಾನ್ ಆಮ್' ಸಂಸ್ಥೆಯಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ತರಬೇತಿ ಪಡೆದು ಹಿರಿಯ ಪರ್ಸರ್ ಹುದ್ದೆಗೆ ಏರಿದ್ದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿತ್ತು. 1986ರ ಸೆಪ್ಟೆಂಬರ್ 5ರಂದು ಮುಂಬೈನಿಂದ ಹೊರಟ ಪ್ಯಾನ್ ಆಮ್ ಫ್ಲೈಟ್ 73 (ಬೋಯಿಂಗ್ 747) ವಿಮಾನವು ಕರಾಚಿ ಮಾರ್ಗವಾಗಿ ಫ್ರಾಂಕ್‌ಫರ್ಟ್ ಮತ್ತು ನ್ಯೂಯಾರ್ಕ್‌ಗೆ ತಲುಪಬೇಕಿತ್ತು. ಕರಾಚಿಯಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವೇಷದಲ್ಲಿದ್ದ ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರು ವಿಮಾನದೊಳಗೆ ನುಗ್ಗಿದರು. ಅವರ ಬಳಿ ಅತ್ಯಾಧುನಿಕ ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಸ್ಫೋಟಕಗಳಿದ್ದವು. ಜೈಲಿನಲ್ಲಿರುವ ತಮ್ಮ ಉಗ್ರರನ್ನು ಬಿಡುಗಡೆ ಮಾಡಲು ವಿಮಾನವನ್ನು ಸೈಪ್ರಸ್ ಹಾಗೂ ಇಸ್ರೇಲ್‌ಗೆ ಒಯ್ಯುವುದು ಅವರ ಯೋಜನೆಯಾಗಿತ್ತು.

ಅಮೆರಿಕನ್ ಪ್ರಯಾಣಿಕ ರಾಜೇಶ್ ಸಾವು!

ಅಪಹರಣದ ಸುಳಿವು ಸಿಗುತ್ತಿದ್ದಂತೆ ಸಿಬ್ಬಂದಿಯೊಬ್ಬರು ಕಾಕ್‌ಪಿಟ್‌ಗೆ ಮಾಹಿತಿ ತಲುಪಿಸಿದರು. ಕೂಡಲೇ ಅಮೆರಿಕನ್ ಪೈಲಟ್‌ಗಳು ಹ್ಯಾಚ್ ಮೂಲಕ ತಪ್ಪಿಸಿಕೊಂಡರು. ಇದರಿಂದ ವಿಮಾನವನ್ನು ಹಾರಿಸಲು ಉಗ್ರರಿಗೆ ಸಾಧ್ಯವಾಗಲಿಲ್ಲ. ಆದರೆ, ನೂರಾರು ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಬಂದೂಕುಧಾರಿಗಳ ವಶದಲ್ಲೇ ಉಳಿದರು. ಹೊರಗಿನಿಂದ ಪ್ಯಾನ್ ಆಮ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದರೆ, ಒಳಗಿದ್ದ ನೀರ್ಜಾ ಮತ್ತು ಸಿಬ್ಬಂದಿ ಪ್ರಯಾಣಿಕರಿಗೆ ಧೈರ್ಯ ತುಂಬುತ್ತಿದ್ದರು. ಕೋಪಗೊಂಡ ಉಗ್ರರು 29 ವರ್ಷದ ಅಮೆರಿಕನ್ ಪ್ರಯಾಣಿಕ ರಾಜೇಶ್ ಕುಮಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿ ಕೆಳಗೆ ತಳ್ಳಿದಾಗ ಅಪಾಯದ ತೀವ್ರತೆ ಸ್ಪಷ್ಟವಾಯಿತು.

ನೀರ್ಜಾ ತೋರಿದ ಸಮಯಪ್ರಜ್ಞೆ ಅದ್ಭುತ!

ಮುಂದಿನ ಹಂತವಾಗಿ ಉಗ್ರರು ಅಮೆರಿಕನ್ ಪ್ರಯಾಣಿಕರನ್ನು ಹುಡುಕಲು ಪಾಸ್‌ಪೋರ್ಟ್‌ಗಳನ್ನು ಸಂಗ್ರಹಿಸಲು ಆದೇಶಿಸಿದರು. ಈ ಸಂದರ್ಭದಲ್ಲಿ ನೀರ್ಜಾ ತೋರಿದ ಸಮಯಪ್ರಜ್ಞೆ ಅದ್ಭುತವಾದದ್ದು. ಅವರು ಹಾಗೂ ಅವರ ಸಹೋದ್ಯೋಗಿಗಳು ಸದ್ದಿಲ್ಲದೆ ಅಮೆರಿಕನ್ ಪಾಸ್‌ಪೋರ್ಟ್‌ಗಳನ್ನು ಪ್ರತ್ಯೇಕಿಸಿ, ಆಸನಗಳ ಕೆಳಗೆ ಮತ್ತು ಲಗೇಜ್‌ಗಳ ನಡುವೆ ಬಚ್ಚಿಟ್ಟರು. ಉಗ್ರರ ಕಣ್ಣಿಗೆ ಅಮೆರಿಕನ್ನರು ಬೀಳದಂತೆ ತಡೆದ ಈ ನಿಸ್ವಾರ್ಥ ಕೃತ್ಯವನ್ನು ನಂತರ ಬದುಕುಳಿದ ಪ್ರಯಾಣಿಕರು ಮುಕ್ತಕಂಠದಿಂದ ಶ್ಲಾಘಿಸಿದರು. ಸುಮಾರು 16 ಗಂಟೆಗಳ ಕಾಲ ಆಹಾರ, ನೀರು ನೀಡಿ ಪ್ರಯಾಣಿಕರನ್ನು ಶಾಂತವಾಗಿರಿಸಿದ ಸಿಬ್ಬಂದಿ ಸ್ವತಃ ಮಾನವ ಗುರಾಣಿಗಳಾಗಿ ನಿಂತರು.

ಗಂಭೀರ ಗಾಯಗಳಿಂದ ಕೊನೆಯುಸಿರೆಳೆದ ನಿರ್ಜಾ!

ಸಂಜೆಯಾಗುತ್ತಿದ್ದಂತೆ ವಿಮಾನದ ವಿದ್ಯುತ್ ಸಂಪರ್ಕ ಹಾಗೂ ಹವಾನಿಯಂತ್ರಣ ವ್ಯವಸ್ಥೆ ಹದಗೆಟ್ಟಿತು. ಕತ್ತಲೆ ಆವರಿಸುತ್ತಿದ್ದಂತೆ ವಿಮಾನದಲ್ಲಿ ತುರ್ತು ಪರಿಸ್ಥಿತಿ ತಲುಪಿತು. ವಿದ್ಯುತ್ ಪೂರ್ತಿಯಾಗಿ ಸ್ಥಗಿತಗೊಂಡ ತಕ್ಷಣ ಉಗ್ರರು ಸಿಕ್ಕ ಸಿಕ್ಕತ್ತ ಗುಂಡಿನ ಸುರಿಮಳೆಗರೆದರು. ಈ ಗೊಂದಲದಲ್ಲಿ ಬಾಗಿಲುಗಳು ತೆರೆದುಕೊಂಡಾಗ, ನೀರ್ಜಾ ತಕ್ಷಣವೇ ತುರ್ತು ನಿರ್ಗಮನ ಸ್ಲೈಡ್‌ಗಳನ್ನು ತೆರೆದು ಪ್ರಯಾಣಿಕರು ಹೊರಗೆ ಹಾರಲು ನೆರವಾದರು. ತಮಗೆ ಸೊಂಟಕ್ಕೆ ಗುಂಡು ತಗಲಿದ್ದರೂ, ಲೆಕ್ಕಿಸದೆ ಕೊನೆಯ ಪ್ರಯಾಣಿಕರನ್ನು ವಿಮಾನದಿಂದ ಹೊರಗೆ ಕಳುಹಿಸುವವರೆಗೆ ಅವರು ಹೋರಾಡಿದರು. ಬದುಕುಳಿದ ಸಹೋದ್ಯೋಗಿಗಳು ನೀರ್ಜಾ ಅವರನ್ನು ತುರ್ತು ಸ್ಲೈಡ್ ಮೂಲಕ ಕೆಳಗೆ ಇಳಿಸಿ ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಗಾಯಗಳಿಂದಾಗಿ ಅವರು ಕೊನೆಯುಸಿರೆಳೆದರು.

ಮರಣೋತ್ತರವಾಗಿ 'ಅಶೋಕ ಚಕ್ರ'ದ ಗೌರವ!

ಈ ಭೀಕರ ದಾಳಿಯಲ್ಲಿ 21 ಜನರು ಪ್ರಾಣ ಕಳೆದುಕೊಂಡರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಆದರೆ ನೀರ್ಜಾ ಮತ್ತು 17 ಜನರ ಸಿಬ್ಬಂದಿ ತಂಡದ ಚಾಣಾಕ್ಷತೆಯಿಂದಾಗಿ 350ಕ್ಕೂ ಹೆಚ್ಚು ಜನರ ಪ್ರಾಣ ಉಳಿಯಿತು. 1987ರಲ್ಲಿ ಭಾರತ ಸರ್ಕಾರ ನೀರ್ಜಾಗೆ ಮರಣೋತ್ತರವಾಗಿ 'ಅಶೋಕ ಚಕ್ರ' ನೀಡಿ ಗೌರವಿಸಿತು. ಈ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಹಾಗೂ ಮೊದಲ ಮಹಿಳೆ ನೀರ್ಜಾ. 2004ರಲ್ಲಿ ಅಂಚೆ ಚೀಟಿ ಬಿಡುಗಡೆಯಾದರೆ, 2006ರಲ್ಲಿ ಅಮೆರಿಕ ಸರ್ಕಾರವೂ ಸಿಬ್ಬಂದಿಗೆ ವಿಶೇಷ ಪ್ರಶಸ್ತಿ ನೀಡಿತು. 2016ರಲ್ಲಿ ಬಂದ 'ನೀರ್ಜಾ' ಚಲನಚಿತ್ರವು ಈ ಸಾಹಸವನ್ನು ಹೊಸ ಪೀಳಿಗೆಗೆ ತಲುಪಿಸಿತು. 40 ವರ್ಷಗಳ ನಂತರವೂ ನೀರ್ಜಾ ಭಾನೋಟ್ ಅವರ ಶೌರ್ಯ ಪ್ರತಿಯೊಬ್ಬ ವಾಯುಯಾನ ಉದ್ಯೋಗಿಗೆ ಮತ್ತು ಭಾರತೀಯರಿಗೆ ಎಂದಿಗೂ ಸ್ಪೂರ್ತಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೋಟಕ್ ಮಹೀಂದ್ರಾ ಬ್ಯಾಂಕ್ ನೂತನ ಎಂಡಿ ಮತ್ತು ಸಿಇಒ ಅನುಪ್ ಸಹಾ ನೇಮಕ, ಆರ್‌ಬಿಐ ಒಪ್ಪಿಗೆ
ಸತ್ತಿದ್ದು ನವಜಾತ ಶಿಶು, ಡೆತ್ ಸರ್ಟಿಫಿಕೇಟ್ ಬಂದಿದ್ದು ಜೀವಂತ ತಾಯಿ ಹೆಸರಲ್ಲಿ! ಠಾಣೆಗೆ ಹೋದ್ರೆ ಪೊಲೀಸರು ನಿರ್ಲಕ್ಷ್ಯ