6 ದಿನದಲ್ಲಿ 10 ಲಕ್ಷ ಜನರಿಗೆ ಲಸಿಕೆ: ಹೊಸ ವಿಶ್ವದಾಖಲೆ ಬರೆದ ಭಾರತ!

By Suvarna NewsFirst Published Jan 22, 2021, 7:46 AM IST
Highlights

ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭ| 6 ದಿನದಲ್ಲಿ 10 ಲಕ್ಷ ಜನರಿಗೆ ಲಸಿಕೆ: ಹೊಸ ವಿಶ್ವದಾಖಲೆ| ಗುರುವಾರ ಸಂಜೆ 6 ಗಂಟೆಯ ಒಳಗಾಗಿ ಒಟ್ಟು 9,99,065 ಆರೋಗ್ಯ ಕಾರ‍್ಯಕರ್ತರಿಗೆ ಲಸಿಕೆ

ನವದೆಹಲಿ(ಜ.22): ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿ 6 ದಿನ ಕಳೆದಿದ್ದು, ಗುರುವಾರ ಸಂಜೆ 6 ಗಂಟೆಯ ಒಳಗಾಗಿ ಒಟ್ಟು 9,99,065 ಆರೋಗ್ಯ ಕಾರ‍್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ಭಾರತ ವಿಶ್ವದ ದೊಡ್ಡಣ್ಣ ಅಮೆರಿಕವನ್ನೂ ಹಿಂದಿಕ್ಕಿ ದಾಖಲೆ ಬರೆದಿದೆ.

ಅಮೆರಿಕ ಮತ್ತು ಇಸ್ರೇಲ್‌ 10 ಲಕ್ಷ ಜನರಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿದ್ದವು. ಲಸಿಕೆ ಅಭಿಯಾನ ಆರಂಭವಾದ ದಿನ 2,07,229 ಮಂದಿ ಲಸಿಕೆ ಪಡೆದಿದ್ದರು. ನಂತರ ಭಾನುವಾರ 17,072 ಮಂದಿ, ಸೋಮವಾರ 1.48 ಲಕ್ಷ, ಬುಧವಾರ 1.12 ಲಕ್ಷ ಜನರು ಲಸಿಕೆ ಪಡೆದಿದ್ದರು.

ನೇಪಾಳಕ್ಕೆ 10 ಲಕ್ಷ, ಬಾಂಗ್ಲಾಕ್ಕೆ 20 ಲಕ್ಷ ಡೋಸ್‌ ಲಸಿಕೆ ರವಾನೆ

ನೆರೆಯ ಅತ್ಯಾಪ್ತ ದೇಶಗಳಾದ ಭೂತಾನ್‌ ಮತ್ತು ಮಾಲ್ಡೀವ್ಸ್‌ಗೆ ಲಸಿಕೆ ರವಾನಿಸಿದ ಬೆನ್ನಲ್ಲೇ, ಗುರುವಾರ ನೇಪಾಳ ಮತ್ತು ಬಾಂಗ್ಲಾದೇಶಗಳಿಗೂ ಭಾರತ ಕೋವಿಡ್‌ ಲಸಿಕೆಯನ್ನು ರವಾನಿಸಿದೆ. ಗಡಿ ವಿಚಾರವಾಗಿ ಭಾರತದೊಂದಿಗೆ ಕ್ಯಾತೆ ತೆಗೆದಿದ್ದ ನೇಪಾಳಕ್ಕೂ ಭಾರತ ಲಸಿಕೆಯನ್ನು ಆದ್ಯತೆ ಮೇರೆಗೆ ರವಾನಿಸಿರುವುದು ಇಲ್ಲಿ ವಿಶೇಷ.

ಮೊದಲ ಹಂತದಲ್ಲಿ ನೇಪಾಳಕ್ಕೆ 10 ಲಕ್ಷ ಡೋಸ್‌ ಮತ್ತು ಬಾಂಗ್ಲಾ ದೇಶಕ್ಕೆ 20 ಲಕ್ಷ ಡೋಸ್‌ ಕೋವಿಶೀಲ್ಡ್‌ ಲಸಿಕೆ ತಲುಪಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಶ್ರೀಲಂಕಾ, ಆಷ್ಘಾನಿಸ್ತಾನ ಮತ್ತು ಮಾರಿಷಸ್‌ ರಾಷ್ಟ್ರಗಳಿಗೂ ಲಸಿಕೆಗಳನ್ನು ಪೂರೈಸುವುದಾಗಿ ಭಾರತ ಸರ್ಕಾರ ಹೇಳಿದೆ. ಬುಧವಾರ ಭೂತಾನ್‌ಗೆ 1.50 ಲಕ್ಷ ಹಾಗೂ ಮಾಲ್ಡೀವ್‌್ಸಗೆ 1 ಲಕ್ಷ ಕೋವಿಶೀಲ್ಡ್‌ ಲಸಿಕೆಯನ್ನು ಭಾರತ ರವಾನಿಸಿತ್ತು.

click me!