ದೇಶದ ಹೆಮ್ಮೆಯ ಕಂಪನಿ ಟಾಟಾ ಗ್ರೂಪ್, ಭಾರತೀಯರ ಭವ್ಯ ಮಂದಿರವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಬಳಿ ಎರಡು ಐಷಾರಾಮಿ ಹೋಟೆಲ್ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಒಡೆತನದಲ್ಲಿರುವ ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಎಚ್‌ಸಿಎಲ್) ಈ ಕುರಿತಾಗಿ ಒಪ್ಪಂದವನ್ನೂ ಮಾಡಿಕೊಂಡಿದೆ.
ನವದೆಹಹಲಿ (ಏ.22): ದೇಶಕ್ಕೆ ಹೆಮ್ಮೆ ತರುವಂಥ ಯಾವುದೇ ವಿಚಾರವಾಗಿರಲಿ ಅದು ಹೇಗೋ ಟಾಟಾ ಗ್ರೂಪ್‌ನೊಂದಿಗೆ ಅದು ತಳುಕುಹಾಕಿಕೊಂಡಿರುತ್ತದೆ. ಇತ್ತೀಚೆಗೆ ವಂದೇ ಭಾರತ್ ರೈಲಿನ ಉತ್ಪಾದನೆಯಲ್ಲಿ ತೊಡಗಿಕೊಳ್ಳುವುದಾಗಿ ಘೋಷಣೆ ಮಾಡಿದ್ದ ಟಾಟಾ ಗ್ರೂಪ್ ಈಗ ದೇಶದ ಸಮಸ್ತ ಜನರ ಹೆಮ್ಮೆ ಎನಿಸಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಬಳಿ ತನ್ನ ಛಾಪು ಮೂಡಿಸಲಿದೆ. ಅಯೋಧ್ಯೆಗೆ ಬರುವ ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ಐಷಾರಾಮಿ ಹೋಟೆಲ್‌ಅನ್ನ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಂಡಿದೆ. ಈ ಕುರಿತಂತೆ ಟಾಟಾ ಗ್ರೂಪ್‌ನ ಮಾಲೀಕತ್ವದಲ್ಲಿರುವ ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಎಚ್‌ಸಿಎಲ್) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಎರಡು ಗ್ರೀನ್‌ಫೀಲ್ಡ್ ಹೋಟೆಲ್‌ಗಳನ್ನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದೆ. ಅದರೊಂದಿಗೆ ದೇಶದ ಆಧ್ಯಾತ್ಮಿಕ ಸ್ಥಳಗಳಲ್ಲಿ ಟಾಟಾ ಗ್ರೂಪ್ ತನ್ನ ಛಾಪು ಮೂಡಿಸುವುದನ್ನು ಮುಂದುವರಿಸಿದೆ. ಈ ಎರಡೂ ಹೋಟೆಲ್‌ಗಳು ವಿವಾಂತ ಹಾಗೂ ಜಿಂಜರ್ ಬ್ರ್ಯಾಂಡ್‌ನ ಅಡಿಯಲ್ಲಿ ನಿರ್ಮಾಣವಾಗಲಿದ್ದು, ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿಲೋಮೀಟರ್ ಅಂತರದಲ್ಲಿ ಇರಲಿದೆ. 2024ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ವಿದ್ಯುಕ್ತವಾಗಿ ಅನಾವರಣಗೊಳ್ಳಲಿದೆ. ಇದರ ನಡುವೆ ಈ ಬೆಳವಣಿಗೆ ನಡೆದಿದೆ.
ಅಂದಾಜು ಐದು ಎಕರೆಗಳ ವಿಸ್ತೀರ್ಣದಲ್ಲಿ ಈ ಹೋಟೆಲ್‌ಗಳ ಸಂಕಿರ್ಣ ಇರಲಿದೆ. ತಾಜ್ ವಿವಾಂತ ಹೋಟೆಲ್ 100 ರೂಮ್‌ಗಳನ್ನು ಹೊಂದಿದ್ದರೆ, ಜಿಂಜರ್ 120 ಕೋಣೆಗಳನ್ನು ಹೊಂದಿರಲಿದೆ. ಅದಲ್ಲದೆ, ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಲೀಸಾಗಿ ಹೋಗುವಷ್ಟು ವ್ಯವಸ್ಥೆಯನ್ನೂ ಕೂಡ ಇದರಲ್ಲಿ ಇರಲಿದೆ. ಉತ್ತರ ಪ್ರದೇಶದ ಲಖನೌ ಮತ್ತು ವಾರಣಾಸಿ ಟ್ರಾವೆಲ್ ಸರ್ಕ್ಯೂಟ್‌ಅನ್ನು ಪೂರ್ತಿ ಮಾಡುವ ಗುರಿಯನ್ನೂ ಹೊಂದಿದೆ
ಭಾರತದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ನಮ್ಮ ಉಪಸ್ಥಿತಿ ಇರಬೇಕು ಎನ್ನುವ ಐಎಚ್‌ಸಿಎಲ್‌ನ ಗುರಿಯನ್ನು ಬಲಪಡಿಸುವ ಉದ್ದೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಐಎಚ್‌ಸಿಎಲ್‌ನ ರಿಯಲ್ ಎಸ್ಟೇಡ್ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಉಪಾಧ್ಯಕ್ಷೆ ಸುಮಾ ವೆಂಕಟೇಶ್ ಹೇಳಿದ್ದಾರೆ. ಅಯೋಧ್ಯೆ ಭಾರತೀಯರ ಪಾಲಿಗೆ ಪ್ರಸಿದ್ಧ ತೀರ್ಥಕ್ಷೇತ್ರವಾಗಲಿದೆ. ಭವಿಷ್ಯದ ದಿನಗಳಲ್ಲಿ ದೊಡ್ಡ ಸಂಖ್ಯೆಯ ಭಕ್ತಾದಿಗಳನ್ನು ಇಲ್ಲಿಗೆ ಆಗಮಿಸಿದ್ದಾರೆ.ಈ ಎರಡು ಹೋಟೆಲ್‌ಗಳಿಗೆ ಭಾರದ್ವಾಜ್ ಗ್ಲೋಬಲ್ ಇನ್‌ಫ್ರಾವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗಿನ ಪಾಲುದಾರಿಕೆಯು ಐಎವ್‌ಸಿಎಲ್‌ನ ವಿಸ್ತರಣಾ ಯೋಜನೆಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.
ದೇಶದ ವಂದೇ ಭಾರತ್ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!
"ಅಯೋಧ್ಯೆಯು ಈಗಾಗಲೇ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ ಮತ್ತು ವರ್ಷವಿಡೀ ಅತಿ ಹೆಚ್ಚು ಭಕ್ತಾದಿಗಳನ್ನು ಸೆಳೆಯುತ್ತಿದೆ. ಈ ಹೋಟೆಲ್‌ಗಳು ಉತ್ತರ ಪ್ರದೇಶದ ಲಕ್ನೋ ಮತ್ತು ವಾರಣಾಸಿಯೊಂದಿಗೆ ಟ್ರಾವೆಲ್ ಸರ್ಕ್ಯೂಟ್ ಅನ್ನು ಪೂರ್ಣಗೊಳಿಸುತ್ತವೆ. ಈ ಎರಡು ಹೋಟೆಲ್‌ಗಳಿಗಾಗಿ ಭಾರದ್ವಾಜ್ ಗ್ಲೋಬಲ್ ಇನ್‌ಫ್ರಾವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ, ”ಎಂದು ಸುಮಾ ವೆಂಕಟೇಶ್ ಹೇಳಿದ್ದಾರೆ.
ಬಿಸ್ಲೆರಿಯನ್ನು ಮಾರಿ, ಮಗಳಿಗೆ ಅವಳಾಸೆಯಂತೆ ಬದುಕಲು ಬಿಟ್ಟ ರಮೇಶ್ ಚೌಹಾಣ್!
ಉತ್ತರ ಪ್ರದೇಶದ ಸರಯು ನದಿಯ ದಂಡೆಯಲ್ಲಿರುವ ಅಯೋಧ್ಯೆ ನಗರವು, ಭಗವಾನ್ ಶ್ರೀರಾಮನ ಜನ್ಮಸ್ಥಳ. ಹಿಂದು ಧರ್ಮದಲ್ಲಿ ಅತ್ಯಂತ ಪೂಜ್ಯ ದೇವತೆಗಳಲ್ಲಿ ಶ್ರೀರಾಮ ಕೂಡ ಒಬ್ಬ. ಪುರಾತನ ದೇವಸ್ಥಾನಗಳಿಗೆ ಈ ನಗರ ಹೆಸರುವಾಸಿಯಾಗಿದ್ದು, ಜನಪ್ರಿಯ ಯಾತ್ರಾಸ್ಥಳ ಎನಿಸಿದೆ. ಈ ಹೋಟೆಲ್‌ಗಳ ಸೇರ್ಪಡೆಯೊಂದಿಗೆ ಐಎಚ್‌ಸಿಎಲ್ ತನ್ನ ತಾಜ್, ಸೆಲ್ಟೆಕ್ಯೂನ್ಸ್, ವಿವಾಂತ ಹಾಗೂ ಜಿಂಡರ್ ಬ್ರ್ಯಾಂಡ್‌ನಲ್ಲಿ ಉತ್ತರ ಪ್ರದೇಶದಲ್ಲಿಯೇ 19 ಹೋಟೆಲ್‌ಗಳನ್ನು ಹೊಂದಿದಂತಾಗಲಿದೆ. ಇದರಲ್ಲಿ 9 ಇನ್ನೂ ನಿರ್ಮಾಣ ಹಂತದಲ್ಲಿದೆ.