ಕೋವಿಡ್‌ಗೆ ಬಲಿಯಾದವರಿಗೆ 50,000 ರು. ಪರಿಹಾರ: ದಾಖಲೆ ಸಲ್ಲಿಸಿದ 30 ದಿನಗಳಲ್ಲಿ ಹಣ!

By Suvarna NewsFirst Published Sep 23, 2021, 7:49 AM IST
Highlights

* ಎನ್‌ಡಿಎಂಎದಿಂದ ಶಿಫಾರಸು: ಸುಪ್ರೀಂಗೆ ಕೇಂದ್ರದ ಮಾಹಿತಿ

* ಕೋವಿಡ್‌ಗೆ ಬಲಿಯಾದವರಿಗೆ 50000 ರು. ಪರಿಹಾರ

* ಅಗತ್ಯ ದಾಖಲೆ ಸಲ್ಲಿಸಿದ 30 ದಿನಗಳಲ್ಲಿ ಡಿಬಿಟಿ ಮೂಲಕ ಹಣ

ನವದೆಹಲಿ(ಸೆ.23): ಕೊರೋನಾ ವೈರಸ್‌ಗೆ(Coronavirus) ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ 50 ಸಾವಿರ ರು. ಪರಿಹಾರ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA) ಶಿಫಾರಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ(Supreme Court) ಮಾಹಿತಿ ನೀಡಿದೆ.

ಈ ಸಂಬಂಧ ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸರ್ಕಾರ, ‘ಕೊರೋನಾಕ್ಕೆ ಬಲಿಯಾದವರ ಜೊತೆಗೆ, ಕೊರೋನಾ(Covid19) ಹೋರಾಟದಲ್ಲಿ ಸಕ್ರಿಯರಾಗಿ ಇದೇ ವೈರಸ್‌ಗೆ ಬಲಿಯಾದವರಿಗೂ ತಲಾ 50000 ರು. ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ. ಈ ಪರಿಹಾರ ಮೊದಲು ಮತ್ತು 2ನೇ ಅಲೆಯಲ್ಲಿ ಮಡಿದವರಿಗೆ ಮಾತ್ರವಲ್ಲ. ಮುಂದಿನ ದಿನಗಳಲ್ಲೂ ಕೋವಿಡ್‌ಗೆ ಬಲಿಯಾದವರಿಗೂ ಅನ್ವಯವಾಗಲಿದೆ’ ಎಂದು ತಿಳಿಸಿದೆ.

‘ಕೋವಿಡ್‌ಗೆ ಬಲಿಯಾಗಿದ್ದನ್ನು ಖಚಿತಪಡಿಸಲು ಇತ್ತೀಚೆಗೆ ಹೊರಡಿಸಲಾದ ಮಾರ್ಗಸೂಚಿಗಳ ಅನ್ವಯ ಈ ಪರಿಹಾರ ನೀಡಲಾಗುವುದು. ಸಂತ್ರಸ್ತರ ಕುಟುಂಬಗಳು ಅಗತ್ಯ ದಾಖಲೆ ಸಲ್ಲಿಸಿದ 30 ದಿನಗಳಲ್ಲಿ ಅವರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಯೋಜನೆ ಮೂಲಕ ಹಣ ಜಮೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿಯೇ ಅರ್ಜಿ ಸ್ವೀಕೃತಿ ಮತ್ತು ಹಣ ಜಮೆ ನಡೆಯಲಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಗಳೇ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ಕೊರೋನಾಕ್ಕೆ ಬಲಿಯಾದವರಿಗೆ ತಲಾ 4 ಲಕ್ಷ ರು. ಪರಿಹಾರ ನೀಡಬೇಕು ಎಂದು ಕೋರಿ ಹಲವು ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ತಲಾ 4 ಲಕ್ಷ ರು. ಹಣ ನೀಡಲು ಸಾಧ್ಯವಾಗದು. ಅಷ್ಟುಪ್ರಮಾಣದಲ್ಲಿ ಹಣ ನೀಡಿದರೆ ರಾಜ್ಯ ವಿಪತ್ತು ಪ್ರಾಧಿಕಾರಗಳಲ್ಲಿ ಕೋವಿಡ್‌ ನಿರ್ವಹಣೆಗೆ ಹಣವೇ ಉಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈ ಹಿನ್ನೆಲೆಯಲ್ಲಿ, ವೈರಸ್‌ಗೆ ಬಲಿಯಾದವರ ಕುಟುಬಗಳಿಗೆ ಪರಿಹಾರ ನೀಡುವ ಸಂಬಂಧ 6 ವಾರಗಳಲ್ಲಿ ಮಾರ್ಗಸೂಚಿಗಳನ್ನು ಶಿಫಾರಸು ಮಾಡುವಂತೆ ಜೂ.30ರಂದು ಎನ್‌ಡಿಎಂಎಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

click me!