
ನವದೆಹಲಿ (ಮೇ.12): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಲು ತಮ್ಮ ಬಿಜು ಜನತಾ ದಳವು ವಿರೋಧ ಪಕ್ಷಗಳ 'ತೃತೀಯ ರಂಗ'ವನ್ನು ಸೇರುವ ಮಾತನ್ನು ಗುರುವಾರ ತಳ್ಳಿಹಾಕಿದ್ದಾರೆ. ನನ್ನ ಮಟ್ಟಿಗೆ ತೃತೀಯ ರಂಗದ ಸಾಧ್ಯತೆ ಸದ್ಯದ ಮಟ್ಟಿಗೆ ಕಾಣುತ್ತಿಲ್ಲ ಎಂದು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಹೇಳಿದ್ದಾರೆ. ತೃತೀಯ ರಂಗ ಸೇರುವ ಕುರಿತಾದ ನೇರವಾದ ಪ್ರಶ್ನೆಗೆ, ಈಗ ಬೇಡ ಎಂದಷ್ಟೇ ಹೇಳಿದರು. ಬಿಜೆಪಿಯನ್ನು ಸೇರದೇ ಇದ್ದರೂ, ಲೋಕಸಭೆಯ ಹಾಗೂ ರಾಜ್ಯ ಸಭೆಯಲ್ಲಿ ಹಲವು ಬಾರಿ ಬಿಜೆಪಿಗೆ ಬೆಂಬಲ ನೀಡಿರುವ ಬಿಜೆಡಿಯು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆಯೇ ಎನ್ನುವ ಪ್ರಶ್ನೆಗೆ, ಹಿಂದೆಯೂ ಅದೇ ರೀತಿಯೇ ಆಗಿತ್ತಲ್ಲವೇ ಎಂದು ಹೇಳಿದರು. ಆ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಡಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದರು. ಒಡಿಶಾಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಮೋದಿ ಅವರನ್ನು ಭೇಟಿಯಾಗಿರುವುದಾಗಿ ಪಟ್ನಾಯಕ್ ಹೇಳಿದ್ದಾರೆ.
"ನಾವು ಪುರಿಯಲ್ಲಿ ಸ್ಥಾಪಿಸಬೇಕಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಮಾತನಾಡಿದ್ದೇನೆ. ಭುವನೇಶ್ವರದಲ್ಲಿ ಈಗ ಸಾಕಷ್ಟು (ವಾಯು) ಸಂಚಾರವಿದೆ, ಆದ್ದರಿಂದ ನಾವು ವಿಸ್ತರಣೆಯನ್ನು ಬಯಸುತ್ತೇವೆ" ಎಂದು ಮುಖ್ಯಮಂತ್ರಿ ವಿವರಿಸಿದರು. "ಪ್ರಧಾನಿ ಅವರು ಖಂಡಿತವಾಗಿಯೂ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ" ಎಂದು ಪಟ್ನಾಯಕ್ ಹೇಳಿದರು.
ಕಳೆದ ವಾರಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಉಪನಾಯಕ ತೇಜಸ್ವಿ ಯಾದವ್ ಅವರು ಉನ್ನತ ಮಟ್ಟದ ಭೇಟಿಗಳಲ್ಲಿ 'ತೃತೀಯ ರಂಗ'ದ ಚರ್ಚೆ ಬೆಳೆದಿದೆ. ಪಟ್ನಾಯಕ್ ಮತ್ತು ನಿತೀಶ್ ಮಂಗಳವಾರ ಭೇಟಿಯಾದರು ಆದರೆ ಇಬ್ಬರೂ ಸಭೆಯಲ್ಲಿ ಹೆಚ್ಚಿನದೇನೂ ಮಾತನಾಡಿಲ್ಲ. ಬಿಹಾರ ಸಿಎಂ ಜೊತೆಗಿನ ಸೌಜನ್ಯದ ಭೇಟಿ ಎಂದಷ್ಟೇ ನವೀನ್ ಪಟ್ನಾಯಕ್ ಈ ಭೇಟಿಯ ಬಗ್ಗೆ ಹೇಳಿದ್ದಾರೆ.
2008ರ ಜೈಪುರ ಸ್ಫೋಟದ ಆರೋಪಿಗಳ ಬಿಟ್ಟಿದ್ದೇಕೆ: ರಾಜಸ್ತಾನ ಸರ್ಕಾರಕ್ಕೆ ಮೋದಿ ಪ್ರಶ್ನೆ
ನಿತೀಶ್ ಕುಮಾರ್ ಈಗಾಗಲೇ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಕೇಜ್ರಿವಾಲ್ ಕಳೆದ ತಿಂಗಳು ತೃತೀಯ ರಂಗಕ್ಕೆ ಜನರ ಏಕತೆಯೇ ಹೆಚ್ಚು ಮುಖ್ಯ ಎಂದಿದ್ದರು. ಬಿಹಾರ ಮುಖ್ಯಮಂತ್ರಿ ಬಂಗಾಳದ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ, ಅವರು ಕಳೆದ ತಿಂಗಳು ಪಟ್ನಾಯಕ್ ಅವರನ್ನು ಭೇಟಿಯಾಗಿ ಪ್ರಾದೇಶಿಕ ಪಕ್ಷಗಳ ಬಲವನ್ನು ಒತ್ತಿಹೇಳಿದ್ದರು.
ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ : ಜೂ. 22ಕ್ಕೆ ಅಧ್ಯಕ್ಷ ಬೈಡೆನ್‌ನಿಂದ ಔತಣ ಕೂಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ