ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇಂದು ಸೋನಿಯಾ ವಿಚಾರಣೆ

Published : Jul 21, 2022, 10:03 AM IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇಂದು ಸೋನಿಯಾ ವಿಚಾರಣೆ

ಸಾರಾಂಶ

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸಲಿದೆ. 

ನವದೆಹಲಿ (ಜು.21): ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸಲಿದೆ. ಆದರೆ ಇದು ದ್ವೇಷ ರಾಜಕಾರಣ ಎಂದು ಆರೋಪಿಸಿ ಇ.ಡಿ. ವಿರುದ್ಧ ದಿಲ್ಲಿ ಹಾಗೂ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ.

ಸೋನಿಯಾ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಕಾರಣ ಈ ಹಿಂದೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಜೂನ್‌ನಲ್ಲಿ ಮಧ್ಯಭಾಗದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಅನಾರೋಗ್ಯ ಕಾರಣದಿಂದ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಹಾಗಾಗಿ ಜೂ.21ರಂದು ವಿಚಾರಣೆಗೆ ಹಾಜರಾಗುವಂತೆ ಕಳೆದ ವಾರ ಇ.ಡಿ. ಸಮನ್ಸ್‌ ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನೂ ಇ.ಡಿ. ಹಲವು ದಿನಗಳ ಕಾಲ ಸತತ ವಿಚಾರಣೆ ನಡೆಸಿತ್ತು. ಈ ವಿಚಾರಣೆಯ ಸಮಯದಲ್ಲೂ ಕಾಂಗ್ರೆಸ್‌ ಜಾರಿ ನಿರ್ದೇಶನಾಲಯದ ವಿರುದ್ಧ ಪ್ರತಿಭಟನೆ ನಡೆಸಿತ್ತು.

ಗುಜರಾತ್‌ ಗಲಭೆ: ತೀಸ್ತಾಗೆ ಹಣ ಬೇಕಾ ಎಂದು ಕೇಳಿದ್ದರಂತೆ ಸೋನಿಯಾ!

ಸೋನಿಯಾ ಮೇಲೆ ಏನು ಆರೋಪ?: ಕಾಂಗ್ರೆಸ್‌ ಪಕ್ಷದ ಮುಖವಾಣಿಯಾಗಿರುವ ದಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ಎಂಬ ಸಂಸ್ಥೆ ಪ್ರಕಟಿಸುತ್ತದೆ. ಈ ಸಂಸ್ಥೆಯ ಮಾಲೀಕತ್ವವನ್ನು ಯಂಗ್‌ ಇಂಡಿಯನ್‌ ಪ್ರೈ.ಲಿ. ಹೊಂದಿದೆ. ಯಂಗ್‌ ಇಂಡಿಯನ್‌ ಕಂಪನಿಯ ಮಾಲಿಕತ್ವ ಕಾಂಗ್ರೆಸ್‌ ಪಕ್ಷದ ಬಳಿಯಿದೆ. ಈ ಸಂಸ್ಥೆಗಳ ನಡುವೆ ನಡೆದ 90 ಕೋಟಿ ರು. ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಹಾಗೂ 2000 ಕೋಟಿ ರು. ಮೌಲ್ಯದ ನ್ಯಾಷನಲ್‌ ಹೆರಾಲ್ಡ್‌ನ ಕೆಲ ಆಸ್ತಿ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಸಂಬಂಧ ಇ.ಡಿ. ಕಳೆದ ವರ್ಷ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇಂದು ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ: ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್‌ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷ ಗುರುವಾರ (ಜು.21) ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್‌ ಬಂದೋ ಬಸ್‌್ತ ಏರ್ಪಡಿಸಲಾಗುತ್ತಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ 5 ಎಸಿಪಿ, 15 ಇನ್‌ಸ್ಪೆಕ್ಟರ್‌, 30 ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಐ, ಹೆಡ್‌ ಕಾನ್‌ಸ್ಟೇಬಲ್‌, ಕಾನ್‌ಸ್ಟೇಬಲ್‌ ಸೇರಿ 600 ಮಂದಿ ಸಿಬ್ಬಂದಿ ಹಾಗೂ 5 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ತಿಳಿಸಿದ್ದಾರೆ.

ರಾಜಭವನ ಮುತ್ತಿಗೆ: ಕೇಂದ್ರ ಸರ್ಕಾರವು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ನೆಪದಲ್ಲಿ ಜಾರಿ ನಿರ್ದೇಶನಾಲಯದ ಮೂಲಕ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್‌ ವತಿಯಿಂದ ಇಂದು (ಜು.21) ‘ರಾಜಭವನ ಮುತ್ತಿಗೆ’ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಿಂದ ರಾಜಭವನದವರೆಗೆ ಬೃಹತ್‌ ‘ರಾಜಭವನ ಚಲೋ’ ಪ್ರತಿಭಟನಾ ಜಾಥ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸಾವಿರಾರು ಮಂದಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಲಿದ್ದಾರೆ. 

ಜು.21ಕ್ಕೆ ಸೋನಿಯಾ ಪರ ಕಾಂಗ್ರೆಸ್‌ ಹೋರಾಟ: ಡಿ.ಕೆ. ಶಿವಕುಮಾರ್‌

ರಾಜಭವನ ಮುತ್ತಿಗೆ ಹಾಕಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಿರುಕುಳ ನೀಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಹುಲ್‌ಗಾಂಧಿ ಅವರುನ್ನು 50 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಇದೀಗ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೆ ಇಡಿ ಮೂಲಕ ಕಿರುಕುಳ ನೀಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದರ ವಿರುದ್ಧ ಹೊರಾಟ ನಡೆಸುವ ಮೂಲಕ ಸೋನಿಯಾಗಾಂಧಿ ಅವರಿಗೆ ಧೈರ್ಯ ತುಂಬಲಾಗುವುದು. ರಾಜ್ಯ ಮಟ್ಟದ ಹೋರಾಟ ಮುಗಿದ ಬಳಿಕ ಜು.22 ರಂದು ಜಿಲ್ಲಾ ಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!