ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!

By Santosh NaikFirst Published Jun 1, 2022, 4:55 PM IST
Highlights

ನ್ಯಾಷನಲ್ ಹೆರಾಲ್ಡ್ ಕೇಸ್, ಕಾಂಗ್ರೆಸ್ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡಿರುವ ಪ್ರಕರಣ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ಮೊದಲ ಬಾರಿಗೆ 2012 ರಲ್ಲಿ ಬೆಳಕಿಗೆ ಬಂದಿತ್ತು. ಕೆಲವು ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಮೂಲಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ತಪ್ಪಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.
 

ನವದೆಹಲಿ (ಜೂನ್ 1): ನ್ಯಾಷನಲ್ ಹೆರಾಲ್ಡ್ ಪ್ರಕರಣ ಎಂದಾಗ (National Herald Case) ಕಾಂಗ್ರೆಸ್ ಪಕ್ಷದ (Congress) ಹೆಸರೂ ಅದರೊಂದಿಗೆ ಸೇರಿಕೊಂಡು ಬಿಡುತ್ತದೆ. 2012ರಲ್ಲಿ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದ್ದ ಈ ಪ್ರಕರಣದ ಇತಿಹಾಸವೇನು? ಅಷ್ಟಕ್ಕೂ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಅವರ ಪಾತ್ರವೇನು. ಎನ್ನುವುದರ ವಿವರ ಇಲ್ಲಿದೆ.

ಮಾಜಿ ಪ್ರಧಾನಿ ಜವಹರಲಾಲ್ ನೆಹರು (jawaharlal nehru) ಸ್ಥಾಪನೆ ಮಾಡಿದ್ದ ಪತ್ರಿಕೆ: ಜವಾಹರಲಾಲ್ ನೆಹರು ಮತ್ತು ಇತರೆ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ (National Herald) ಪತ್ರಿಕೆಯನ್ನು ಹುಟ್ಟುಹಾಕಿದ್ದರು. ದೇಶದ ಸ್ವಾತಂತ್ರ್ಯ ಚಳುವಳಿಗೆ ಬೆನ್ನೆಲುಬಾಗಿ ನಿಲ್ಲುವುದು ಈ ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (Associated Journals Limited) (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಲುವು, ಅಭಿಪ್ರಾಯಗಳನ್ನು ಇದರಲ್ಲಿ ಪ್ರಕಟ ಮಾಡಲಾಗುತ್ತಿತ್ತು. 1938ರ ಸೆಪ್ಟೆಂಬರ್ 9 ರಂದು ಲಖನೌದಲ್ಲಿ ಇಂಗ್ಲೀಷ್ ಭಾಷೆಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣೆ ಆರಂಭವಾಗಿತ್ತು. ಬಳಿಕ ಹಿಂದಿ ಭಾಷೆಯ ನವಜೀವನ್ ಮತ್ತು ಉರ್ದು ಭಾಷೆಯ ಕ್ವಾಮಿ ಆವಾಜ್ ಪತ್ರಿಕೆಯನ್ನೂ ಆರಂಭ ಮಾಡಿತ್ತು. ಈ ಮೂರೂ ಪತ್ರಿಕೆಗಳ ಒಡೆತನ ಎಜಿಎಲ್ ಹೆಸರಲ್ಲಿತ್ತು.

ನೆಹರು ಅವರು ಕಟ್ಟಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL), 1937ರಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿ ನಿರ್ಮಾಣ ಮಾಡಿದ್ದ ಕಂಪನಿ. ಈ ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರುವುದಿಲ್ಲ. 2010ರ ವೇಳೆಗ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು.

ನೆಹರು ಅವರು ಪ್ರಧಾನಿಯಾಗಿದ್ದಾಗ ಎಜಿಎಲ್ ಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿತ್ತು. ಪ್ರಧಾನಿಯ ಅಧಿಕಾರ ಬಳಸಿಕೊಂಡು ದೇಶದ ವಿವಿದೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು.  ಎಜಿಎಲ್ ಆರ್ಥಿಕ ಸಂಕಷ್ಟದಲ್ಲಿದ್ದರೂ, ಈ ಕಂಪನಿ ಹೊಂದಿದ್ದ ಆಸ್ತಿಯ ಮೌಲ್ಯ  ಅಂದಾಜು 2 ರಿಂದ 5 ಸಾವಿರ ಕೋಟಿ ಎಂದು ಹೇಳಲಾಗಿದೆ.

2008ರ ವರೆಗೂ ಎಜಿಎಲ್ ಈ ಮೂರೂ ಪತ್ರಿಕೆಗಳನ್ನು ಪ್ರಕಟ ಮಾಡುತ್ತಿತ್ತು. ಅದಕ್ಕೂ ಮುನ್ನ 2007ರ ಏಪ್ರಿಲ್ 1 ರಂದು ತಾತ್ಕಾಲಿಕವಾಗಿ ಪ್ರಕಟಣೆಯನ್ನೂ ಸ್ಥಗಿತ ಮಾಡಿತ್ತು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿಫಲ, ಜಾಹೀರಾತು ಆದಾಯದ ಕೊರತೆಯಿಂದಾಗಿ 2008ರಲ್ಲಿ ಎಜಿಎಲ್ ಅನ್ನು ಮುಚ್ಚಲಾಗಿತ್ತು. ಬಳಿಕ 2016ರ ಜನವರಿ 21 ರಿಂದ ಮತ್ತೊಮ್ಮೆ ಮುದ್ರಣ ಆರಂಭವಾಗಿದೆ.

ಯಾವುದಿದು ಯಂಗ್ ಇಂಡಿಯಾ ಲಿಮಿಟೆಡ್‌: ಯಂಗ್ ಇಂಡಿಯಾ ಲಿಮಿಟೆಡ್ ( young india ltd) ಅಥವಾ ವೈಐಎಲ್ (YIL) ಎಂದು ಕರೆಯಲ್ಪಡುವ ಈ ಕಂಪನಿಯನ್ನು 2010ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಸ್ಥಾಪನೆ ಮಾಡಿದ್ದಲ್ಲದೆ, ಅದರ ನಿರ್ದೇಶಕರೂ ಆಗಿದ್ದರು.  ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಕಂಪೆನಿಯ ತಲಾ ಶೇ. 38ರಷ್ಟು ಷೇರುಗಳನ್ನು ಹೊಂದಿದ್ದಾರೆ. ಉಳಿದ ಶೇ 24ರಷ್ಟು ಷೇರುಗಳು ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಹೆಸರಲ್ಲಿದೆ. ಯಾವುದೇ ವಾಣಿಜ್ಯಾತ್ಮಕ ವ್ಯವಹಾರದಲ್ಲಿ ತಾನು ಭಾಗಿಯಾಗಿಲ್ಲ ಎಂದು ಕಂಪನಿ ಹೇಳುತ್ತದೆ.

ನಷ್ಟದಲ್ಲಿದ್ದ ಎಜಿಎಲ್ ಅನ್ನು90.21 ಕೋಟಿ ರೂಪಾಯಿಗೆ ಯಂಗ್ ಇಂಡಿಯಾ ಲಿಮಿಟೆಡ್ ಖರೀದಿ ಮಾಡಿತ್ತು. ಇದರಲ್ಲಿ 50 ಲಕ್ಷ ಮೊತ್ತವನ್ನು ಕಾಂಗ್ರೆಸ್ ಪಕ್ಷವು ತನ್ನ ಖಜಾನೆಯಿಂದಲೇ ನೀಡಿದ್ದರೆ, ಎಜಿಎಲ್ ಒಡೆತನದಲ್ಲಿದ್ದ ದೆಹಲಿಯ 5ಎ ಬಹುದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್ ನವೀಕರಣಕ್ಕೆ ಒಂದು ಕೋಟಿ ರೂ. ಸಾಲವನ್ನು ವೈಐಎಲ್ ನೀಡುತ್ತದೆ.

ಸುಬ್ರಮಣಿಯನ್ ಸ್ವಾಮಿ ಆರೋಪವೇನು?: ಕಾಂಗ್ರೆಸ್ ಪಕ್ಷ ಹಾಗೂ ಅದರ ಕಾರ್ಯಕರ್ತರ ಮಾಲೀಕತ್ವದಲ್ಲೇ ಇದ್ದ ಎಜಿಎಲ್ ಗೆ ಇದ್ದ 90.21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ವೈಇಎಲ್ ಮೂಲಕ ಕೇವಲ 50 ಲಕ್ಷ ರೂಪಾಯಿ ಪಾವತಿ ಮಾಡಲಾಗಿತ್ತು. ಎಜೆಎಲ್ ಗೆ ನೀಡಿದ ಈ ಹಣ ಅಕ್ರಮ. ಏಕೆಂದರೆ ಇದನ್ನು ಪಕ್ಷದ ನಿಧಿಯಿಂದ ಬಳಸಿಕೊಳ್ಳಲಾಗಿದೆ. ಅದಲ್ಲದೆ ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2,000 ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ತೀರ್ಪು ಕಾಯ್ದಿರಿಸಿದ ಪಟಿಯಾಲಾ ಹೌಸ್

ಎಜಿಎಲ್ ಷೇರುದಾರರು ಏನ್ ಹೇಳ್ತಾರೆ?:
ಮದ್ರಾಸ್ ಹೈಕೋರ್ಟ್‌ನ ನಿವೃತ್ತ ಸಿಜೆಐ ಮಾರ್ಕಂಡೇಯ ಕಟ್ಜು, ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಸೇರಿದಂತೆ ಇನ್ನೂ ಹಲವರು ಎಜಿಎಲ್ ನ ಷೇರುದಾರರು. ಯಂಗ್ ಇಂಡಿಯಾ ಲಿಮಿಟೆಡ್, ಎಜಿಎಲ್ ಅನ್ನು ಸ್ವಾಧೀನ ಮಾಡಿಕೊಂಡ ವೇಳೆ ಯಾವುದೇ ನೋಟಿಸ್ ನೀಡಿರಲಿಲ್ಲ. ನಮ್ಮ ತಂದೆಯವರ ಷೇರುಗಳು ಕಂಪನಿಯಲ್ಲಿತ್ತು ಎಂದು ಹೇಳಿದ್ದಾರೆ. ಈ ವರ್ಗಾವಣೆ 2010ರಲ್ಲಿ ನಮಗೆ ಗೊತ್ತಿಲ್ಲದಂತೆ ನಡೆದಿತ್ತು ಎಂದಿದ್ದರು.

National Herald case: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್!

ಯಾರೆಲ್ಲಾ ಆರೋಪಿಗಳು:
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋನಿಯಾ ಗಾಂಧಿ ಪುತ್ರ ಹಾಗೂ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಮೋತಿಲಾಲ್ ವೋರಾ (ಇವರಿಬ್ಬರೂ ಈಗಿಲ್ಲ), ಪತ್ರಕರ್ತ ಸುಮನ್ ದುಬೆ, ಸ್ಯಾಮ್ ಪಿತ್ರೊಡಾ ಮತ್ತು ಯಂಗ್ ಇಂಡಿಯಾ ಲಿಮಿಟೆಡ್.

click me!