ಡಾ. ಬಿಸಿ ರಾಯ್‌ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ!

By Kannadaprabha News  |  First Published Jul 1, 2021, 9:00 AM IST

* ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಈ ವರ್ಷ ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ

* ವೈದ್ಯರು ಮುಂದೆ ನಿಂತುಕೊಂಡು ಕೊರೋನಾ ವೈರಸ್ಸಿಗೆ ಎದೆಯೊಡ್ಡಿದರು

* ಬಿಸಿ ರಾಯ್‌ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ


ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಈ ವರ್ಷ ಮತ್ತಷ್ಟುಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ. ಅದಕ್ಕೆ ಕಾರಣ ಕಣ್ಣ ಮುಂದೆ ಇದೆ. ಕೋವಿಡ್‌ 19 ಕಾರಣದಿಂದ ಇಡೀ ಜಗತ್ತು ಒದ್ದಾಡುತ್ತಿರುವ ವೇಳೆಯಲ್ಲಿ ಎಲ್ಲರ ಪಾಲಿಗೂ ಒದಗಿ ಬಂದಿದ್ದು ವೈದ್ಯರೇ. ವೈದ್ಯರು ಮುಂದೆ ನಿಂತುಕೊಂಡು ಕೊರೋನಾ ವೈರಸ್ಸಿಗೆ ಎದೆಯೊಡ್ಡಿದರು. ಹಾಗಾಗಿ ಇಡೀ ವೈದ್ಯ ಸಮೂಹಕ್ಕೆ ಇಡೀ ಸಮಾಜ ಕೃತಜ್ಞರಾಗಿರಬೇಕು. ಈ ಜುಲೈ 1 ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ ದಿನದ ಸಾರ್ಥಕತೆ.

ನಮ್ಮ ದೇಶದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿದಾನ್‌ ಚಂದ್ರ ರಾಯ್‌ ಅವರ ನೆನಪಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು. ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕುತೂಹಲಕರ ವಿಚಾರವೆಂದರೆ ಅವರು ಜನಿಸಿದ್ದು 1882, ಜುಲೈ 1. ತೀರಿಕೊಂಡಿದ್ದು 1962 ಜುಲೈ 1. ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ. ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಭಾರತ ಸರ್ಕಾರ 1991ರಲ್ಲಿ ಜುಲೈ 1ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು.

Tap to resize

Latest Videos

ಈ ಡಾ.ಬಿಸಿ ರಾಯ್‌ ಅಪ್ರತಿಮ ವೈದ್ಯರಾಗಿದ್ದವರು. ತಮ್ಮ ದೂರದೃಷ್ಟಿನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪದ ಕೊಡುಗೆ ಕೊಟ್ಟವರು. ಮೇಲು ಕೀಳು ನೋಡದೆ, ಭೇದಭಾವ ಮಾಡದೆ ಎಲ್ಲರನ್ನೂ ಒಂದೇ ಥರ ನೋಡಿದ ಜನಮೆಚ್ಚಿದ ವೈದ್ಯರಾಗಿದ್ದ ಬಿಸಿ ರಾಯ್‌ ಹೊಸತನದ ಆಲೋಚನೆಗಳನ್ನು ಹೊಂದಿದ್ದರು. 1905ರಲ್ಲಿ ಅವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ಬಂಗಾಳ ವಿಭಜನೆಯಾಯಿತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ಬಿಸಿ ರಾಯ್‌ ಅವರು ಕೆಲ ಕಾಲ ಮಹಾತ್ಮ ಗಾಂಧೀಜಿಯ ವೈದ್ಯರೂ ಆಗಿದ್ದರು ನ್ನುವುದು ವಿಶೇಷ.

ಅವರು ವೈದ್ಯರಾಗಿದ್ದೂ ಅಲ್ಲದೆ ಆಡಳಿತದಲ್ಲೂ ಮುಂದೆ ನಿಂತು ಕೆಲಸ ಮಾಡಿದ್ದು ಅಚ್ಚರಿ ತರುವಂತದ್ದು. ಅನೇಕ ದೊಡ್ಡ ಆಸ್ಪತ್ರೆಗಳು ಅವರ ಕಾಲದಲ್ಲಿ ಸ್ಥಾಪನೆಯಾಗಿದೆ. ಸುಮಾರು 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರು ಆ ಸಮಯದಲ್ಲೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. ಆ ಕಾರಣಕ್ಕೆ ಜನರ ಒಲವು ಗಳಿಸಿದ್ದರು. ಇಂಥಾ ಮಹತ್ವದ ವೈದ್ಯರ ನೆನಪಿನಲ್ಲಿ ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ.

ಪ್ರಾಣದ ಹಂಗು ತೊರೆದು, ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡುವ ವೈದ್ಯರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿಯೇ ಈ ದಿನವನ್ನು ವೈದ್ಯರ ದಿನ ಎಂದು ಕರೆಯಲಾಗುತ್ತದೆ. ನಿಮ್ಮ ಸುತ್ತಮುತ್ತ ಇರುವ ವೈದ್ಯರಿಗೆ ನೀವು ಧನ್ಯವಾದ ಸಲ್ಲಿಸಿದರೆ ರಾಷ್ಟ್ರೀಯ ವೈದ್ಯರ ದಿನ ಅರ್ಥಪೂರ್ಣವಾಗಲಿದೆ.

click me!