3.6 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಭಾಗ್ಯ!

By Kannadaprabha NewsFirst Published Jul 1, 2021, 8:07 AM IST
Highlights

* 3.6 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌: ಸಂಪುಟ ಅಸ್ತು

* ಭಾರತ್‌ ನೆಟ್‌ ಯೋಜನೆಗೆ 19 ಸಾವಿರ ಕೋಟಿ ರು.

* ಕರ್ನಾಟಕ ಸೇರಿ 16 ರಾಜ್ಯಗಳ ಗ್ರಾಮಗಳಿಗೆ ಅಂತರ್ಜಾಲ

ನವದೆಹಲಿ(ಜು.01): ಕರ್ನಾಟಕ ಸೇರಿ 16 ರಾಜ್ಯಗಳ 3.6 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ಭಾರತ್‌ ನೆಟ್‌ ಯೋಜನೆಗೆ 19,041 ಕೋಟಿ ರು. ಮೊತ್ತದ ಕಾರ್ಯಸಾಧ್ಯತೆ ಅಂತರ ನಿಧಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌, 16 ರಾಜ್ಯಗಳ 3,61,000 ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸಲು 29,430 ಕೋಟಿ ರು.ವೆಚ್ಚವಾಗಲಿದೆ. ಇದರಲ್ಲಿ 19,041 ಕೋಟಿ ರು. ಕಾರ್ಯಸಾಧ್ಯತೆ ಅಂತರ ನಿಧಿಯೂ ಸೇರಿದೆ. ಈ ಮೊತ್ತವನ್ನು ಸರ್ಕಾರ ಭರಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಭಾರತ್‌ ನೆಟ್‌ ಯೋಜನೆಯನ್ನು ಜಾರಿ ಮಾಡಲಾಗುತ್ತಿದ್ದು, ಖಾಸಗಿ ಹೂಡಿಕೆದಾರರನ್ನೂ ಯೋಜನೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1000 ದಿನದಲ್ಲಿ 6 ಲಕ್ಷ ಹಳ್ಳಿಗಳಿಗೆ ಅಂತರ್ಜಾಲ ಒದಗಿಸುವ ಯೋಜನೆ ಪ್ರಕಟಿಸಿದ್ದರು. ಈವರೆಗೆ 2.5 ಲಕ್ಷ ಹಳ್ಳಿಗಳಿಗೆ ಅಂತರ್ಜಾಲ ಲಭಿಸಿದ್ದು, 3.6 ಲಕ್ಷ ಹಳ್ಳಿಗಳು ಬಾಕಿ ಇವೆ.

click me!