ನವದೆಹಲಿ: ಪಾರದರ್ಶಕತೆ ಹಾಗೂ ಸಾರ್ವಜನಿಕ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳುವುದರೊಂದಿಗೆ ವಿವಿಧ ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ಏಜೆನ್ಸಿಗಳ ಎಲ್ಲ ಪ್ರಶಸ್ತಿಗಳನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಪುರಸ್ಕಾರ’ ಪೋರ್ಟಲ್ (https://awards.gov.in/)ಅನ್ನು ಅಭಿವೃದ್ಧಿಪಡಿಸಿದೆ. ಸರ್ಕಾರದಿಂದ ನೀಡಲಾಗುವ ಎಲ್ಲ ಪ್ರಶಸ್ತಿಗಳಿಗಾಗಿ ಸಾರ್ವಜನಿಕರ ಅಥವಾ ಸಂಸ್ಥೆಯೊಂದನ್ನು ನಾಮನಿರ್ದೇಶನ ಮಾಡಲು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಅನ್ನು ಎಲ್ಲ ನಾಗರಿಕರಿಗೆ ಬಳಸಲು ಅವಕಾಶಗಳಿವೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.
ಈ ನಡುವೆ ಸರ್ಕಾರವು ಹಲವಾರು ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನದ ಅರ್ಜಿಗಳನ್ನು ಆಹ್ವಾನಿಸಿದ್ದು, ಪದ್ಮ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಸೆ. 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರಣ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿಸಲ್ಲಿಸಲು ಸೆ. 30 ಕೊನೆಯ ದಿನವಾಗಿದೆ. ಇದಲ್ಲದೇ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ 2022 ಹಾಗೂ ರಾಷ್ಟ್ರೀಯ ಜಲ ಪ್ರಶಸ್ತಿ 2022ರ ಅರ್ಜಿ ಸಲ್ಲಿಕೆಗೆ ಸೆ. 15 ಹಾಗೂ ನಾರಿ ಶಕ್ತಿ ಪುರಸ್ಕಾರ 2023ರ ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನವಾಗಿದೆ. ಆ. 31 ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ ಪುರಸ್ಕಾರ 2023ರ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಈ ಪೋರ್ಟಲ್‌ನಲ್ಲಿ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರ ಫೋಟೋ ಗ್ಯಾಲರಿ ಇದೆ. ಜೊತೆಗೆ ಒಂದು ಪ್ರಶಸ್ತಿಗೆ ಇದುವರೆಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ, ನಾಮಾಂಕಿತಗೊಂಡವರ ಸಂಖ್ಯೆ ಎಲ್ಲ ವಿವರಗಳು ಈ ಪೋರ್ಟಲ್‌ನಲ್ಲಿ ಲಭ್ಯವಿದೆ. ಅಲ್ಲದೇ ಆಯಾಯಾ ಪ್ರಶಸ್ತಿಗೆ ಬೇಕಾದ ಅರ್ಹತೆಗಳನ್ನು ಕೂಡ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ. ಯಾರು ಬೇಕಾದರೂ ಕೂಡ ಈ ಸೈಟ್‌ನಲ್ಲಿ ತಮ್ಮನ್ನು ದಾಖಲಿಕರಿಸಿಕೊಂಡು, ಅರ್ಹತೆಗೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವರ್ಷದಲ್ಲಿ ಮುಂದೆ ನೀಡಲಾಗುವ ಪ್ರಶಸ್ತಿಗಳ ವಿವರ ಹಾಗೂ ಅಪ್ಲಿಕೇಷನ್‌ಗಳು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಸಂಪೂರ್ಣ ವಿವರ ಈ ವೆಬ್‌ಸೈಟ್‌ನಲ್ಲಿದ್ದು, ಎಲ್ಲವನ್ನೂ ಆನ್‌ಲೈನ್‌ಗೊಳಿಸಲಾಗಿದೆ.
ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು/ಏಜೆನ್ಸಿಗಳು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದ ಜನರನ್ನು ಗುರುತಿಸಲು ಹಲವಾರು ನಾಗರಿಕ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಭಾರತ ಸರ್ಕಾರ ಸ್ಥಾಪಿಸಿದ ಈ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು/ಏಜೆನ್ಸಿಗಳ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿಯಲ್ಲಿ ತರುವ ಉದ್ದೇಶ ಹೊಂದಿದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕರ ಪಾಲುದಾರಿಕೆಯನ್ನು ಪ್ರತಿಬಿಂಬಿಸುವ ಒಂದು ಕ್ರಮ ಇದಾಗಿದೆ. ಈ ಪೋರ್ಟಲ್ ಸಾಮಾನ್ಯ ನಾಗರಿಕರಿಗೂ ತಮ್ಮ ಕ್ಷೇತ್ರಗಳಲ್ಲಿ ಅವರ ಅಸಾಧಾರಣ ಕೊಡುಗೆಗಳನ್ನು ಗುರುತಿಸಲು ಮತ್ತು ಪ್ರಶಸ್ತಿ ನೀಡಲು ಭಾರತ ಸರ್ಕಾರದಿಂದ ಸ್ಥಾಪಿಸಲಾದ ವಿವಿಧ ಪ್ರಶಸ್ತಿಗಳಿಗೆ ವ್ಯಕ್ತಿಗಳು/ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ಮಾಡಿ ಕೊಟ್ಟಿದೆ.
ಪಾರದರ್ಶಕತೆ
ಈ ಪೋರ್ಟಲ್‌ನೊಂದಿಗೆ, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಅರ್ಹತಾ ಮಾನದಂಡಗಳು, ಆಯ್ಕೆ ವಿಧಾನ ಮತ್ತು ಹಿಂದಿನ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ. ಅಲ್ಲದೆ, ಜನರು ಒಂದೇ ವೇದಿಕೆಯಲ್ಲಿ ವಿವಿಧ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಮಾಡಲು ಸಾಧ್ಯವಾಗುತ್ತದೆ, ಇದು ಸರಳ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಪೋರ್ಟಲ್ ಬಗ್ಗೆ ವಿವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ