ಚೀನಿ ಡ್ರ್ಯಾಗನ್ ಮೇಲೆ ಹದ್ದಿನ ಕಣ್ಣು; ಮೋದಿ 3.0 ರಕ್ಷಣಾ ನೀತಿಯ ಒಳಗೊಂದು ಸುತ್ತು!

By Suvarna NewsFirst Published Jun 8, 2024, 5:43 PM IST
Highlights

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ರಕ್ಷಣೆ ಸೇರಿ ಪ್ರಮುಖ ಖಾತೆಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ರಕ್ಷಣಾ ನೀತಿಗೆ ಚೀನಾ ಅಭಿಪ್ರಾಯ ಹೇಗಿದೆ? 

ಗಿರೀಶ್ ಲಿಂಗಣ್ಣ
(ಲೇಖಕರು: ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ತುಸು ನಿರಾಶರಾದಂತೆ ಕಂಡು ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾದ ಬಳಿಕ ಮತ್ತೆ ಚುರುಕಾಗಿದ್ದಾರೆ. NDA ಸಂಸದೀಯ ಸಭೆ ಬಳಿಕ ಸರ್ಕಾರ ರಚನೆಯ ಪ್ರಕ್ರಿಯೆಗೆ ವೇಗ ಬಂದಿದ್ದು, ಸರ್ಕಾರದ ನೀತಿ ನಿರೂಪಣೆಗಳ ಕುರಿತು ಇದೀಗ ಎಲ್ಲೆಡೆ ಚರ್ಚೆ ಆರಂಭವಾಗಿದೆ.

Latest Videos

ನಾಳೆ (ಭಾನುವಾರ ಜೂನ್ 9) ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿ ಮತ್ತು ಅವರ ಸಂಪುಟದ ಸಚಿವರಿಗೆ ಗೌಪ್ಯತಾ ವಿಧಿ ಬೋಧಿಸಲಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ NDA ಸರ್ಕಾರ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಪಡೆದುಕೊಳ್ಳಲಿದೆ.

ಆಂತರಿಕ ಆಡಳಿತ, ವಿದೇಶಾಂಗ ನೀತಿ ಮತ್ತು ಭದ್ರತೆಯಂತಹ ಪ್ರಮುಖ ವಿಷಯಗಳಲ್ಲಿ, ಮೋದಿ 3.0 ಸರ್ಕಾರದ ನೀತಿ ನಿರೂಪಣೆಗಳು ಹೇಗಿರಲಿವೆ ಎಂಬುದರ ಸ್ಪಷ್ಟ ಚಿತ್ರಣ ಇದುವರೆಗೂ ಸಿಕ್ಕಿಲ್ಲ. ಆದಾಗ್ಯೂ, ಈ ಹಿಂದಿನ ನೀತಿ ನಿರೂಪಣೆಗಳೇ ಮುಂದುವರೆಯಲಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 

ಆದರೆ ದೇಶದ ಮಿಲಿಟರಿ ಶಕ್ತಿ ಮತ್ತು ಅದರ ಪ್ರಭಾವವನ್ನು ಬಲಪಡಿಸುವ ಕುರಿತು ಪ್ರಧಾನಿ ಮೋದಿ ಆಡಿರುವ ಮಾತುಗಳು, ಭದ್ರತೆ ವಿಷಯದಲ್ಲಿ ರಾಜಿ ಇಲ್ಲದ ನೀತಿಯ ಮುನ್ಸೂಚನೆ ನೀಡಿವೆ. 'ರಕ್ಷಣಾ ಉತ್ಪಾದನೆ ಮತ್ತು ರಫ್ತು ಪ್ರಮಾಣ ಏರಿಕೆಯ ಗುರಿ ತಲುಪುಲು ನಮ್ಮ ಸರ್ಕಾರ ಆದ್ಯತೆ ನೀಡಲಿದೆ,' ಎಂಬ ಮೋದಿ ಅವರ ಹೇಳಿಕೆ ಇದಕ್ಕೆ ಪುಷ್ಠಿ ಒದಗಿಸುತ್ತದೆ.

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

ರಕ್ಷಣೆಗೆ ಮೋದಿ ಒತ್ತು:
ಚುನಾವಣಾ ಫಲಿತಾಂಶದ ನಂತರ ನರೇಂದ್ರ ಮೋದಿ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, 'ಶಸ್ತ್ರಾಸ್ತ್ರಗಳ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಪ್ರಮುಖ ಆದ್ಯತೆ,' ಎಂದು ಹೇಳಿದ್ದರು. 'ನಾವು ಸ್ವಾವಲಂಬಿ ರಕ್ಷಣಾ ವಲಯದ ಗುರಿಯನ್ನು ಹೊಂದಿದ್ದೇವೆ,' ಎಂಬ ಮೋದಿ ಮಾತು, ಅವರ ಮೂರನೇ ಅವಧಿಯ ಆಡಳಿತದ  ವೈಖರಿಗೆ ಹಿಡಿದ ಕನ್ನಡಿಯಂತಿತ್ತು.

ಮೋದಿ ಭಾಷಣ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಗಮನ ಸೆಳೆದಿದ್ದು, ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನಾದ ವಿಸ್ತರಣೆಯನ್ನು ತಡೆಗಟ್ಟುವಲ್ಲಿ ಭಾರತ ನಿರ್ವಹಿಸಲಿರುವ ಪಾತ್ರದ ಬಗ್ಗೆ ಹೆಚ್ಚಿನ ಭರವಸೆ ಮೂಡುವಂತಾಗಿದೆ. ಚೀನಾದ ಆಕ್ರಮಣಕಾರಿ ಕಡಲ ವಿಸ್ತರಣಾ ನೀತಿಗೆ ಪೆಟ್ಟು ನೀಡಲು, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಭಾರತದ ನೆರವು ಅತ್ಯಗತ್ಯ. 

ಇದೇ ವೇಳೆ ಅಮೆರಿಕ ಜೊತೆಗಿನ ಭಾರತದ ರಕ್ಷಣಾ ಸಹಕಾರ ಮುಂದುವರಿಯಲಿದ್ದು, ವಿಶೇಷವಾಗಿ ಕ್ವಾಡ್ ಸದಸ್ಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ಬಲ ಬರುವ ನಿರೀಕ್ಷೆ ಇದೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪ್ರಬಲ ರಾಷ್ಟ್ರಗಳಾದ ಜಪಾನ್ ಮತ್ತು ಭಾರತವನ್ನು ಓಲೈಸುವುದು ಅಮೇರಿಕಗೂ ಅನಿವಾರ್ಯ. ಅದೇ ರೀತಿ ಭಾರತವೂ ತನ್ನ ನೆರೆಯ ಹೆಚ್ಚು ಶಕ್ತಿಶಾಲಿ ಪ್ರತಿಸ್ಪರ್ಧಿ ವಿರುದ್ಧ, ತನ್ನ ರಕ್ಷಣಾ ಸಾಮರ್ಥ್ಯವನ್ನು ಇಮ್ಮಡಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಖಚಿತ. 

'ಅಮೆರಿಕ ಈಗ ಭಾರತವನ್ನು ತನ್ನ ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಪರಿಗಣಿಸುತ್ತದೆ. ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಸತ್ಯವನ್ನು ಅಮೆರಿಕ ಅರಿತಿದೆ,' ಎಂದು ನವದೆಹಲಿ ಮೂಲದ ರಕ್ಷಣಾ ವಿಶ್ಲೇಷಕ ರಾಹುಲ್ ಬೇಡಿ ಹೇಳಿರುವುದನ್ನು 'ದಿ ಡಿಪ್ಲೋಮ್ಯಾಟ್' ವರದಿ ಮಾಡಿದೆ.

ಹಿಂದೂ ಮಹಾಸಾಗರದ ಪ್ರದೇಶವು ಆಫ್ರಿಕಾದಿಂದ ಆಸ್ಟ್ರೇಲಿಯಾದವರೆಗಿನ ಸಾಗರ ಗಡಿಯನ್ನು ಒಳಗೊಂಡಿದೆ. ಇದು ಜಾಗತಿಕ ವ್ಯಾಪಾರ ಮತ್ತು ರಕ್ಷಣೆಯ ಹಿತದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ವಲಯವೂ ಇದೆ. ಇದು ಭಾರತ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಈ ಪ್ರದೇಶವು ಕಡಲ ಭದ್ರತೆ, ಆರ್ಥಿಕ ಚಟುವಟಿಕೆಗಳು ಮತ್ತು ಭೌಗೋಳಿಕ ರಾಜಕೀಯ ಕಾರ್ಯತಂತ್ರವನ್ನು ಹೆಣೆಯುವಲ್ಲಿ ಈ ರಾಷ್ಟ್ರಗಳಿಗೆ ನೆರವಾಗುತ್ತದೆ.   

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

ಭಾರತದ ಚುನಾವಣಾ ಫಲಿತಾಂಶಗಳು ಘೋಷಣೆಯಾಗುತ್ತಿದ್ದಂತೇ, ಅಮೇರಿಕಾ  ಅಧ್ಯಕ್ಷ ಜೋ ಬೈಡನ್ ಅವರು ದೂರವಾಣಿ ಕರೆ ಮಾಡಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ರಕ್ಷಣಾ ಸಂಬಂಧವನ್ನು ಬಲಪಡಿಸುವ ಎರಡೂ ರಾಷ್ಟ್ರಗಳ  ಕಾರ್ಯಸೂಚಿಯಲ್ಲಿ ಮತ್ತಷ್ಟು ಸುಧಾರಣೆ ಕಾಣುವ ಭರವಸೆಯನ್ನು ಇದೇ ವೇಳೆ ಬೈಡನ್ ವ್ಯಕ್ತಪಡಿಸಿದ್ದಾರೆ.   

'ಯುಎಸ್-ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಹಾಗೂ ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಿಸಲು, ಉಭಯ ನಾಯಕರು ತಮ್ಮ ಬದ್ಧತೆಯನ್ನು ಇದೇ ವೇಳೆ ಪುನರುಚ್ಚರಿಸಿದರು,' ಎಂದು ಶ್ವೇತಭವನ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಮತ್ತು ಪೆಸಿಫಿಕ್ ಸಾಗರಗಳನ್ನು ಒಳಗೊಂಡಿರುವ ಇಂಡೋ-ಪೆಸಿಫಿಕ್ ಪ್ರದೇಶವು, ಜಾಗತಿಕ ವ್ಯಾಪಾರ ಮತ್ತು ಭದ್ರತೆಗೆ ಅತ್ಯಂತ ನಿರ್ಣಾಯಕ ಜಲಮಾರ್ಗ. ಇದು ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ಪ್ರಮುಖ ದೇಶಗಳ ಭವಿಷ್ಯವನ್ನು ನಿರ್ಧರಿಸುತ್ತದೆ. 

ಈ ಪ್ರದೇಶವು ಅದರ ಆರ್ಥಿಕ ಸಾಮರ್ಥ್ಯ, ಹಡಗು ಮಾರ್ಗಗಳು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಮುಖ್ಯವಾಗಿದೆ. ಇದೇ ವೇಳೆ  'ಭಾರತದ ನೂತನ ಸರ್ಕಾರದೊಂದಿಗೆ ದ್ವಿಪಕ್ಷೀಯ ಭದ್ರತಾ ಆದ್ಯತೆಗಳನ್ನು ಚರ್ಚಿಸಲು, ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಶೀಘ್ರದಲ್ಲೇ ನವದೆಹಲಿಗೆ ಭೇಟಿ ನೀಡಲಿದ್ದಾರೆ,' ಎಂದು ಶ್ವೇತಭವನ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಅವರ ಎರಡನೇ ಅವಧಿಯು ಭಾರತ ಮತ್ತು ಚೀನಾ ನಡುವಣ ಗಡಿ ಉದ್ವಿಗ್ನತೆಗೆ ಸಾಕ್ಷಿಯಾಗಿತ್ತು. 2020ರಲ್ಲಿ ಉತ್ತರ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ, ಭಾರತ ಮತ್ತು ಚೀನಾವನ್ನು ಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು. ಈ ಘರ್ಷಣೆಯಲ್ಲಿ ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದರು.

ರಾಜ ವೈಭವದಿಂದ ಕೆಂಪು ದೀಪದ ತನಕ: ಹೀರಾ ಮಂಡಿಯ ಏಳು ಬೀಳಿನ ಹಾದಿ

'ಭಾರತಕ್ಕೆ ದೀರ್ಘಾವಧಿಯ ಮಿಲಿಟರಿ ಕಾರ್ಯತಂತ್ರದ ಸವಾಲನ್ನು ಒಡ್ಡುವ ಸಾಮರ್ಥ್ಯವನ್ನು ಚೀನಾ ಹೊಂದಿದೆ.  ಅಲ್ಲದೇ ಹಿಂದೂ ಮಹಾಸಾಗರದಲ್ಲಿ ಭಾರತದ ಮಿಲಿಟರಿ ಹಿತಾಸಕ್ತಿಗಳ ಮೇಲೂ ಪರಿಣಾಮ ಬೀರುವ ಯಾವುದೇ ಅವಕಾಶವನ್ನು ಚೀನಾ ಕಳೆದುಕೊಳ್ಳುವುದಿಲ್ಲ. ಈ ಕಾರಣಕ್ಕೆ ಚೀನಾ ಮೇಲೆ ಭಾರತ ನಿರಂತರವಾಗಿ ಹದ್ದಿನ ಕಣ್ಣಿಡಲಿದೆ,'  ಎಂದು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್‌ನ ತಜ್ಞ ವಿರಾಜ್ ಸೋಲಂಕಿ ಅವರು 'ದಿ ಡಿಪ್ಲೋಮ್ಯಾಟ್‌'ಗೆ ನೀಡಿರುವ ಸಂದರ್ಶನದಲ್ಲಿ ಉಲ್ಲೇಖಿಸಿರುವುದು ಗಮನ ಸೆಳೆದಿದೆ.

'ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಲು ಬಯಸಿದ್ದು, ಇದು ಭಾರತವು ತನ್ನ ರಕ್ಷಣಾ ಪಾಲುದಾರಿಕೆಯ ನೀತಿ ನಿರೂಪಣೆಯನ್ನು ಬಲಪಡಿಸುವಂತೆ ಒತ್ತಾಯಿಸುತ್ತಿದೆ. ಭಾರತದ ಸಾಂಪ್ರದಾಯಿಕ ಶತ್ರು ಪಾಕಿಸ್ತಾನದೊಂದಿಗೆ ಚೀನಾ ನಿಕಟ ಸಂಬಂಧವನ್ನು ಹೊಂದಿದೆ. ಅಲ್ಲದೇ  ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದಂತಹ ಭಾರತದ ನೆರೆಯ ರಾಷ್ಟ್ರಗಳೊಂದಿಗೆ ಚೀನಾ ರಕ್ಷಣಾ ಸಂಬಂಧವನ್ನು ಹೆಚ್ಚಿಸುತ್ತಿದೆ ಎಂಬುದನ್ನು ನಾವು ಮರೆಬಾರದು," ಎಂದು ವಿರಾಜ್ ಸೋಲಂಕಿ ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ವಿಸ್ತರಣಾವಾದ ಭಾರತಕ್ಕೆ ಕಳವಳಕಾರಿ ಸಂಗತಿ. ಮುಂಬರುವ ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಹೆಚ್ಚಿನ ಸ್ಪರ್ಧೆಗೆ ಇದು ಕಾರಣವಾಗಬಹುದು. ಹೀಗಾಗಿ ನೆರೆಯ ರಾಷ್ಟ್ರಗಳನ್ನು ಭಾರತದತ್ತ  ಸೆಳೆಯಲು, ಮೋದಿ ಸರ್ಕಾರ ಪರಿಣಾಮಕಾರಿ ಆರ್ಥಿಕ ನೀತಿಯನ್ನು ನಿರೂಪಿಸಲಿದೆ ಎಂಬುದು ತಜ್ಞರ ಅನಿಸಿಕೆಯಾಗಿದೆ. 

ಮೋದಿಗೆ ಚೀನಾದ ಅಭಿನಂದನೆ:
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಕೂಡ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದು, ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಹೆಚ್ಚಿನ ಬಲ ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. 'ಭಾರತ ಮತ್ತು ಚೀನಾ ನಡುವಿನ ಆರೋಗ್ಯಕರ ಮತ್ತು ಸ್ಥಿರ ಸಂಬಂಧವು, ಎರಡೂ ದೇಶಗಳಿಗೆ ಪ್ರಯೋಜನಕಾರಿ ಮತ್ತು ಈ ಪ್ರದೇಶದ ಶಾಂತಿ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ,' ಎಂದು ಮಾವೋ ನಿಂಗ್ ಹೇಳಿದ್ದಾರೆ.

'ಶಾಂತಿ ಸ್ಥಾಪನೆಗಾಗಿ ಭಾರತದೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಪ್ರಮುಖವಾಗಿ ಭಾರತದೊಂದಿಗಿನ ದೀರ್ಘಾವಧಿ ಗಡಿ ಸಮಸ್ಯೆಯನ್ನು ಬಗೆಹರಿಸಲು, ಸಾಧ್ಯವಾದ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ನಾವು ಅನುಸರಿಸುತ್ತೇವೆ.. ಎಂದು ಮಾವೋ ನಿಂಗ್ ಭರವಸೆಯ ಮಾತುಗಳನ್ನಾಡಿದ್ದಾರೆ.

ಅಮೆರಿಕಾ ಪ್ರಾಬಲ್ಯದೆದುರು ಭಾರತದ ಸ್ವಾಯತ್ತತೆ ರಕ್ಷಿಸಲು ಮೋದಿ ಪ್ರಯತ್ನ

ಬದಲಾಗಿದೆ ಚೀನಾ ನಿಲವು:
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಈ ಹೇಳಿಕೆ, 2019ರಲ್ಲಿ ಮೋದಿ ಗೆಲುವಿನ ಬಳಿಕ ನೀಡಿದ್ದ ಹೇಳಿಕೆಗಿಂತ ಭಿನ್ನವಾಗಿದೆ. ಗಡಿ ಘರ್ಷಣೆಯ ನಂತರದ ಸ್ಥಿತಿಗತಿಗಳು ಭಿನ್ನವಾಗಿವೆ ಎಂಬುದಕ್ಕೆ ಮಾವೋ ನಿಂಗ್ ಅವರ ಪ್ರಸ್ತುತ ಹೇಳಿಕೆ ಉದಾಹರಣೆಯಾಗಿದೆ. ಗಡಿ ಘರ್ಷಣೆಗೂ ಮೊದಲು ಎರಡೂ  ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಮಾತನಾಡುತ್ತಿದ್ದ ಚೀನಾ, ಇದೀಗ ಪರಸ್ಪರ ನಂಬಿಕೆಯನ್ನು ವೃದ್ಧಿಸುವ ಕುರಿತು ಮಾತನಾಡುತ್ತಿದೆ. 

ಪ್ರಧಾನಿ ಮೋದಿ ಅವರು ಈ ಹಿಂದಿನ ಎರಡು ಅವಧಿಯಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಾರದಿರುವುದರಿಂದ, ಆಡಳಿತದಲ್ಲಿ ಸಮ್ಮಿಶ್ರ ಪಾಲುದಾರರ ಮೇಲಿನ ಅವಲಂಬನೆ ಮೋದಿ ಅವರಿಗೆ ಅನಿವಾರ್ಯ ಅಲ್ಲದೇ ಈ ಬಾರಿ ವಿರೋಧ ಪಕ್ಷಗಳ ಧ್ವನಿ ಕೂಡ ಗಟ್ಟಿಯಾಗಿದ್ದು, ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಮೋದಿ ಅವರ ರಕ್ಷಣಾ ಸುಧಾರಣೆಗಳನ್ನು ವಿರೋಧಿಸುವ ಸಾಧ್ಯತೆ ಕಡಿಮೆ. ಆದರೆ ಚೀನಾದೊಂದಿಗಿನ ಗಡಿ ಸಮಸ್ಯೆಗಳ ನಿರ್ವಹಣೆ ಕುರಿತಾದ ತನ್ನ ಟೀಕೆಯನ್ನು ಅದು ಮುಂದುವರೆಸಬಹುದು. 2020ರ ಗಾಲ್ವಾನ್ ಘರ್ಷಣೆಯ ಬಳಿಕ ಚೀನಿ ಪಡೆಗಳು ಭಾರತದ ಗಡಿಯೊಳಗೆ ನುಸುಳಿರುವುದು ಸ್ಪಷ್ಟ. ಹೀಗಾಗಿ ಗಡಿಯ ನೈಜ ಪರಿಸ್ಥಿತಿಯನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಹೆಚ್ಚಿನ ಬಲ ಬರಲಿದೆ,' ಎಂದು ವಿರಾಜ್ ಸೋಲಂಕಿ ಅಂದಾಜಿಸಿದ್ದಾರೆ.

ತೈಲ ಭದ್ರತೆಗಾಗಿ ಭಾರತದ ಹೆಜ್ಜೆ: ಅಮೆರಿಕಾದ ವಿರುದ್ಧ ದೃಢ ನಡೆ

ಶಸ್ತ್ರಾಸ್ತ ಉತ್ಪಾದನೆಯಲ್ಲಿ ಸ್ವಾವಲಂಬನೆ:
ಪ್ರಧಾನಿ ಮೋದಿ ಅವರ ಮಿಲಿಟರಿ ಆಧುನೀಕರಣ ನೀತಿಯು ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ಗುರಿ ಹೊಂದಿದೆ. 
ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಖಾಸಗಿ ಹೂಡಿಕೆಯನ್ನು ಬೆಂಬಲಿಸುವ ಮೋದಿ ಸರ್ಕಾರ, ಇದಕ್ಕಾಗಿ ವಿದೇಶಿ ಹೂಡಿಕೆಯ ನಿಯಮಗಳನ್ನು ಸಡಿಲಿಸಿರುವುದು ಗಮನಾರ್ಹ.  

2022ರಲ್ಲಿ ಭಾರತ ತನ್ನ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯನ್ನು ಕಾರ್ಯಾಚರಣೆಗೆ ಇಳಿಸಿದೆ. ಇದು ಚೀನಾದ ಬೆಳೆಯುತ್ತಿರುವ ನೌಕಾ ಶಕ್ತಿಯನ್ನು ಎದುರಿಸುವ ತನ್ನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಮೋದಿ ಸರ್ಕಾರ ಹೇಳಿದೆ. ಅಲ್ಲದೇ ಮಿಲಿಟರಿ ಉಪಕರಣಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಖಾಸಗಿ ಸಹಭಾಗಿತ್ವ ಅನಿವಾರ್ಯ ಎಂಬುವುದು ಮೋದಿ ಸರ್ಕಾರದ ವಾದ.

'ರಷ್ಯಾ- ಉಕ್ರೇನ್‌ ಯುದ್ಧದಿಂದ ಮಿಲಿಟರಿ ಉಪಕರಣಗಳ ಬಿಡಿಭಾಗಗಳು ಭಾರತಕ್ಕೆ ಬರವುದು ವಿಳಂಬವಾಗುತ್ತಿದೆ. ಇದರಿಂದ ಯುಎಸ್, ಫ್ರಾನ್ಸ್, ಇಸ್ರೇಲ್ ಮತ್ತು ಇತರ ದೇಶಗಳ ಮೇಲಿನ ಭಾರತದ ಅವಲಂಬನೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ರಕ್ಷಣಾ ವಲಯವನ್ನು ಮತ್ತಷ್ಟು ಆತ್ಮನಿರ್ಭರ ಮಾಡಲು ಮೋದಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಖಚಿತ,' ಎಂದು ವಿರಾಜ್ ಸೋಲಂಕಿ ಹೇಳಿದ್ದಾರೆ.

ಪೆಟ್ರೋಲ್ ದರದಲ್ಲಿ ಸ್ಥಿರತೆ ಹೊಂದಲು ನೆರವಾದ ಭಾರತ ಸರ್ಕಾರದ ಸ್ಥಿರ ವಿದೇಶಾಂಗ ನೀತಿಗಳು

ಫೈಟರ್ ಜೆಟ್ ಎಂಜಿನ್‌ಗಳನ್ನು ಸ್ಥಳೀಯವಾಗಿ ತಯಾರಿಸಲು ಹಿಂದೂಸ್ತಾನ್ ಏರೋನಾಟಿಕ್ಸ್‌ ಮತ್ತು ಅಮೆರಿಕದ ಜನರಲ್ ಎಲೆಕ್ಟ್ರಿಕ್‌ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿದೆ. ಭಾರತದೊಂದಿಗಿನ ತನ್ನ ರಕ್ಷಣಾ ಸಹಕಾರ ಗಟ್ಟಿಯಾಗಲು ಈ ಒಪ್ಪಂದ ನೆರವಾಗಲಿದೆ ಎಂದು ಅಮೆರಿಕ ನಂಬಿದೆ. ಕಳೆದ ವಾರಾಂತ್ಯದಲ್ಲಿ ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ರಕ್ಷಣಾ ಸಮ್ಮೇಳನದಲ್ಲಿ, ಭಾರತ ಮತ್ತು ಅಮೆರಿಕ ಜಂಟಿಯಾಗಿ ಶಸ್ತ್ರಸಜ್ಜಿತ ವಾಹನಗಳ ಉತ್ಪಾದನೆಗೆ ಮುಂದಡಿ ಇಟ್ಟಿವೆ ಎಂಬ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ಹೇಳಿಕೆ ಇದಕ್ಕೆ ಪೂರಕವಾಗಿದೆ.

'ಭಾರತದೊಂದಿಗಿನ ನಮ್ಮ ಪ್ರಸ್ತುತ ರಕ್ಷಣಾ ಮತ್ತು ದ್ವಿಪಕ್ಷೀಯ ಸಂಬಂಧ ಇದುವರೆಗೆ ಉತ್ತಮವಾಗಿದೆ. ಮೋದಿ ಅವರ ಮೂರನೇ ಅವಧಿಯಲ್ಲಿ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ವಿಶ್ವಾಸವಿದೆ,' ಎಂದು ಲಾಯ್ಡ್ ಆಸ್ಟಿನ್ ಹೇಳಿರುವುದು ಜಾಗತಿಕವಾಗಿ ಗಮನ  ಸೆಳೆದಿದೆ.

click me!