ನಾವು ತುಂಬಾ ನಿಕಟ, ಸಾಮರಸ್ಯ ಮತ್ತು ಪ್ರೀತಿಯ ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದೇವೆ, ಆದರೆ ಅದು ಅಲ್ಲಿಯೇ ನಿಲ್ಲುತ್ತದೆ ಎನ್ನುವ ಮೂಲಕ ರಾಜಕೀಯ ವಿಷಯಕ್ಕೆ ಮೂಗು ತೂರಿಸಲು ಹೋಗುವುದಿಲ್ಲ ಎಂದು ನಾರಾಯಣಮೂರ್ತಿ ತಮ್ಮ ಅಳಿಯೊಂದಿಗಿನ ಸಂಬಂಧದ ಕುರಿತಾಗಿ ಹೇಳಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅಳಿಯ ರಿಷಿ ಸುನಕ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
'ವಿದೇಶಿಗಳಾಗಿ, ಬೇರೆ ದೇಶದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸದಿರಲು ನಮಗೆ ಈ ಗೌರವವಿದೆ. ಆದ್ದರಿಂದ, ನಾವು ಆ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾವು ತುಂಬಾ ನಿಕಟ, ಸಾಮರಸ್ಯ ಮತ್ತು ಪ್ರೀತಿಯ ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದೇವೆ, ಆದರೆ ಅದು ಅಲ್ಲಿಯೇ ನಿಲ್ಲುತ್ತದೆ' ಎಂದು ಅವರು ವಿವರಿಸಿದ್ದಾರೆ.
ನಾರಾಯಣ ಮೂರ್ತಿ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಬಗ್ಗೆ ಮತ್ತು ಜೀವನದಲ್ಲಿ ತಮ್ಮ ಸಮಯವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾತನಾಡಿದರು.
'ನಾನು ನನ್ನ ಮಕ್ಕಳೊಂದಿಗೆ ಹಾಗೂ ಪತ್ನಿಯೊಂದಿಗೆ ಹೆಚ್ಚಿನ ಸಮಯ ಕಳೆಯಬಹುದಿತ್ತು. ಜೀವನವು ನಾವು ಆದ್ಯತೆ ನೀಡುವ ವಿಷಯಗಳಿಗಾಗಿ ಸಮಯ ವ್ಯಯಿಸುವುದಾಗಿದೆ' ಎಂದಿದ್ದಾರೆ. ಜೊತೆಗೆ, ಇನ್ನು ಮುಂದೆ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಯೋಜಿಸಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಭೌತಶಾಸ್ತ್ರದಿಂದ ಅರ್ಥಶಾಸ್ತ್ರದವರೆಗೆ ವಿವಿಧ ವಿಷಯಗಳ ಬಗ್ಗೆ ಓದುತ್ತಾ, ಸಂಗೀತ ಕೇಳುತ್ತಾ ಸಮಯ ಕಳೆಯಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
78 ವರ್ಷದ ಟೆಕ್ ಬಿಲಿಯನೇರ್ ಮೂರ್ತಿ ಅವರು ಕಂಪನಿಯನ್ನು ತೊರೆದ ನಂತರದ ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದರು. ಅಪಾರ ಬೆಳವಣಿಗೆಯನ್ನು ಮತ್ತು ಉತ್ತಮ ಆರ್ಥಿಕತೆಯ ಹಾದಿಯನ್ನು ತೋರಿಸಿರುವ ಇತರ ಏಷ್ಯಾದ ದೇಶಗಳಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದರು.
ರಾಜಕೀಯಕ್ಕೆ ಸೇರುತ್ತಾರೆಯೇ?
ರಾಜಕೀಯಕ್ಕಿಳಿಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಅದಕ್ಕೆ ನನಗೆ ತುಂಬಾ ವಯಸ್ಸಾಗಿದೆ ಎಂದು ಭಾವಿಸುತ್ತೇನೆ' ಎಂದರು. ಇನ್ನು ಈ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ಸಾರ್ವಜನಿಕ ಸೇವೆಗಾಗಿ ರಾಜಕೀಯ ಸೇರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾಕ್ಕೆ ಪ್ರಶಂಸೆ
ನಾರಾಯಣ ಮೂರ್ತಿ ಅವರು ಚೀನಾ, ಸಿಂಗಾಪುರ ಮತ್ತು ಮಲೇಷ್ಯಾಗಳನ್ನು ಭಾರತ ಅನುಸರಿಸಬಹುದಾದ ವಿಭಿನ್ನ ಬೆಳವಣಿಗೆಯ ಮಾದರಿಗಳ ಉದಾಹರಣೆಗಳೆಂದು ಸೂಚಿಸಿದರು.