PM Modi Policies : ಮೋದಿ ನೀತಿಗಳ ಬಗ್ಗೆ ನನ್ನ ವಿರೋಧವಿದೆ : ಡಾ.ಸುಬ್ರಹ್ಮಣಿಯನ್‌ ಸ್ವಾಮಿ

By Kannadaprabha News  |  First Published Dec 8, 2021, 8:48 AM IST
  • ನಾನು ಈಗ ಬಿಜೆಪಿಯಲ್ಲಿ ತೃಪ್ತನಾಗಿದ್ದೇನೆ. ಆದರೆ ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಮಾತ್ರ ನನ್ನ ವಿರೋಧವಿದೆ
  • ಪ್ರಧಾನಿ ಮೋದಿಯವರು ತಮ್ಮ ನೀತಿ ಸರಿಪಡಿಸಿಕೊಂಡರೆ ನನಗೆ ಯಾವುದೇ ಆಕ್ಷೇಪ ಇರುವುದಿಲ್ಲ

 ಮಂಗಳೂರು (ಡಿ.08): ನಾನು ಈಗ ಬಿಜೆಪಿಯಲ್ಲಿ (BJP) ತೃಪ್ತನಾಗಿದ್ದೇನೆ. ಆದರೆ ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಮಾತ್ರ ನನ್ನ ವಿರೋಧವಿದೆ. ಪ್ರಧಾನಿ ಮೋದಿಯವರು (Narendra Modi) ತಮ್ಮ ನೀತಿ ಸರಿಪಡಿಸಿಕೊಂಡರೆ ನನಗೆ ಯಾವುದೇ ಆಕ್ಷೇಪ ಇರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣಿಯನ್‌ ಸ್ವಾಮಿ (Subramanian Swamy) ಹೇಳಿದ್ದಾರೆ. ಮಂಗಳವಾರ ರಾತ್ರಿ ಮಂಗಳೂರಿನಲ್ಲಿ ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ (BM Hegde) ಅವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಜನ ಸಂಘಕ್ಕೆ 1969ರಲ್ಲೇ ಸೇರಿದವನು. ಹಾಗಾಗಿ ಬಿಜೆಪಿಯಲ್ಲಿ (BJP) ಸಮಸ್ಯೆಯಾಗಿಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರ (Govt) ಬರಬೇಕು ಎಂದು ಸಾಕಷ್ಟು ಹೋರಾಡಿದವನು. ಆದರೆ ಈಗ ಸರ್ಕಾರ ಪ್ರಣಾಳಿಕೆಯನ್ನು ಪಾಲಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ, ಪ್ರಧಾನಿ ನರೇಂದ್ರ ಮೋದಿಯವರಿಗೆ 2015ರಿಂದ 2017ರ ವರೆಗೆ ಹಲವು ಬಾರಿ ಪತ್ರ ಬರೆದರೂ ಅದಕ್ಕೆ ಉತ್ತರಿಸಿಲ್ಲ. ಹಾಗಾಗಿ ನಾನೀಗ ಪ್ರಜಾಪ್ರಭುತ್ವದ ಆಶಯದಂತೆ ಬಹಿರಂಗವಾಗಿ ಟೀಕಿಸುತ್ತೇನೆ ಎಂದು ಸಮರ್ಥಿಸಿಕೊಂಡರು.

Tap to resize

Latest Videos

undefined

ಕೇಂದ್ರ ದೇವಸ್ಥಾನಗಳ ಪರ ನಿಂತಿಲ್ಲ: ಕೇಂದ್ರ ಸರ್ಕಾರ ದೇವಸ್ಥಾನಗಳ (Temple) ಪರವಾಗಿ ನಿಂತಿಲ್ಲ. ಹಿಂದುತ್ವವನ್ನು ಗೌರವಿಸುವ ಕೆಲಸ ಮಾಡುತ್ತಿಲ್ಲ, ರಾಮಸೇತು ಉಳಿಸಲು ನಾನು ಯುಪಿಎ ಸರ್ಕಾರ ವಿರುದ್ಧ ಹೋರಾಡಿದ್ದೆ. ಆದರೆ ಈಗ ಮೋದಿ ಸರ್ಕಾರ ರಾಮಸೇತುವನ್ನು ಪಾರಂಪರಿಕ ಸ್ಮಾರಕ ಎಂದು ಗುರುತಿಸಲು ವಿಫಲವಾಗಿದೆ. ಇನ್ನು ಚೀನಾ ವಿರುದ್ಧ ಮೋದಿ ದನಿಯೆತ್ತುತ್ತಿಲ್ಲ. ಚೀನಾದ ಹೆಸರು ತೆಗೆಯುತ್ತಲೂ ಇಲ್ಲ, ನಮ್ಮ ನಿಲುವು ತೀರಾ ಕ್ಷೀಣವೆನಿಸಿದೆ. ಕೋವಿಡ್‌ (Covid) ಹೊರತಾಗಿಯೂ ನಮ್ಮ ಆರ್ಥಿಕತೆಯನ್ನು ಇನ್ನಷ್ಟುಉತ್ತಮವಾಗಿ ನಿರ್ವಹಿಸಬಹುದಿತ್ತು, ಅದರಲ್ಲೂ ಸರ್ಕಾರ ವೈಫಲ್ಯ ಪ್ರದರ್ಶಿಸಿದೆ. ಈ ಮೂರು ನೀತಿಗಳನ್ನು ನಾನು ಟೀಕಿಸುತ್ತೇನೆ ಎಂದರು.

ರಾಜ್ಯಸಭೆಯಲ್ಲಿ ಮಾತನಾಡಲು ಬಿಡದಿದ್ದರೆ ಚಿಂತೆಯಿಲ್ಲ. ಟ್ವಿಟರ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ನಾನು ನನ್ನ ನಿಲುವುಗಳನ್ನು ಹೇಳಿಕೊಳ್ಳುತ್ತೇನೆ, ನನ್ನ ವಿರುದ್ಧ ಅಲ್ಲಿ ಪೇಯ್ಡ್‌ ಟ್ರೋಲ್‌ಗಳು ಏನು ಬರೆದರೂ ನಾನು ಅದನ್ನು ಗಣನೆಗೆ ತೆಗೆದುಕೊಳ್ಳಲಾರೆ. ರಾಮಮಂದಿರಕ್ಕಾಗಿ ನ್ಯಾಯಾಲಯದಲ್ಲಿ ನಾನು ಹೋರಾಡಿ ಜಯಗಳಿಸಿದ್ದೇನೆ. ನಾನು ಏನು ಮಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ, ಹಾಗಾಗಿ ಯಾವುದೇ ಹೆದರಿಕೆ ಇಲ್ಲ ಎಂದರು.

ಡಾ. ಬಿ.ಎಂ. ಹೆಗ್ಡೆ ಭೇಟಿ: ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ ಅವರ ನಿವಾಸಕ್ಕೆ ಪತ್ನಿ ರೋಕ್ಸಾ ಸ್ವಾಮಿ ಅವರೊಂದಿಗೆ ಭೇಟಿ ನೀಡಿದ ಡಾ.ಸುಬ್ರಹ್ಮಣಿಯನ್‌ ಸ್ವಾಮಿ ಹೆಗ್ಡೆ ಅವರ ಕುಶಲ ವಿಚಾರಿಸಿದರು. ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದಕ್ಕೆ ಅವರನ್ನು ಶಾಲು ಹೊದೆಸಿ ಗೌರವ ನೀಡಿದರು. ಇದೇ ವೇಳೆ ಬಿ.ಎಂ.ಹೆಗ್ಡೆ ಅವರ ಪುತ್ರ ಮಂಜುನಾಥ್‌ ಹೆಗ್ಡೆ, ವಿಶ್ವ ಹಿಂದು ಸಂಗಮಂನ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಶೆಟ್ಟಿಇದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಬಿ.ಎಂ.ಹೆಗ್ಡೆ, ಡಾ.ಸ್ವಾಮಿ ಅವರು ಹಳೆಯ ಮಿತ್ರ, ಇಲ್ಲಿಗೆ ಬಂದಾಗ ನನ್ನನ್ನು ನೆನಪಿಸಿಕೊಂಡು ಬಂದಿದ್ದಾರೆ. ಅದಕ್ಕೆ ನಾನು ಧನ್ಯ ಎಂದರು.

ಪ.ಬಂಗಾಳದಲ್ಲಿ ದೇವಸ್ಥಾನ ಸ್ವತಂತ್ರ!

ಪಶ್ಚಿಮ ಬಂಗಾಳದ (west Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಲ್ಲಿ ಹೂಗ್ಲಿಯಲ್ಲಿ ಸರ್ಕಾರ ವಶಪಡಿಸಿಕೊಂಡಿದ್ದ ತಾರಕೇಶ್ವರ ದೇವಸ್ಥಾನವನ್ನು ಬಿಡುಗಡೆಗೊಳಿಸಬೇಕು, ಇಲ್ಲವಾದರೆ ನ್ಯಾಯಾಲಯದಲ್ಲಿ ಹೋರಾಡುವುವಾಗಿ ಹೇಳಿದೆ, ಅದಕ್ಕೆ ಆಕೆ ಕೂಡಲೇ ಬಿಡುಗಡೆ ಆದೇಶ ಮಾಡಿದ್ದಾರೆ ಎಂದು ಸುಬ್ರಮಣಿಯನ್‌ ಸ್ವಾಮಿ ತಿಳಿಸಿದರು. ಮಮತಾ ಬ್ಯಾನರ್ಜಿ ಅವರು ನನ್ನ ಹಳೆ ಸ್ನೇಹಿತೆ. ಆಕೆಗೂ ನನ್ನಲ್ಲಿ ಗೌರವ ಇದೆ, ನಾನು ಹೇಳಿದ್ದನ್ನು ಮಾಡಿಯೇ ಮಾಡುತ್ತೇನೆ ಎನ್ನುವುದು ಆಕೆಗೆ ಗೊತ್ತು. ನಾನು ಬೇರೆ ರಾಜಕೀಯ ವಿಚಾರವನ್ನೇನೂ ಆಕೆಯಲ್ಲಿ ಮಾತನಾಡಿಲ್ಲ ಎಂದರು.

click me!