ಉತ್ತರ ಪ್ರದೇಶದ ಜೌನ್ಪುರದಲ್ಲಿ ಮುಸ್ಲಿಮರಲ್ಲಿ ಹಿಂದೂ ಉಪನಾಮದ ಹೊಸ ಟ್ರೆಂಡ್‌!

By Kannadaprabha News  |  First Published Dec 12, 2024, 5:07 AM IST

ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಕೆಲವು ಮುಸ್ಲಿಮರು ತಮ್ಮ ಉಪನಾಮಗಳನ್ನು ದುಬೆ, ಪಾಂಡೆ, ತಿವಾರಿಯಂತಹ ಹಿಂದೂ ಉಪನಾಮಗಳಿಗೆ ಬದಲಾಯಿಸುತ್ತಿದ್ದಾರೆ. ವಿಶಾಲ್ ಭಾರತ್ ಸಂಸ್ಥಾನ್ ಎಂಬ ಸಂಘಟನೆಯು ಈ ಬದಲಾವಣೆಯನ್ನು ಉತ್ತೇಜಿಸುತ್ತಿದ್ದು, ಮುಸ್ಲಿಮರನ್ನು ಅವರ ಹಿಂದೂ ಪೂರ್ವಜರೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ.


ಪಿಟಿಐ ಜೌನ್‌ಪುರ (ಯುಪಿ):  ಉತ್ತರ ಪ್ರದೇಶದ ಜೌನ್‌ಪುರದ ಕೆಲ ಮುಸ್ಲಿಮರ ಉಪನಾಮ (ಸರ್‌ ನೇಮ್‌) ಈಗ ಸದ್ದಿಲ್ಲದೆ ಬದಲಾಗುತ್ತಿದೆ. ಮುಸ್ಲಿಂ ಹೆಸರಿನ ಮುಂದೆ ದುಬೆ, ಪಾಂಡೆ, ತಿವಾರಿಯಂಥ ‘ಹಿಂದೂ ಉಪನಾಮ’ಗಳು ಸೇರ್ಪಡೆಯಾಗುತ್ತಿವೆ..!

ಅರೇ, ಮುಸ್ಲಿಮರಿಗೂ ಹಿಂದೂ ಉಪನಾಮಕ್ಕೂ ಏನ್‌ ಸಂಬಂಧ ಎಂಬ ಕುತೂಹಲ ಮೂಡದೇ ಇರದು. ಇದಕ್ಕೆ ಉತ್ತರ ಅವರ ಮೂಲದಲ್ಲಿದೆ. ಇವರ ಪೂರ್ವಜರೆಲ್ಲ ಹಿಂದೂಗಳೇ ಆಗಿದ್ದು ನಂತರ ಮತಾಂತರಗೊಂಡಿದ್ದರು. ಇದೀಗ ವಿಶಾಲ್‌ ಭಾರತ್ ಸಂಸ್ಥಾನ್‌ ಎಂಬ ಸಂಘಟನೆ ಈ ಮುಸ್ಲಿಮರನ್ನು ಅವರ ಮೂಲದೊಂದಿಗೆ ಜೋಡಿಸುವ ಕೆಲಸ ಮಾಡುತ್ತಿದೆ. ಮೂಲದ ಅರಿವಿದ್ದಾಗ ಧಾರ್ಮಿಕ ಸಂಘರ್ಷಕ್ಕೆ ಕಡಿವಾಣ ಬೀಳಬಹುದೆಂಬ ಉದ್ದೇಶದಿಂದ 5 ವರ್ಷದ ಹಿಂದೆ ಆರಂಭಿಸಿದ ಈ ಆಂದೋಲನದಿಂದ ಅನೇಕರ ಸರ್‌ ನೇಮ್‌ ಬದಲಾಗಿದೆ. ಈ ಆಂದೋಲನ ಜೌನ್‌ಪುರ ಮಾತ್ರವಲ್ಲದೆ ಆಜಂಗಢ, ಗಾಜೀಪುರ ಮತ್ತು ವಾರಾಣಸಿಗೂ ಹಬ್ಬಿದೆ.

Tap to resize

Latest Videos

 

ವಾರಾಣಸಿ ದೇಗುಲಗಳಿಂದ ಸಾಯಿ ಬಾಬಾ ಮೂರ್ತಿ ಸ್ಥಳಾಂತರ : ಮಹಾ ಬಿಜೆಪಿ, ಕಾಂಗ್ರೆಸ್‌ ಸಿಡಿಮಿಡಿ

ದೆಹ್ರಿ ಗ್ರಾಮದ ನೌಶಾದ್‌ ಅಹಮದ್‌ ಈಗ ನೌಶಾದ್ ಅಹಮದ್‌ ದುಬೆ ಆಗಿದ್ದಾರೆ. ‘ನನ್ನ ಪೂರ್ವಿಕರು ಬ್ರಾಹ್ಮಣರು. ನಾನು ಇಸ್ಲಾಂ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತೇನೆ. ಆದರೆ ದನಗಳನ್ನೂ ಸಾಕಲಾರಂಭಿಸಿದ್ದೇನೆ. ನಾನು ಧರ್ಮ ಬಿಟ್ಟಿಲ್ಲ, ಪೂರ್ವಜರ ಗೌರವಾರ್ಥವಾಗಿ ಸರ್‌ ನೇಮ್ ಅಷ್ಟೇ ಬದಲಾಯಿಸಿದ್ದೇನೆ’ ಎಂದು ನೌಶಾದ್‌ ಹೇಳುತ್ತಾರೆ. ಇದೇ ರೀತಿ ಹಲವರು ತಮ್ಮ ಸರ್‌ ನೇಮ್‌ ಬದಲಿಸಿದ್ದಾರೆ.

ಮದುವೆ ಮುರಿದು ಬಿತ್ತು:

ಈ ಸರ್‌ ನೇಮ್‌ ಬದಲಾವಣೆ ಅನೇಕರ ಕೆಂಗಣ್ಣಿಗೂ ಗುರಿಯಾಗಿದೆ. ದುಬೆ ಸರ್‌ನೇಮ್‌ ಜತೆಗೆ ನೌಶಾದ್‌ ತಮ್ಮ ಹೆಸರನ್ನು ಪುತ್ರಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದು ಗದ್ದಲಕ್ಕೆ ಕಾರಣವಾಗಿದೆ. ನಾನು ಮತಾಂತರಗೊಂಡಿದ್ದೇನೆಂದು ಕೆಲವರು ಗಾಳಿ ಸುದ್ದಿ ಹರಡಿಸಿದ ಪರಿಣಾಮ ಮದುವೆಯೇ ಮುರಿದು ಬಿತ್ತು ಎನ್ನುತ್ತಾರೆ ಅವರು. ನೌಶಾದ್‌ ಕುಟುಂಬಕ್ಕೆ ಇದೀಗ ಬೆದರಿಕೆಯೂ ಇದೆ.

ಹಗೆತನಕ್ಕೆ ಬ್ರೇಕ್‌:

‘ನಾವು ಧರ್ಮ ಬದಲಾಯಿಸಬಹುದು. ಆದರೆ ಜಾತಿಯನ್ನಲ್ಲ. ಮುಸ್ಲಿಮರಲ್ಲೂ ಹಿಂದೂಗಳಂತೆ ಬ್ರಾಹ್ಮಣರು, ಠಾಕೂರರು ಮತ್ತು ವೈಶ್ಯರಂಥ ಜಾತಿಗಳಿವೆ. ಮೂಲದ ಅರಿವಾದಾಗ ಹಿಂದೂ-ಮುಸ್ಲಿಂ ಹಗೆತನ ಕಡಿಮೆಯಾಗಬಹುದೆಂಬ ಕಾರಣಕ್ಕೆ ಈ ಆಂದೋಲನ ಆರಂಭಿಸಿದ್ದೇವೆ’ ಎಂದು ವಿಶಾಲ್‌ ಭಾರತ್‌ ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ರಾಜೀವ್‌ ಗುರೂಜಿ ಹೇಳಿದ್ದಾರೆ.

click me!