
ನವದೆಹಲಿ (ಆ.31): ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅವರ ಸಾಮಾಜಿಕ ಸ್ವಾತಂತ್ರ್ಯದ ಕುರಿತು ಕೇರಳದ 'ಗ್ರಾಂಡ್ ಮುಫ್ತಿ' ಶೇಖ್ ಅಬೂಬಕರ್ ಅಹಮದ್ (ಕಾಂತಪುರಂ ಎ.ಪಿ. ಅಬೂಬಕರ್ ಮುಸಲಿಯಾರ್) ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಬೆಂಬಲ ವ್ಯಕ್ತವಾಗಿದೆ. ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಕಾಂತಪುರಂ ಅವರ ಹೇಳಿಕೆಯನ್ನು ಮುಕ್ತವಾಗಿ ಸಮರ್ಥಿಸಿಕೊಂಡಿದ್ದಾರೆ. 'ಶರಿಯಾ ಕಾನೂನು ಮತ್ತು ಇಸ್ಲಾಂ ಧರ್ಮದ ದೃಷ್ಟಿಕೋನದಿಂದ ಗ್ರಾಂಡ್ ಮುಫ್ತಿ ಹೇಳಿರುವುದು ಸಂಪೂರ್ಣವಾಗಿ ಸರಿಯಾಗಿದೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ರಜ್ವಿ ಬರೇಲ್ವಿ ತಿಳಿಸಿದ್ದಾರೆ.
ವಿವಾದದ ಕುರಿತು ಪ್ರತಿಕ್ರಿಯಿಸಿದ ಬರೇಲ್ವಿ, 'ಇಸ್ಲಾಂ ಧರ್ಮವು ಮಹಿಳೆಯರಿಗೆ ಗೌರವ ಮತ್ತು ಘನತೆಯನ್ನು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ತೆರೆದುಕೊಳ್ಳುವುದರಿಂದ ಅವರನ್ನು ರಕ್ಷಿಸುವುದು ಧರ್ಮದ ಆಶಯ. ಮಹಿಳೆಯರು 'ಮನೆಯ ಅಲಂಕಾರ' ಇದ್ದಂತೆ, ಅವರ ಗೌರವ ಮತ್ತು ಘನತೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅಥವಾ ಅಪಹಾಸ್ಯಕ್ಕೆ ವಸ್ತುವನ್ನಾಗಿ ಮಾಡಬಾರದು' ಎಂದು ಪ್ರತಿಪಾದಿಸಿದ್ದಾರೆ.
ಮಹಿಳೆಯರು ಕೆಲಸ ಮಾಡಬಾರದು ಅಥವಾ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸಬಾರದು ಎಂಬುದು ಗ್ರಾಂಡ್ ಮುಫ್ತಿ ಅವರ ಉದ್ದೇಶವಾಗಿರಲಿಲ್ಲ. ಇಸ್ಲಾಮಿಕ್ ನಿಯಮದಂತೆ ಹಿಜಾಬ್ ಧರಿಸಿ ಮಹಿಳೆಯರು ಕಚೇರಿಗಳಲ್ಲಿ ಕೆಲಸ ಮಾಡಲು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಶರಿಯಾದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಖ್ಯಾತ ಧಾರ್ಮಿಕ ಮುಖಂಡ, 'ಅಖಿಲ ಭಾರತ ಸುನ್ನಿ ಜಮ್ಮಿಯ್ಯತುಲ್ ಉಲಮಾ' ಮತ್ತು 'ಸಮಸ್ತ ಕೇರಳ ಜಮ್ಮಿಯ್ಯತುಲ್ ಉಲಮಾ'ದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಾಂತಪುರಂ ಎ.ಪಿ. ಅಬೂಬಕರ್ ಮುಸಲಿಯಾರ್, ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ 'ಹುಬ್ಬುಲ್ ರಸೂಲ್' ಸಮಾವೇಶದಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.'ಮಹಿಳೆಯರು ತಮ್ಮ ಮನೆಗಳ ವ್ಯಾಪ್ತಿಯಲ್ಲೇ ಇರಬೇಕು. ಅವರು ಸಾರ್ವಜನಿಕ ಕ್ಷೇತ್ರಕ್ಕೆ ಬರಬಾರದು. ಪವಿತ್ರ ಕುರಾನ್ ಸಹ ಇದನ್ನೇ ಹೇಳುತ್ತದೆ' ಎಂದು ಕಾಂತಪುರಂ ಹೇಳಿದ್ದರು.
ಪರ್ದಾ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದ ಅವರು, ಮಹಿಳೆಯರನ್ನು ಈ ರೀತಿ ಸಾರ್ವಜನಿಕ ವೇದಿಕೆಗಳಿಗೆ ತರುವುದರಿಂದ 'ದೊಡ್ಡ ವಿನಾಶ' ಉಂಟಾಗುತ್ತದೆ ಎಂಬುದನ್ನು ಅರಿತೇ ಇಸ್ಲಾಂ ಅವರಿಗೆ ಪರ್ದಾ ಕಡ್ಡಾಯಗೊಳಿಸಿದೆ ಎಂದಿದ್ದರು.
ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಕಾಂತಪುರಂ ಅವರು ಚಿನ್ನದ ಆಭರಣದ ಉದಾಹರಣೆ ನೀಡಿದ್ದರು. ಬಂಗಾರದ ಸರವನ್ನು ಗ್ರಾಹಕರಿಗೆ ತೋರಿಸುವ ಮುನ್ನ ಪೆಟ್ಟಿಗೆ, ಕವರ್ ಹಾಗೂ ಅಲ್ಮೆರಾದಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾಯ್ದಿರಿಸಲಾಗುತ್ತದೆ. ಆದರೆ, ಕಲ್ಲನ್ನು ಅಂಗಡಿಯ ಹೊರಗೆ ಹಾಗೆಯೇ ಬಿಡಲಾಗುತ್ತದೆ. ಮಹಿಳೆಯರು ಕೂಡ ಚಿನ್ನದ ಒಡವೆಯಿದ್ದಂತೆ. ಆಭರಣವು ತನ್ನ ಸೌಂದರ್ಯ ಮತ್ತು ಮೌಲ್ಯವನ್ನು ಉಳಿಸಿಕೊಳ್ಳಬೇಕಾದರೆ ಅದನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿಡಬೇಕು. ಮಹಿಳೆಯರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಹಾಗೂ ಬೃಹತ್ ವಿನಾಶಕ್ಕೆ ಹಾದಿಯಾಗುತ್ತದೆ ಎಂದು ಅವರು ಹೇಳಿದ್ದರು.
ಇದು ಮಹಿಳೆಯರನ್ನು ಕೀಳಾಗಿ ಕಾಣುವ ವಿಷಯವಲ್ಲ, ಬದಲಿಗೆ ಅವರಿಗೆ ಗೌರವ ಮತ್ತು ರಕ್ಷಣೆ ನೀಡುವ ಮಾರ್ಗ. 'ಸಮಸ್ತ' ಸಂಘಟನೆಯ ಸುನ್ನಿ ಧಾರ್ಮಿಕ ಪಂಡಿತರು ಕಳೆದ 100 ವರ್ಷಗಳಿಂದ ಇದನ್ನೇ ಬೋಧಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದರು.
ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದರೂ, ಅದನ್ನು ಹಿಂಪಡೆಯಲು ಕಾಂತಪುರಂ ನಿರಾಕರಿಸಿದ್ದಾರೆ. ನಾವು ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದೇವೆ. ಆದ್ದರಿಂದ ಮುಸ್ಲಿಂ ಸಮುದಾಯಕ್ಕೆ ಇದರ ಬೋಧನೆಗಳನ್ನು ತಿಳಿಸುವುದು ನಮ್ಮ ಕರ್ತವ್ಯ. ನಾವು ಇದನ್ನು ಹೇಳುತ್ತಿದ್ದೇವೆ ಮತ್ತು ಹೇಳುತ್ತಲೇ ಇರುತ್ತೇವೆ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಮಲಬಾರ್ ಭಾಗದ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಓಣಂ ಆಚರಣೆಯಲ್ಲಿ ಭಾಗವಹಿಸಿದ ವಿಡಿಯೋಗಳು ವೈರಲ್ ಆಗಿದ್ದವು. ಅಲ್ಲದೆ, 'ಮಿಲಾದ್-ಎ-ಷರೀಫ್' ಕಾರ್ಯಕ್ರಮಗಳಲ್ಲೂ ಮಹಿಳೆಯರು ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಕಾಂತಪುರಂ ಬಣದ 'ಸಮಸ್ತ' ಸಂಘಟನೆಯು, "ಮಹಲ್, ಮಸೀದಿ ಮತ್ತು ಮದರಸಾ ಆಡಳಿತ ಮಂಡಳಿಗಳು ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಸಾರ್ವಜನಿಕ ವೇದಿಕೆಗಳಲ್ಲಿ ಅಥವಾ ಪರ ಪುರುಷರ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು," ಎಂದು ಫರ್ಮಾನು ಹೊರಡಿಸಿತ್ತು. ಇದರ ಬೆನ್ನಲ್ಲೇ ಈ ದೊಡ್ಡ ವಿವಾದ ಭುಗಿಲೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ