ರಾಮಮಂದಿರಕ್ಕೆ ಶಂಕುಸ್ಥಾಪನೆ: ಮುಸ್ಲಿಮರಿಂದಲೂ ಸಂಭ್ರಮಾಚರಣೆ!

By Suvarna NewsFirst Published Jul 28, 2020, 10:00 AM IST
Highlights

ಆ.5ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ| ಮುಸ್ಲಿಮರಿಂದಲೂ ಸಂಭ್ರಮಾಚರಣೆಗೆ ನಿರ್ಧಾರ| ಬೇರೆ ಬೇರೆ ರಾಜ್ಯಗಳಿಂದ ಮುಸ್ಲಿಂ ಭಕ್ತರು ಇಟ್ಟಿಗೆಗಳೊಂದಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ

ಅಯೋಧ್ಯೆ(ಜು.28: ಆ.5ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರುವ ವೇಳೆ ಸಂಭ್ರಮಾಚರಣೆ ನಡೆಸಲು ಮುಸ್ಲಿಮರು ಕೂಡ ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯ ಮುಸ್ಲಿಮರು (ಇದೇ ಜಿಲ್ಲೆಯಲ್ಲಿ ಅಯೋಧ್ಯೆಯಿದೆ) ಅಂದು ಹಿಂದುಗಳೊಂದಿಗೆ ಸೇರಿ ಸಂಭ್ರಮಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಂದು ಬೇರೆ ಬೇರೆ ರಾಜ್ಯಗಳಿಂದ ಮುಸ್ಲಿಂ ಭಕ್ತರು ಇಟ್ಟಿಗೆಗಳೊಂದಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದೂ ಹೇಳಿದ್ದಾರೆ.

‘ನಾವು ಇಸ್ಲಾಂಗೆ ಮತಾಂತರ ಹೊಂದಿದ್ದರೂ ನಮ್ಮ ಪೂರ್ವಜರು ಹಿಂದುಗಳೇ ಆಗಿದ್ದಾರೆ. ನಮ್ಮ ಪ್ರಾರ್ಥನಾ ಶೈಲಿ ಬದಲಾಗಿದ್ದರೂ ನಮ್ಮ ಮೂಲ ಬದಲಿಸಲು ಸಾಧ್ಯವಿಲ್ಲ. ಭಗವಾನ್‌ ರಾಮನೇ ನಮ್ಮ ಪೂರ್ವಜ ಎಂದು ನಾವು ನಂಬಿದ್ದೇವೆ. ಈಗ ರಾಮಮಂದಿರದ ನಿರ್ಮಾಣವನ್ನು ನಮ್ಮ ಕಣ್ಣಾರೆ ನೋಡುವ ಭಾಗ್ಯ ದೊರೆತಿರುವುದು ಬಹಳ ಖುಷಿ ತಂದಿದೆ ಎಂದಿದ್ದಾರೆ.

ಅಲ್ಲದೇ ಭಾರತದ ಮುಸ್ಲಿಮರು ಶ್ರೀರಾಮನನ್ನು ‘ಇಮಾಮ್‌-ಎ-ಹಿಂದ್‌’ ಎಂದು ಪರಿಗಣಿಸಿದ್ದಾರೆ’ ಎಂದು ಫೈಜಾಬಾದ್‌ನ ಜಮ್ಷೆಡ್‌ ಖಾನ್‌, ವಾಸಿ ಹೈದರ್‌, ರಶೀದ್‌ ಅನ್ಸಾರಿ ಮುಂತಾದವರು ಹೇಳಿದ್ದಾರೆ.

click me!