ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ!

By Suvarna NewsFirst Published Jul 28, 2020, 9:32 AM IST
Highlights

ಅರ್ಧಕ್ಕಿಂತ ಹೆಚ್ಚು ಭಾರತೀಯ ನೌಕರರ ವಜಾಕ್ಕೆ ಹುವೈ ನಿರ್ಧಾರ| ಕಂಪನಿಯ ಈ ವರ್ಷದ ಆದಾಯದ ಗುರಿ ಶೇ.50 ಇಳಿಕೆ| ಆರ್ಥಿಕ ಸಮರ: ಚೀನಾ ಕಂಪನಿಗೆ ಭಾರತದಲ್ಲಿ ಭಾರಿ ನಷ್ಟ

ನವದೆಹಲಿ(ಜು.28): ಗಡಿ ಸಂಘರ್ಷದ ಬಳಿಕ ಚೀನಾದ ವಿರುದ್ಧ ಭಾರತ ಆರಂಭಿಸಿರುವ ಆರ್ಥಿಕ ಸಮರದಿಂದಾಗಿ ಚೀನಾ ಮೂಲದ ಟೆಲಿಕಾಂ ಉಪಕರಣಗಳ ತಯಾರಕ ಕಂಪನಿಯಾದ ಹುವೈಗೆ ಭಾರತದಲ್ಲಿ ಭಾರಿ ನಷ್ಟಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಶೇ.60ರಿಂದ ಶೇ.70ರಷ್ಟುನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ. ಅಲ್ಲದೆ, 2020ರಲ್ಲಿ ಭಾರತೀಯ ವ್ಯವಹಾರಗಳಿಂದ ತನಗೆ ಬರಲಿರುವ ಆದಾಯದ ಗುರಿಯನ್ನೂ ಕಂಪನಿ ಶೇ.50ರಷ್ಟುತಗ್ಗಿಸಿದೆ.

ಚೀನಾ ವಿರೋಧಿ ಅಲೆಯಿಂದ ಹುವೈ ಕಂಪನಿಗೆ ಬಿತ್ತು ಹೊಡೆತ; ಆದಾಯ ಗಣನೀಯ ಕುಸಿತ!

ಚೀನಾ ಮೂಲದ ಬೃಹತ್‌ ಟೆಲಿಕಾಂ ಉಪಕರಣಗಳ ಪೂರೈಕೆದಾರ ಕಂಪನಿಗಳಾದ ಹುವೈ ಹಾಗೂ ಜಡ್‌ಟಿಇ ಚೀನಾದ ಸೇನೆ ಹಾಗೂ ಅಲ್ಲಿನ ಸರ್ಕಾರದ ಜೊತೆಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಕ್ಕೆ ಭಾರತ, ಅಮೆರಿಕ, ಬ್ರಿಟನ್‌ ಸೇರಿದಂತೆ ಅನೇಕ ದೇಶಗಳು ಈ ಕಂಪನಿಗಳಿಂದ ಉಪಕರಣ ಖರೀದಿಸುವುದನ್ನು ನಿಲ್ಲಿಸಿವೆ. ಭಾರತ ಸರ್ಕಾರವಂತೂ ತನ್ನೆಲ್ಲಾ ಇಲಾಖೆಗಳಿಗೆ ಈ ಕಂಪನಿಗಳ ಉಪಕರಣ ಖರೀದಿಯನ್ನು ನಿಷೇಧಿಸಿದೆ. ಈಗ ಹುವೈಗೆ ಭಾರತದಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಮಾತ್ರ ಪ್ರಮುಖ ಗ್ರಾಹಕರಾಗಿದ್ದು, ಅವೂ ಹೊಸತಾಗಿ ಯಾವುದೇ ಆರ್ಡರ್‌ ನೀಡುತ್ತಿಲ್ಲ. ಹೀಗಾಗಿ ಭಾರತದಲ್ಲಿರುವ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಹೊರತುಪಡಿಸಿ ಇನ್ನೆಲ್ಲಾ ಕಚೇರಿಗಳಲ್ಲೂ ಅರ್ಧಕ್ಕಿಂತ ಹೆಚ್ಚು ನೌಕರರನ್ನು ವಜಾಗೊಳಿಸಲು ಹುವೈ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್‌ ಸರ್ಕಾರ ನಿಷೇಧ!

ಭಾರತದಲ್ಲಿ ಹುವೈ ಕಂಪನಿಯ ನೇರ ನೌಕರರಾಗಿ ಸುಮಾರು 700 ಮಂದಿ ಹಾಗೂ ಗುತ್ತಿಗೆ, ಫೀಲ್ಡ್‌ ಸಪೋರ್ಟ್‌, ಮಾರಾಟ ಮುಂತಾದ ವಿಭಾಗಗಳಲ್ಲಿ ಸಾವಿರಾರು ನೌಕರರಿದ್ದಾರೆ. ಇವರಲ್ಲಿ ಅರ್ಧದಷ್ಟುಜನರು ಕೆಲಸ ಕಳೆದುಕೊಳ್ಳಲಿದ್ದಾರೆ. ಇನ್ನೊಂದು ಕಂಪನಿಯಾದ ಜಡ್‌ಟಿಇ ಈಗಾಗಲೇ ಭಾರತದಲ್ಲಿರುವ ತನ್ನ 600ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದೆ.

click me!