ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕೂದಲಿಗೆ ಅಪರಿಚಿತ ವ್ಯಕ್ತಿ ಕತ್ತರಿ ಹಾಕಿದ್ದಾನೆ.
ರೈಲು ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕೂದಲಿಗೆ ಅಪರಿಚಿತ ವ್ಯಕ್ತಿಗಳು ಯಾರೋ ಕತ್ತರಿ ಹಾಕಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಬೆಚ್ಚಿ ಬೀಳುವ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ರೈಲಲ್ಲಿ ಅಥವಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದಂತಹ ಘಟನೆಗಳನ್ನು ನೀವು ನೋಡಿರಬಹುದು, ಲಗೇಜ್ ಕೂಡ ಕಳ್ಳರ ಪಾಲಾದಂತಹ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿದೆ. ಆದರೆ ಇಲ್ಲಿ ಯುವತಿಯ ತಲೆ ಕೂದಲಿಗೆ ಕತ್ತರಿ ಹಾಕಲಾಗಿದೆ.
ಕೂದಲು ಕಳೆದುಕೊಂಡ ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಈಕೆ ಮುಂಬೈನಲ್ಲಿ ಮಹಿಳೆಯರಿಗೆ ಮೀಸಲಾದ ಸ್ಪೇಷಲ್ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ದಾದರ್ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನಿಂದ ಇಳಿದ ಆಕೆಯ ಮುಂದೆ ನಡೆದು ಹೋಗುತ್ತಿದ್ದಾಗಲೇ ಆಕೆಯ ಕೂದಲಿಗೆ ಕತ್ತರಿ ಬಿದ್ದಿದೆ. ಆಕೆಗೆ ವಿಚಯ ತಿಳಿಯುವುದಕ್ಕೂ ಮೊದಲು ವ್ಯಕ್ತಿ ಆಕೆಯ ಕೂದಲನ್ನು ಕತ್ತರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಘಟನೆ 2017ರ ಹಿಂದಿ ಸಿನಿಮಾ 'ಚೋಟಿ ಕತ್ವಾ'ವನ್ನು ನೆನಪಿಸುತ್ತಿದೆ. ಇದು ಹರ್ಯಾಣ, ದೆಹಲಿ, ರಾಜಸ್ತಾನ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ವರದಿಯಾಗಿರುವ ಅಪರಿಚಿತರು ಮಹಿಳೆಯರ ಕೂದಲನ್ನು ನಿಗೂಢವಾಗಿ ಕತ್ತರಿಸುವ ಘಟನೆಯನ್ನು ಆಧರಿಸಿದೆ.
ಕೂದಲಿಗೆ ಹೀಗೆ ಕತ್ತರಿ ಬಿದ್ದ ಯುವತಿಯೂ ಮುಂಬೈನ ಕಲ್ಯಾಣದಿಂದ ಮತುಂಗಾ ರಸ್ತೆಯತ್ತ ಮಹಿಳೆಯರಿಗೆ ಮೀಸಲಾದ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಬೆಳಗ್ಗೆ 9. 29ಕ್ಕೆ ಆಕೆ ದಾದರ್ ರೈಲು ನಿಲ್ದಾಣವನ್ನು ತಲುಪಿದ್ದು, ರೈಲ್ವೆ ನಿಲ್ದಾಣದಲ್ಲಿರುವ ಬ್ರಿಡ್ಜ್ ಮೂಲಕ ಆಕೆ ವೆಸ್ಟರ್ನ್ ರೈಲ್ವೆಯತ್ತ ಪ್ರಯಾಣಿಸುತ್ತಿದ್ದಳು ಎಂದು ವರದಿಯಾಗಿದೆ.
ಘಟನೆಯನ್ನು ಕೂಡಲೇ ಯುವತಿ ಸರ್ಕಾರಿ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾಳೆ. ತಾನು ರೈಲ್ವೆಯ ಬುಕ್ಕಿಂಗ್ ಸೆಂಟರ್ ಸಮೀಪ ಹಾದು ಹೋಗುತ್ತಿದ್ದಾಗ ಏನೋ ಮೊನಚಾದ ವಸ್ತು ನನ್ನ ಸ್ಪರ್ಶಿಸಿದಂತೆ ಭಾಸವಾಯ್ತು. ಈ ವೇಳೆ ತಿರುಗಿ ನೋಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಗ್‌ನೊಂದಿಗೆ ಅಲ್ಲಿಂದ ವೇಗವಾಗಿ ಹೊರಟು ಹೋದ. ಇದಾಗಿ ಕೆಲ ಕ್ಷಣದಲ್ಲಿ ಸುತ್ತಲೂ ನೋಡಿದಾಗ ಅಲ್ಲಿ ನೆಲದ ಮೇಲೆ ಕತ್ತರಿಸಲ್ಪಟ್ಟ ಕೂದಲುಗಳು ಬಿದ್ದಿದ್ದವು ಈ ವೇಳೆ ಪರಿಶೀಲಿಸಿದಾಗ ತನ್ನದೇ ತಲೆ ಕೂದಲಿನ ಅರ್ಧ ಭಾಗ ಕತ್ತರಿಸಲ್ಪಟ್ಟಿತ್ತು ಎಂದು ಯುವತಿ ಹೇಳಿದ್ದಾರೆ.
ರೈಲ್ವೆ ಪೊಲೀಸರು ಆಕೆಗೆ ಸಿಸಿಟಿವಿ ದೃಶ್ಯಾವಳಿಯನ್ನು ತೋರಿಸಿದ್ದು, ಎಫ್‌ಐಆರ್ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ನಂತರ ಯುವತಿ ಮುಂಬೈ ಸೆಂಟ್ರಲ್‌ನ ಜಿಆರ್‌ಪಿಗೆ ತೆರಳಿ ದೂರು ದಾಖಲಿಸಿದ್ದಾಳೆ. ಇದಾದ ನಂತರ ಅನುಮಾನದ ಮೇರೆಗ ಅಪರಿಚಿತ ವ್ಯಕ್ತಿಯೊರ್ವನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.