ಇನ್ಮುಂದೆ ಎಕ್ಸ್‌ಪ್ರೆಸ್‌ವೇಗಳಲ್ಲಿ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದಂತೆ ಗಡ್ಕರಿ ಆದೇಶ

Published : Oct 29, 2026, 01:03 PM IST
Nitin Gadkari

ಸಾರಾಂಶ

ಎಕ್ಸ್‌ಪ್ರೆಸ್‌ವೇಗಳಲ್ಲಿ ನಿಗದಿತ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಿಸಿದರೂ ದಂಡ ವಿಧಿಸದಂತೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಂಚಾರ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲು ಕರೆ ನೀಡಿದ್ದಾರೆ. ಅಲ್ಲದೆ, E20 ಇಂಧನದ ವಿರುದ್ಧದ ಟೀಕೆಗಳನ್ನು ಅವರು ತಳ್ಳಿಹಾಕಿದ್ದಾರೆ.

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಎಕ್ಸ್‌ಪ್ರೆಸ್‌ವೇಗಳಲ್ಲಿ ಇನ್ಮುಂದೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸಿದಂತೆ ಆದೇಶಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ, ರಸ್ತೆಗಳಲ್ಲಿ ನಿಗದಿ ಪಡಿಸಿರುವ ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಾಯಿಸಿದರೂ ಚಲನ್‌ ಜಾರಿಮಾಡಬಾರದು. ಅದಕ್ಕಿಂತ ಹೆಚ್ಚಿನ ವೇಗ ಮೀರಿದರೆ ಚಲನ್‌ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ವಲ್ಪ ವೇಗದಲ್ಲಿಯೂ ಚಲಿಸಿದರೂ ದಂಡ ಬೀಳುವ ಆತಂಕದಲ್ಲಿ ವಾಹನ ಸವಾರರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.

ಭಾರತೀಯ ಉದ್ಯಮ ಒಕ್ಕೂಟ ಆಯೋಜಿಸಿದ್ದ ಭಾರತೀಯ ಹೆದ್ದಾರಿಗಳ ಭವಿಷ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಸಂಚಾರ ನಿಯಮ ಮತ್ತು ವೇಗದ ಮಿತಿ ಜಾರಿ ಕುರಿತು ಪ್ರಮುಖ ಸ್ಪಷ್ಟನೆಗಳನ್ನು ನೀಡಿದರು.

ವೇಗದ ಮಿತಿಯಲ್ಲಿ ಶೇ. 20ರಷ್ಟು ವಿನಾಯಿತಿ

ವೇಗದ ಮಿತಿಯ ಕುರಿತು ಉದ್ಭವಿಸುತ್ತಿರುವ ದೂರುಗಳ ಕುರಿತು ಪ್ರಸ್ತಾಪಿಸಿದ ಗಡ್ಕರಿ, "ಸಾಮಾನ್ಯವಾಗಿ ಸ್ವಲ್ಪ ವೇಗ ಹೆಚ್ಚಾದರೂ ವಾಹನ ಸವಾರರಿಗೆ ನೋಟಿಸ್ ಅಥವಾ ಚಲನ್ ತಲುಪುತ್ತಿವೆ. ಹೀಗಾಗಿ 120 ಕಿ.ಮೀ ವೇಗದವರೆಗಿನ ಸಂಚಾರಕ್ಕೆ ಯಾವುದೇ ನೋಟಿಸ್‌ಗಳನ್ನು ಕಳುಹಿಸದಂತೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಒಂದು ವೇಳೆ ನಿಗದಿತ ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚುವರಿ ವೇಗದಲ್ಲಿದ್ದರೂ ವಿನಾಯಿತಿ ನೀಡಬೇಕು. ಆದರೆ, ಈ ಮಿತಿಯನ್ನೂ ಮೀರಿ ಅತಿವೇಗದಿಂದ ಚಲಿಸುವ ವಾಹನಗಳಿಗೆ ಮಾತ್ರ ಸೂಕ್ತ ಚಲನ್ ಜಾರಿಗೊಳಿಸಿ ಎಂದು ಸ್ಪಷ್ಟಪಡಿಸಿದರು. ಸಚಿವರ ಈ ನಿರ್ಧಾರದಿಂದಾಗಿ ದಂಡದ ಆತಂಕದಲ್ಲಿದ್ದ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ಸಂಚಾರ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ದೇಶಾದ್ಯಂತ ಹೆದ್ದಾರಿ ಜಾಲವು ವೇಗವಾಗಿ ವಿಸ್ತರಿಸುತ್ತಿದ್ದು, ಸಂಚಾರ ನಿರ್ವಹಣೆಯನ್ನು ಆಧುನೀಕರಿಸಲು ಕೃತಕ ಬುದ್ಧಿಮತ್ತೆ ಆಧಾರಿತ 'ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್' ಜಾರಿಗೆ ತರಲು ಸಚಿವರು ಕರೆ ನೀಡಿದರು.

ಈ ತಂತ್ರಜ್ಞಾನದ ಬಳಕೆಯಿಂದ:

  • ಲೇನ್ ಶಿಸ್ತು ಉಲ್ಲಂಘಿಸುವ ವಾಹನಗಳನ್ನು ಸುಲಭವಾಗಿ ಗುರುತಿಸಬಹುದು.
  • ನಿಯಮ ಉಲ್ಲಂಘನೆಗಳನ್ನು ನಿಖರವಾಗಿ ಪತ್ತೆಹಚ್ಚಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಬಹುದು.
  • ತಂತ್ರಜ್ಞಾನದ ನೆರವಿನಿಂದ ಮಾನವ ಹಸ್ತಕ್ಷೇಪವಿಲ್ಲದೆ ಪಾರದರ್ಶಕವಾಗಿ ಸಂಚಾರ ಮೇಲ್ವಿಚಾರಣೆ ನಡೆಸಬಹುದು.

E20 ಇಂಧನದ ವಿರುದ್ಧದ ಟೀಕೆ ಪಾವತಿಸಿದ ಪ್ರಚಾರ: ಗಡ್ಕರಿ

ಇದೇ ವೇಳೆ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ಯೋಜನೆಯ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳನ್ನು ಗಡ್ಕರಿ ತೀವ್ರವಾಗಿ ಖಂಡಿಸಿದರು. ಇವುಗಳನ್ನು ಪಾವತಿಸಿದ ಪ್ರಚಾರ ಎಂದು ಬಣ್ಣಿಸಿದ ಅವರು, ಇಂಧನ ಮಿಶ್ರಣದ ಯಶಸ್ಸಿನ ಅಂಕಿ ಅಂಶಗಳನ್ನು ಹಂಚಿಕೊಂಡರು.

2022 ರಿಂದ ದೇಶದಲ್ಲಿ ಸುಮಾರು 4 ಕೋಟಿ ಕಾರುಗಳು ಹಾಗೂ 20 ಕೋಟಿ ದ್ವಿಚಕ್ರ ವಾಹನಗಳು E20 ಇಂಧನದಲ್ಲೇ ಸುಸೂತ್ರವಾಗಿ ಸಂಚರಿಸುತ್ತಿವೆ. ಕೆಲ ತಿಂಗಳ ಹಿಂದೆ ಎಥೆನಾಲ್ ಕುರಿತು ಅನಗತ್ಯ ಗೊಂದಲ ಸೃಷ್ಟಿಸಲಾಯಿತು. E20 ಬಳಕೆಯಿಂದ ಯಾವುದೇ ವಾಹನಗಳು ಹಾಳಾಗಿಲ್ಲ. ಹೀಗಾಗಿ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬೇಕಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಸೆವ ಎಣ್ಣೆಯಿಂದಲೇ ಉದ್ಯೋಗ ಸೃಷ್ಟಿ! ಬೆಂಗಳೂರಿಗರ ಅದ್ಭುತ ಸಾಧನೆ: ಇಂಧನ ಭದ್ರತೆಗೆ ಇವರೇ ರೂವಾರಿ
Nagpur MLC Election results: ಬಿಜೆಪಿ ಮಾಡಿದ ಈ 5 ತಪ್ಪುಗಳಿಂದಲೇ ಆರೆಸ್ಸೆಸ್ ಭದ್ರಕೋಟೆಯಲ್ಲೇ ಕಾಂಗ್ರೆಸ್ ಗೆಲುವು!