ದಾಖಲೆಯ ಮಳೆ: ಮುಂಗಾರಲ್ಲಿ ಮುಳುಗಿದ ಭಾರತ..!

By Kannadaprabha News  |  First Published Aug 7, 2020, 10:04 AM IST

ಮಹಾರಾಷ್ಟ್ರ, ತಮಿಳುನಾಡು, ಕೇರಳ, ಬಿಹಾರ, ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಕೊರೋನಾ ಸಂಕಟದ ನಡುವೆ ವರುಣನ ಅವಕೃಪೆಗೆ ಜನರು ತುತ್ತಾಗಿದ್ದಾರೆ. ಅದರಲ್ಲೂ ಮುಂಬೈನಲ್ಲಿ 44 ವರ್ಷಗಳ ಬಳಿಕ ದಾಖಲೆಯ ಮಳೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ(ಆ.07): ಕೊರೋನಾ ಸೋಂಕಿನಿಂದ ತತ್ತರಿಸಿದ್ದ ದೇಶದ ಹಲವು ರಾಜ್ಯಗಳಲ್ಲಿ ಇದೀಗ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಬಿಹಾರ, ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಭೂಕುಸಿತ ಕೂಡಾ ಸಂಭವಿಸಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿರುವ ಕಾರಣ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಅದರಲ್ಲೂ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಸುತ್ತಮುತ್ತಲಿನ ನಗರಗಳು ಅಕ್ಷರಶಃ ಬೆಚ್ಚಿಬಿದ್ದಿವೆ. ಗೇಟ್‌ವೇ ಆಫ್‌ ಇಂಡಿಯಾ ಪ್ರದೇಶವನ್ನು ಒಳಗೊಂಡಿರುವ ಮುಂಬೈನ ಕೊಲಾಬದಲ್ಲಿ 24 ಗಂಟೆಯಲ್ಲಿ 331.8ರಷ್ಟುಮಳೆ ಸುರಿದಿದೆ. ಇದು ಕಳೆದ 46 ವರ್ಷಗಳಲ್ಲೇ ಆಗಸ್ಟ್‌ ತಿಂಗಳಿನಲ್ಲಿ ಒಂದು ದಿನದಲ್ಲಿ ಸುರಿದ ದಾಖಲೆಯ ಮಳೆಯಾಗಿದೆ. ಇನ್ನು ಪೂರ್ವ ಉಪನಗರದಲ್ಲಿ 101.9 ಎಂ.ಎಂ ಹಾಗೂ ಪಶ್ಚಿಮ ಉಪನಗರಗಳಲ್ಲಿ 76.03ರಷ್ಟು ಮಳೆಯಾಗಿದೆ.

Latest Videos

undefined

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಕೇರಳದಲ್ಲಿ ರೆಡ್‌ ಅಲರ್ಟ್‌:

ದಕ್ಷಿಣದ ಕೇರಳದಲ್ಲೂ ಕಳೆದ 3-4 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ ಕೆಲ ಇಡುಕ್ಕಿ ಹಾಗೂ ವಯನಾಡ್‌ನಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜೊತೆಗೆ, ಎರ್ನಾಕುಲಂ, ತ್ರಿಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು, ಕಾಸರಗೋಡಿನಲ್ಲಿ ಮುಂದಿನ 3 ದಿನ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡು ತತ್ತರ:

ತಮಿಳುನಾಡಿನ ಹಲವೆಡೆ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಇಲ್ಲಿನ ನೀಲ್‌ಗಿರೀಸ್‌ ಜಿಲ್ಲೆಯ ಉಪ್ಪರ್‌ ಭವಾನಿ ಹಾಗೂ ಅವಲಂಚಿ ಗ್ರಾಮದಲ್ಲಿ ಕ್ರಮವಾಗಿ ಸರಾಸರಿ 31 ಎಂ.ಎಂ ಹಾಗೂ 39 ಎಂ.ಎಂ ಮಳೆಯಾಗಿದೆ ಎಂದು ಸ್ಥಳೀಯ ಐಎಂಡಿ ಕಚೇರಿ ತಿಳಿಸಿದೆ.

ಇತರೆಡೆಯೂ ಭಾರೀ ಮಳೆ: ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ ಸೇರಿದಂತೆ ಇತರೆ ಹಲವು ರಾಜ್ಯಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅಲ್ಲದೆ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಿನ್ನೆಯ ಟಾಪ್‌ 8 ಮಳೆ ಬಿದ್ದ ನಗರ

ಸ್ಥಳ ಮಳೆ ಪ್ರಮಾಣ

ಮುಂಬೈ(ಮಹಾರಾಷ್ಟ್ರ) 332 ಎಂಎಂ

ಮಥಾರನ್‌(ಮಹಾರಾಷ್ಟ್ರ) 214 ಎಂಎಂ

ಮಹಾಬಲೇಶ್ವರ(ಮಹಾರಾಷ್ಟ್ರ) 187 ಎಂಎಂ

ಹರ್ನಾಯ್‌(ಮಹಾರಾಷ್ಟ್ರ) 144 ಎಂಎಂ

ಹೋಶಿಂಗಾಬಾದ್‌(ಮಧ್ಯಪ್ರದೇಶ) 115 ಎಂಎಂ

ಡಾರ್ಜಿಲಿಂಗ್‌(ಪಶ್ಚಿಮ ಬಂಗಾಳ) 99 ಎಂಎಂ

ಬೆಳಗಾವಿ(ಕರ್ನಾಟಕ) 92 ಎಂಎಂ

click me!