ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್‌ ಮೋದಿ ಮನವಿ

By Kannadaprabha News  |  First Published May 15, 2020, 11:15 AM IST

ಭಾರತದ ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ನೀರವ್ ಮೋದಿ ಭಾರತದ ಜೈಲುಗಳ ಮೇಲೆ ಗೂಬೆ ಕೂರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  


ಲಂಡನ್(ಮೇ.15)‌: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ, ಇದೀಗ ಭಾರತದ ಜೈಲುಗಳನ್ನು ಟೀಕಿಸುವ ಮೂಲಕ ಗಡೀಪಾರು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. 

ಗುರುವಾರ ನಡೆದ ಗಡೀಪಾರು ವಿಚಾರಣೆ ವೇಳೆ, ‘ತನ್ನನ್ನು ಬಂಧಿಸಿಡಲು ನಿರ್ಧರಿಸಿರುವ ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿ ಇಲಿ, ಕೀಟಗಳ ಹಾವಳಿ ಇದೆ. ಜೊತೆಗೆ ಜೈಲಿನ ಪಕ್ಕದಲ್ಲೇ ಇರುವ ಮೋರಿಯನ್ನು ಮುಚ್ಚಲಾಗಿಲ್ಲ. ಅದರಿಂದ ಕೆಟ್ಟವಾಸನೆ ಬರುತ್ತದೆ. ಅಲ್ಲದೆ ಪಕ್ಕದಲ್ಲೇ ಇರುವ ಕೊಳಚೆ ಪ್ರದೇಶಗಳಿಂದ ಗದ್ದಲ ಬರುತ್ತದೆ. ಇದೆಲ್ಲಾ ಕೈದಿಯೊಬ್ಬನ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹೀಗಾಗಿ ತನ್ನನ್ನು ಭಾರತಕ್ಕೆ ಗಡೀಪಾರು ಮಾಡಬಾರದು’ ಎಂದು ಕೋರಿದ್ದಾನೆ. ಈ ಹಿಂದೆ ಮತ್ತೋರ್ವ ಉದ್ಯಮಿ ವಿಜಯ್‌ ಮಲ್ಯ ಕೂಡ ಇದೇ ರೀತಿಯ ವಾದ ಮಾಡಿದ್ದನಾದರೂ, ಅದನ್ನು ಕೋರ್ಟ್‌ ತಿರಸ್ಕರಿಸಿತ್ತು.

Latest Videos

ಸಿಬಿಐ ವಾದ ಭಾರತದ ಕೋರ್ಟ್‌ಲ್ಲಿ ನಿಲ್ಲಲ್ಲ: ಮಾಜಿ ಜಡ್ಜ್‌ ಹೇಳಿಕೆ

ಲಂಡನ್‌: ನೀರವ್‌ ಮೋದಿ ವಿರುದ್ಧ ಲಂಡನ್‌ ಕೋರ್ಟ್‌ನಲ್ಲಿ ಸಿಬಿಐ ಹೊರಿಸಿರುವ ಲೆಟರ್‌ ಆಫ್‌ ಅಂಡರ್‌ ಸ್ಟ್ಯಾಂಡಿಂಗ್‌ (ಎಲ್‌ಒಯು) ಆರೋಪಗಳು, ಭಾರತದ ಕೋರ್ಟ್‌ಗಳಲ್ಲಿ ಹೆಚ್ಚಿನ ಮಾನ್ಯತೆ ಪಡೆಯುವುದಿಲ್ಲ. ಏಕೆಂದರೆ ಯಾವುದೇ ವ್ಯಕ್ತಿ ವಂಚನೆಗೆ ಒಳಗಾಗದ ಹೊರತೂ ಅದನ್ನು ಭಾರತದ ಕೋರ್ಟ್‌ಗಳು ವಂಚನೆ ಎಂದು ಪರಿಗಣಿಸಲಾರವು ಎಂದು ಬಾಂಬೆ ಹೈಕೋರ್ಟ್‌ನ ನಿವೃತ್ತ ಜಡ್ಜ್‌ ಅಭಯ್‌ ತಿಪ್ಸೆ ಹೇಳಿದ್ದಾರೆ. 

ತಿಂಗಳ ಒಳಗೆ ಬ್ರಿಟನ್‌ನಿಂದ ಮಲ್ಯ ಗಡೀಪಾರು ಸಂಭವ..!

ಗುರುವಾರ ನೀರವ್‌ ಮೋದಿ ವಿಚಾರಣೆ ವೇಳೆ ಲಂಡನ್‌ ಕೋರ್ಟ್‌ಗೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಹಾಜರಾಗಿದ್ದ ನ್ಯಾ. ತಿಪ್ಸೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್‌ನ ಸೂಚನೆ ಅನ್ವಯ ನಿವೃತ್ತ ಜಡ್ಜ್‌, ಬ್ರಿಟನ್‌ನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವ ಯತ್ನ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿಕಾರಿದ್ದಾರೆ.
 

click me!