ಹೀಗಿರಲಿದೆ ದೇಶದ ಮೊದಲ ಬುಲೆಟ್ ರೈಲು| ಮೊದಲ ಬುಲೆಟ್ ರೈಲಿನ ಚೊಚ್ಚಲ ಫೋಟೋ ಬಿಡುಗಡೆ
ನವದೆಹಲಿ(ಡಿ.20): ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಜಪಾನ್ ಬುಲೆಟ್ ರೈಲಿನ ಸುಧಾರಿತ ಬೋಗಿ- ಎಂಜಿನ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಜಪಾನ್ ರಾಯಭಾರ ಕಚೇರಿ ತಿಳಿಸಿದೆ.
ಈ ಸಂಬಂಧ ಜಪಾನ್ ಬುಲೆಟ್ ರೈಲು ಇ5 ಸರಣಿಯ ಶಿಂಕಾನ್ಸೆನ್‌ನ ಫೋಟೋಗಳನ್ನು ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ ಹಂಚಿಕೊಂಡಿದೆ. ಇದರಿಂದಾಗಿ ಭಾರತದ ಮೊದಲ ಬುಲೆಟ್ ರೈಲು ಹೇಗಿರಲಿದೆ ಎಂಬ ಪರಿಕಲ್ಪನೆ ಜನರಿಗೆ ಲಭ್ಯವಾದಂತಾಗಿದೆ.
ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲು ಮಾರ್ಗ 508 ಕಿ.ಮೀ. ಉದ್ದವಿದೆ. ಯೋಜನೆಯ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಜಪಾನ್ ಸರ್ಕಾರದ ಹಣಕಾಸು ಮತ್ತು ತಾಂತ್ರಿಕ ನೆರವು ಇದೆ. 1.08 ಲಕ್ಷ ಕೋಟಿ ರು. ವೆಚ್ಚದ ಮುಂಬೈ- ಅಹಮದಾಬಾದ್ ರೈಲು ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.